BPL: ರಾಜ್ಯದ ಬಿಪಿಎಲ್ ಕಾರ್ಡ್‌ದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಆಹಾರ ಸಚಿವ ಕೆಎಚ್ ಮುನಿಯಪ್ಪ
BPL: ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾಹಿಸುವ ಕಾರ್ಯ ನಡೆಯುತ್ತಿದೆ. ಈ ನಡುವೆಯೇ ಈ ಪಡಿತರ ಚೀಟಿಗಾರರಿಗೆ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಗುಡ್‌ನ್ಯೂಸ್‌ವೊಂದನ್ನು ನೀಡಿದ್ದಾರೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಬಿಪಿಎಲ್ ಕಾರ್ಡ್ ಪರಿಶೀಲನೆ ಸಂಬಂಧ ಮಹತ್ವದ ಹೇಳಿಕೆ ನೀಡಿದ್ದಾರೆ. ಕುಟುಂಬದ ಮಕ್ಕಳು ಬೇರೆ ಕಡೆ ಉದ್ಯೋಗ ಮಾಡಿಕೊಂಡು ಆದಾಯ ತೆರಿಗೆ ಪಾವತಿಸುತ್ತಿದ್ದರೂ, ತಂದೆ-ತಾಯಿಗೆ ಬಿಪಿಎಲ್ ಕಾರ್ಡ್ ನೀಡಬಹುದಾಗಿದೆ. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿಪಿಎಲ್ ಕಾರ್ಡ್ ಪರಿಶೀಲನೆ ಕುರಿತು ಮಹತ್ವದ ಮಾಹಿತಿ
ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ಕಾನೂನು ಮಾಪನ ಶಾಸ್ತ್ರ ಹಾಗೂ ಆಹಾರ ನಿಗಮ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಬಿಪಿಎಲ್ ಕಾರ್ಡ್ ಪರಿಶೀಲನೆ ವೇಳೆ ಮನೆ ಸಾಲ ಅಥವಾ ಬೈಕ್ ಸಾಲಕ್ಕಾಗಿ ಆದಾಯ ತೆರಿಗೆ ಪಾವತಿಸುವವರಿಗೆ ವಿನಾಯಿತಿ ನೀಡಬೇಕು. ದೀರ್ಘಕಾಲದಿಂದ ತೆರಿಗೆ ಪಾವತಿಸುತ್ತಿರುವವರ ಕಾರ್ಡ್‌ಗಳನ್ನು ಮಾತ್ರ ಎಪಿಎಲ್‌ಗೆ ಪರಿವರ್ತಿಸಬೇಕು ಎಂದು ಸೂಚನೆ ನೀಡಿದರು.
ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ನೀಡಲು ಸೂಚನೆ
ಹಾಸನ ಜಿಲ್ಲೆಯಲ್ಲಿ 2,396 ಬಿಪಿಎಲ್ ಕಾರ್ಡ್‌ಗಳು ಪರಿಷ್ಕರಣೆಯಲ್ಲಿದ್ದು, ಈಗಾಗಲೇ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತನೆಗೊಂಡಿರುವ ಪ್ರಕರಣಗಳಲ್ಲಿ ಅಗತ್ಯ ದಾಖಲೆಗಳನ್ನು ಪಡೆದು ಮರುಪರಿಶೀಲನೆ ನಡೆಸಿ ಅರ್ಹರಿಗೆ ಮತ್ತೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಸೂಚಿಸಿದರು. ಅಲ್ಲದೆ, 75 ವರ್ಷ ಮೇಲ್ಪಟ್ಟ ಒಬ್ಬೊಂಟಿ ಹಿರಿಯ ನಾಗರಿಕರು ಮಾತ್ರ ಇರುವ ಮನೆಗಳಿಗೆ ಅನ್ನಸುವಿಧಾ ಯೋಜನೆಯಡಿ ನ್ಯಾಯಬೆಲೆ ಅಂಗಡಿಯವರು ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಬೇಕು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ 75 ವರ್ಷ ಮೀರಿದ ಸುಮಾರು 15,000 ಮಂದಿ ಹಿರಿಯ ನಾಗರಿಕರಿದ್ದು, ಇವರಲ್ಲಿ 10,000 ಮಂದಿ ಮೊಬೈಲ್ ಇಲ್ಲದ ಕಾರಣ ಯೋಜನೆಯಿಂದ ವಂಚಿತರಾಗಿದ್ದಾರೆ. ಈಗಾಗಲೇ 2,750 ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆಯುತ್ತಿದ್ದು, ಇನ್ನೂ 2,112 ಜನರಿಗೆ ಮನೆ ಬಾಗಿಲಿಗೆ ಆಹಾರ ಪದಾರ್ಥ ತಲುಪಿಸಬೇಕಿದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚಿಸಿದರು.
ನ್ಯಾಯಬೆಲೆ ಅಂಗಡಿಗಳಿಂದ ಮನೆ ಬಾಗಿಲಿಗೆ ಪಡಿತರ ವಿತರಣೆ ಕಡ್ಡಾಯ ಆಗಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸುವಾಗ ಗುಣಮಟ್ಟ ಕಾಪಾಡಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರು ಬಗ್ಗೆ ಮಾಹಿತಿ
ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಸಂಘ ಸಂಸ್ಥೆಗಳು ಅಥವಾ ಖಾಸಗಿ ವ್ಯಕ್ತಿಗಳಿಗೆ ಮೀಸಲಾತಿ ನಿಯಮದಂತೆ ಆದ್ಯತೆ ನೀಡಬೇಕು. ಜಿಲ್ಲೆಗೆ 210 ನ್ಯಾಯಬೆಲೆ ಅಂಗಡಿಗಳು ಮಂಜೂರಾಗಿದ್ದು, ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶವೂ ಸೃಷ್ಟಿ ಆಗುತ್ತದೆ ಎಂದು ಹೇಳಿದರರು.
ಇದೇ ವೇಳೆ, ಸರ್ಕಾರ ಜಾರಿಗೊಳಿಸಿರುವ ಇಂದಿರಾ ಕಿಟ್ ಯೋಜನೆಯ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ತಿಂಗಳಲ್ಲಿ ಕಿಟ್ ವಿತರಣೆ ಆರಂಭ ಆಗಲಿದೆ. ಕಿಟ್‌ನಲ್ಲಿ ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ ಮತ್ತು ಉಪ್ಪು ಇರಲಿದ್ದು, ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಇಂದಿರಾ ಕಿಟ್‌ನಲ್ಲಿ ಏನೆಲ್ಲಾ ಇರಲಿದೆ?
* ಬೆಲ್ಲ
* ಸಕ್ಕರೆ
* ಅಡುಗೆ ಎಣ್ಣೆ
* ಉಪ್ಪು












Click it and Unblock the Notifications