Go Back Siddaramaiah: ಗೋ ಬ್ಯಾಕ್ ಸಿದ್ದರಾಮಯ್ಯ -ಸಿದ್ದು ವಿರುದ್ಧ ಧಿಕ್ಕಾರ ಕೂಗಿದ್ರೆ 1ಲಕ್ಷ ಬಹುಮಾನ- ಆಡಿಯೋ ವೈರಲ್!
ತುಮಕೂರು ಡಿಸೆಂಬರ್ 1: ಉಪಚುನಾವಣೆಯಲ್ಲಿ ಮೂರಕ್ಕೆ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಹಲ್ಲು ಮಸೆಯುತ್ತಿದ್ದಾರೆ. ವಿಶೇಷವಾಗಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವು ಸಾಧಿಸಿದ ಬಳಿಕವಂತೂ ಮೈತ್ರಿ ಪಕ್ಷಗಳ ಕಣ್ಣು ಕೆಂಪಾಗಿ ಹೋಗಿದೆ. ಸಿದ್ದರಾಮಯ್ಯ ಗೆದ್ದು ಬೀಗುತ್ತಿದ್ದರೆ ಇತ್ತ ಎನ್‌ಡಿಎ ಪಕ್ಷ ಅವಕಾಶ ಸಿಕ್ಕರೆ ಅವರ ವಿರುದ್ಧ ವಾಗ್ದಾಳಿ ಮಾಡಲು ಕಾಯುತ್ತಿದೆ. ಅಲ್ಲದೆ ಬಿಜೆಪಿ ಶಾಸಕರು ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ರೆ 1ಲಕ್ಷ ಬಹುಮಾನಕ್ಕಾಗಿ ಆಫರ್ ಕೂಡ ಕೊಟ್ಟಿದೆ ಎಂದು ಆರೋಪಿಸಲಾಗಿದೆ.
ಹೌದು... ತುಮಕೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಡಿಸೆಂಬರ್ 2) ಭೇಟಿ ನೀಡಲಿದ್ದಾರೆ. ಬಹುಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೇರೆವೇರಿಸಲಿದ್ದಾರೆ. ಜೊತೆಗೆ 1.4 ಲಕ್ಷ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳಲು ಮೈತ್ರಿ ಪಕ್ಷಗಳು ಸಜ್ಜಾಗಿದ್ದು 'ಗೋ ಬ್ಯಾಕ್ ಸಿದ್ದರಾಮಯ್ಯ' ಹೋರಾಟ ಮಾಡಲು ನಿರ್ಧರಿಸಿವೆ. ಅಲ್ಲದೆ ನಾಳೆ ಯಾರು ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗುತ್ತಾರೋ ಅವರಿಗೆ ಒಂದು ಲಕ್ಷ ಬಹುಮಾನ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಕಾರ್ಯಕರ್ತರಿಗೆ ಬಿಗ್ ಆಫರ್ ಕೊಟ್ಟಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ಮಾಜಿ ಶಾಸಕ ಗೌರಿ ಶಂಕರ್ ಈ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಈ ಆಡಿಯೋ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿದೆ. ಆಡಿಯೋದಲ್ಲಿ ಎಲ್ಲರಿಗೂ ಬಸ್ ವ್ಯವಸ್ಥೆ ಮಾಡಲಾಗುತ್ತದೆ, ಎಲ್ಲರೂ ಕಪ್ಪು ಬಾವುಟ ತೋರಿಸಿ ಹೋರಾಟ ಮಾಡಬೇಕು, ಅಲ್ಲದೇ ಸಮಾವೇಶದಲ್ಲಿ ಧಿಕ್ಕಾರ ಕೂಗಿದರೆ ಒಂದು ಲಕ್ಷ ಬಹುಮಾನ ನೀಡುತ್ತೇನೆ ಎಂದು ಹೇಳಿರುವುದು ಕೇಳಿ ಬಂದಿದೆ.
ಈ ಆಡಿಯೋವನ್ನು ಹಂಚಿಕೊಂಡಿರುವ ಗೌರಿಶಂಕರ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುವಂತೆ ಕಾರ್ಯಕರ್ತರಿಗೆ ಬಿಜೆಪಿ ಶಾಸಕರ ಸುರೇಶ್ ಗೌಡ ಕರೆ ಕೊಟ್ಟಿದ್ದಾರೆ. ಇದು ನಿಜಕ್ಕೂ ಖಂಡನೀಯ ಎಮದು ಆಕ್ರೋಶಗೊಂಡಿದ್ದಾರೆ. ಸಿಎಂ ಬಂದಾಗ ಪ್ರಚೋದನೆ ಮಾಡಿ ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ಆರ್‌ಎಸ್‌ಎಸ್ ಇದೇನಾ ಹೇಳಿಕೊತ್ತಿರೋದು, ಈ ಆಡಿಯೋ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಲಿ ತನಿಖೆ ಆಗಲಿ ಎಂದು ಗೌರಿ ಶಂಕರ್ ವಾಗ್ದಾಳಿ ಮಾಡಿದ್ದಾರೆ.
ಪ್ರತಿಭಟನೆ ಮಾಡಿ ಬೇಡ ಅನ್ನಲ್ಲ. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ ಪ್ರತಿಭಟನೆಗಾಗಿ ಹಣ ನೀಡುವುದು ತಪ್ಪು. ಇದನ್ನು ನಾವು ಸಹಿಸುವುದಿಲ್ಲ. ಈ ಆಡಿಯೋ ಬಗ್ಗೆ ನಾಯಕರಿಗೆ ಕಳುಹಿಸಲಾಗಿದೆ. ಈ ಬಗ್ಗೆ ನಾವು ಅವರ ಗಮನಕ್ಕೂ ತಂದಿದ್ದೇವೆ ಎಂದು ಗೌರಿಶಂಕರ್ ಆಕ್ರೋಶ ಹೊರಹಾಕಿದ್ದಾರೆ.
ಗೋ ಬ್ಯಾಕ್ ಸಿದ್ದರಾಮಯ್ಯ ಹೋರಾಟ ಯಾಕಾಗಿ?
ಅಷ್ಟಕ್ಕೂ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಗೋ ಬ್ಯಾಕ್ ಸಿದ್ದರಾಮಯ್ಯ ಹೋರಾಟಕ್ಕೆ ಕರೆ ಕೊಟ್ಟಿರುವುದೇಕೆ? ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್ ಗೌಡ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಮದು ಒಂದು ವರ್ಷ ಎಮಟು ತಿಂಗಳು ಕಳೆದರೂ ಒಂದು ರೂಪಾಯಿಯ ಅಭಿವೃದ್ಧಿ ಕೆಲಸಗಳಾಗಿಲ್ಲ. ಶಾಸಕರ ಕ್ಷೇತ್ರಗಳಿಗೆ 25 ಕೋಟಿ ರೂಪಾಯಿಗಳ ವಿಶೇಷ ಅನುದಾನ ನೀಡುವುದಾಗಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದೂವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ಹೀಗಾಗಿ ನಾಳೆ ಸಿಎಂ ಸಿದ್ದರಾಮಯ್ಯ ಅವರನ್ನು ತಡೆದು 'ಗೋ ಬ್ಯಾಕ್ ಸಿದ್ದರಾಮಯ್ಯ' ಹೋರಾಟ ಮಾಡಲು ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕರೆ ಕೊಟ್ಟಿದ್ದಾರೆ.












Click it and Unblock the Notifications