Gold: ಬೆಂಗಳೂರು ಸಮೀಪವೇ ಮತ್ತೊಂದು ಕೆಜಿಎಫ್? ಗುಡಿಬಂಡೆ, ಕದಿರಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಗೆ ಹೆಲಿಕಾಪ್ಟರ್ ಸಮೀಕ್ಷೆ
ಚಿಕ್ಕಬಳ್ಳಾಪುರ: ಕೋಲಾರ ಚಿನ್ನದ ಗಣಿಯಿಂದ (ಕೆಜಿಎಫ್) ಒಂದು ಕಾಲದಲ್ಲಿ ಅಗಾಧವಾದ ಚಿನ್ನವನ್ನು ಹೊರತೆಗೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದೇ ಕೆಜಿಎಫ್ ಚಿನ್ನದ ಕುರಿತು ಹಿಟ್ ಸಿನಿಮಾ ಕೂಡ ಬಂದಿದೆ. ಇದೀಗ ಬೆಂಗಳೂರಿನ ಸಮೀಪದಲ್ಲೇ ಮತ್ತೊಂದು ಕೆಜಿಎಫ್ ಉದಯಿಸುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಇದಕ್ಕಾಗಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ಹೆಲಿಕಾಪ್ಟರ್ ಬಳಸಿ ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಬೆಂಗಳೂರಿಗೆ ಪಕ್ಕದಲ್ಲೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿನ್ನ ಹಾಗೂ ಇತರ ನಿಧಿ ನಿಕ್ಷೇಪಗಳ ಶೋಧ ಕಾರ್ಯ ಚುರುಕುಗೊಂಡಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಸಮೀಪ ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿದ್ದು, ಈ ಪ್ರದೇಶದಲ್ಲಿ ಹೊಸ ಚಿನ್ನದ ನಿಕ್ಷೇಪ ಪತ್ತೆಯಾಗುವ ನಿರೀಕ್ಷೆ ವ್ಯಕ್ತವಾಗುತ್ತಿದೆ. ಈ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ.

ಕೆಜಿಎಫ್ ಚಿನ್ನದ ಗಣಿಗಳ ಬೆಟ್ಟದ ಸಾಲಿನಲ್ಲೇ ಬರುವ ಈ ಪ್ರದೇಶದಲ್ಲಿ, ಭೂಗರ್ಭದ ಆಳದಲ್ಲಿರುವ ಚಿನ್ನದ ಅದಿರು ಹಾಗೂ ಇತರ ಖನಿಜ ಸಂಪತ್ತಿನ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ ಈ ಅತ್ಯಾಧುನಿಕ ವೈಮಾನಿಕ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮಣ್ಣಿನಲ್ಲಿ ಈ ಹಿಂದೆಯೇ ಚಿನ್ನದ ಅಂಶಗಳಿರುವುದು ದೃಢಪಟ್ಟಿದೆ. ವಿಶೇಷವಾಗಿ ಇಲ್ಲಿನ ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲ್ಲೂಕಿನ ಜಮೀನುಗಳಲ್ಲಿ ಬಂಗಾರದ ಕಣಗಳು ಪತ್ತೆಯಾಗಿದ್ದವು. ಇದು ಈ ಪ್ರದೇಶದ ಮೇಲೆ ಭೂವೈಜ್ಞಾನಿಕ ತಜ್ಞರ ಗಮನ ಸೆಳೆಯಲು ಕಾರಣವಾಗಿತ್ತು. ಈ ಹಿನ್ನೆಲೆ ಈಗ ಹೆಚ್ಚಿನ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಕದಿರಿಯಲ್ಲೂ ಸಮೀಕ್ಷೆ
ಪ್ರಾಥಮಿಕ ಭೂವೈಜ್ಞಾನಿಕ ವರದಿಗಳ ಪ್ರಕಾರ, ಗುಡಿಬಂಡೆ ಮತ್ತು ಆಂಧ್ರಪ್ರದೇಶದ ಕದಿರಿ ಪ್ರದೇಶಗಳು ಕೆಜಿಎಫ್ ಚಿನ್ನದ ಗಣಿಗಳ ಭೌಗೋಳಿಕ ಪಟ್ಟಿಗೆ ಸೇರಿವೆ. ಈ ಮಣ್ಣಿನ ರಚನೆ ಹಾಗೂ ಶಿಲಾಸಂಯೋಜನೆಯು ಕೋಲಾರ ಗಣಿಗಳಂತೆಯೇ ಇರುವುದರಿಂದ ಇಲ್ಲಿ ಚಿನ್ನದ ಅದಿರು ಸಿಗುವ ಸಾಧ್ಯತೆ ಶೇ.80ರಷ್ಟು ಇದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಒಂದು ವೇಳೆ ಚಿನ್ನದ ನಿಕ್ಷೇಪಗಳು ದೃಢಪಟ್ಟರೆ, ಇಂದಿನ ಹಿಂದುಳಿದ ಪ್ರದೇಶಗಳಾಗಿರುವ ಗುಡಿಬಂಡೆ ಮತ್ತು ಕದಿರಿಯ ಮುಖಚಿತ್ರವೇ ಬದಲಾಗುವ ಸಾಧ್ಯತೆ ಇದೆ.
ಕದಿರಿ ಭಾಗದಲ್ಲಿ ಚಿನ್ನದ ನಿಕ್ಷೇಪಗಳ ಶೋಧದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಚಿನ್ನದ ಗಣಿಗಾರಿಕೆ ಸಂಬಂಧಿತ ಅನುಮತಿಗಳನ್ನು ಸರಳಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಈ ಸಲಹೆಯ ಬೆನ್ನಲ್ಲೇ, ಆಂಧ್ರಪ್ರದೇಶ ಸರ್ಕಾರ ಗುರುತಿಸಲಾದ ಪ್ರದೇಶಗಳಲ್ಲಿ ಚಿನ್ನದ ಗಣಿಗಾರಿಕಾ ಹಕ್ಕುಗಳಿಗಾಗಿ ಮುಕ್ತ ಹರಾಜು ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
1,000 ಹೆಕ್ಟೇರ್ ಭೂಮಿಯಲ್ಲಿ ಚಿನ್ನದ ಗಣಿಗಾರಿಕೆ?
ಭೂವೈಜ್ಞಾನಿಕ ತಜ್ಞರ ವರದಿ ಪ್ರಕಾರ, ಭೂಮಿಯ ಮೇಲ್ಮೈಯಿಂದ ಕೇವಲ 50 ಮೀಟರ್ ಅಂತರದಲ್ಲಿ ಚಿನ್ನ ಹೊಂದಿರುವ ಪದರಗಳು ಪತ್ತೆಯಾಗಿವೆ. ಸುಮಾರು 1,000 ಹೆಕ್ಟೇರ್ ಭೂಮಿಯನ್ನು ಚಿನ್ನದ ಗಣಿಗಾರಿಕೆಗಾಗಿ ಹರಾಜು ಮೂಲಕ ಹಂಚಿಕೆ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ. ಈಗಾಗಲೇ ಪ್ರಾಥಮಿಕ ಭೂವೈಜ್ಞಾನಿಕ ಸಮೀಕ್ಷೆ ಪೂರ್ಣಗೊಂಡಿದ್ದು, ಈ ಪ್ರದೇಶಗಳಲ್ಲಿ ಚಿನ್ನದ ಲಭ್ಯತೆ ವಾಣಿಜ್ಯ ಮಟ್ಟದಲ್ಲಿ ಸಾಧ್ಯವಿದೆ ಎಂಬುದು ದೃಢಪಟ್ಟಿದೆ.

ಗಣಿಗಾರಿಕೆ ಆರಂಭವಾದರೆ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ರಸ್ತೆ, ವಿದ್ಯುತ್, ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಗಲಿದೆ. ಅಲ್ಲದೆ ದೇಶೀಯ ಚಿನ್ನದ ಉತ್ಪಾದನೆ ಹೆಚ್ಚಾದರೆ, ವಿದೇಶಗಳಿಂದ ಚಿನ್ನ ಆಮದು ಮಾಡುವ ಮೇಲಿನ ಆರ್ಥಿಕ ಹೊರೆ ಕೂಡ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯಿದೆ. ಹೆಲಿಕಾಪ್ಟರ್ ಮೂಲಕ ನಡೆಯುತ್ತಿರುವ ಸಮೀಕ್ಷೆಯ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. "ಚಿಕ್ಕಬಳ್ಳಾಪುರದಲ್ಲಿ ಚಿನ್ನ ಸಿಗಬಹುದೇ?" ನಮ್ಮೂರು ಮತ್ತೊಂದು ಕೆಜಿಎಫ್ ಆಗುತ್ತಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಸಮೀಕ್ಷೆಯ ಅಂತಿಮ ವರದಿಗಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ವೈಮಾನಿಕ ಸಮೀಕ್ಷೆಯ ವರದಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಭೂಗರ್ಭ ಪರೀಕ್ಷೆ, ಮಾದರಿ ಸಂಗ್ರಹ ಮತ್ತು ವಿಸ್ತೃತ ಶೋಧ ಕಾರ್ಯ ಕೈಗೊಳ್ಳುವ ಸಾಧ್ಯತೆ ಇದೆ. ಎಲ್ಲವೂ ಅನುಕೂಲಕರವಾಗಿದ್ದರೆ, ಚಿಕ್ಕಬಳ್ಳಾಪುರ ಜಿಲ್ಲೆ ಮತ್ತೆ ರಾಜ್ಯದ ಚಿನ್ನದ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆಯಬಹುದು.












Click it and Unblock the Notifications