New Railway Line: ಗಿಣಿಗೇರಾ-ರಾಯಚೂರು ರೈಲು ಮಾರ್ಗ ಯೋಜನೆ ಅಪ್ಡೇಟ್, ತೆಲಂಗಾಣಕ್ಕೆ ಸಂಪರ್ಕ ಸುಲಭ
ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕದ ಕೆಲವೆಡೆ ಹೊಸ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಆರಂಭವಾಗಿದ್ದ ಪ್ರಮುಖ ರೈಲ್ವೆ ಯೋಜನೆಯಾಗಿರುವ ಹಾಗೂ ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಗಿಣಿಗೇರಾ-ರಾಯಚೂರು ರೈಲು ಮಾರ್ಗದ ನಿರ್ಮಾಣವು ಪ್ರಗತಿಯಲ್ಲಿದೆ. ಈ ಯೋಜನೆ ಮುನಿರಾಬಾದ್-ಮಹಬೂಬ್‌ನಗರ ರೈಲ್ವೆ ಮಾರ್ಗದ ಭಾಗವಾಗಿದೆ. ಒಟ್ಟು 165 ಕಿಲೋ ಮೀಟರ್ ಉದ್ದದ ಈ ಮಾರ್ಗವು ಯಾವೆಲ್ಲ ಭಾಗದಲ್ಲಿ ನಿರ್ಮಾಣವಾಗುತ್ತಿದೆ. ಎಷ್ಟು ಮಾರ್ಗದಲ್ಲಿ ಸಂಚಾರ ಈಗಾಗಲೇ ಶುರುವಾಗಿದೆ, ಏನೆಲ್ಲ ಪ್ರಯೋಜನ ಆಗಲಿದೆ, ಅಂದಾಜು ವೆಚ್ಚದ ಪೂರ್ಣ ಮಾಹಿತಿ ಈ ವರದಿಯಲ್ಲಿದೆ.
ಕೊಪ್ಪಳ ಜಿಲ್ಲೆ ವ್ಯಾಪ್ತಿಯ ಹೊಸಪೇಟೆ ಮತ್ತು ಗದಗ ಹೆದ್ದಾರಿಗೆ ಸಮೀಪದಲ್ಲಿರುವ ಗಿಣಿಗೇರಾದಿಂದ ರಾಯಚೂರುವರೆಗೆ ಹೊಸ ರೈಲು ಮಾರ್ಗ ನಿರ್ಮಿಸಲಾಗುತ್ತಿದೆ. ಈ ಮಾರ್ಗವು ರಾಜ್ಯದ ಜಿಲ್ಲೆಗಳು, ತಾಲೂಕುಗಳ ಮೂಲಕ ತೆಲಂಗಾಣದ ಗದ್ವಾಲ್ ತಲುಪಲಿದೆ. ರೈಲು ಸಾರಿಗೆ ಸಂಪರ್ಕವನ್ನು ಹೆಚ್ಚಿಸುವ ಗುರಿಯೊಂದಿಗೆ ಯೋಜನೆ ಆರಂಭಿಸಿದ ರೈಲ್ವೆ ಇಲಾಖೆ ಈಗಾಗಲೇ ಒಂದಷ್ಟು ಕಾಮಗಾರಿ ಪೂರ್ಣಗೊಳಿಸಿ, ಅಲ್ಲಿ ರೈಲ್ವೆ ಕಾರ್ಯಾಚರಣೆ ಸಹ ಆರಂಭಿಸಿದೆ.

83 ಕಿಮೀ ಮಾರ್ಗದಲ್ಲಿ ರೈಲು ಸೇವೆ ಆರಂಭ
ಗಿಣಿಗೇರಾ-ಸಿಂಧನೂರು ವರೆಗಿನ 83.83 ಕಿಲೋ ಮೀಟರ್ ಹೊಸ ರೈಲು ಮಾರ್ಗದಲ್ಲಿ ರೈಲುಗಳು ಸಂಚರಿಸುತ್ತಿವೆ. ಸಿಂಧನೂರಿನಿಂದ ರಾಯಚೂರುವರೆಗಿನ 81 ಕಿಲೋ ಮೀಟರ್ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅದಕ್ಕಾಗಿ ರೈಲ್ವೆ ಇಲಾಖೆ ಸದ್ಯ 1,205 ಕೋಟಿ ವ್ಯಯಿಸುತ್ತಿದೆ. ಒಟ್ಟಾರೆ ಯೋಜನೆಗೆ 3,402 ಕೋಟಿ ರೂ. ಅಂದಾಜಿಸಲಾಗಿದೆ. ಈ ಕಾಮಗಾರಿ ಮುಗಿದು ಸಂಪೂರ್ಣ (165 ಕಿಲೋ ಮೀಟರ್) ಮಾರ್ಗದಲ್ಲಿ ಸಂಚಾರ ಆರಂಭವಾಗಲು 2027 ರವರೆಗೆ ಕಾಯಬೇಕಿದೆ.
ಗಿಣಿಗೇರಾ-ರಾಯಚೂರು ರೈಲು ಯೋಜನೆ ಪ್ರಯೋಜನ
ಈ ರೈಲು ಮಾರ್ಗ ನಿರ್ಮಾಣವಾದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈಲು ಸಾರಿಗೆ ಸಂಪರ್ಕ ಸುಧಾರಿಸುತ್ತದೆ. ತೆಲಂಗಾಣಕ್ಕೆ ರಾಜ್ಯದಿಂದ ನೇರ ಸಂಚಾರ ಸಾಧ್ಯವಾಗುತ್ತದೆ. ಸಂಚಾರ ಸಮಯ ಕಡಿಮೆ ಆಗುತ್ತದೆ. ಮಾತ್ರವಲ್ಲದೇ ಪ್ರಯಾಣಿಕರಿಗೆ, ಸರಕು ಸಾಗಾಣೆಗೆ, ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ಸಿಕ್ಕಂತಾಗುತ್ತದೆ. ಇನ್ನೂ ಶೈಕ್ಷಣಿಕ, ಪ್ರವಾಸೋದ್ಯಮ ದೃಷ್ಟಿಯಿಂದ ಈ ಯೋಜನೆ ಪ್ರಯೋಜನಕಾರಿಯಾಗಿದೆ. ಉದ್ಯೋಗ ಅರಸಿ ಬೇರೆ ಬೇರೆ ಊರುಗಳಿಗೆ ತೆರಳುವ ದೈನಂದಿನ ಪ್ರಯಾಣಿಕರಿಗೂ ಕಡಿಮೆ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯ ದೊರೆಯುತ್ತದೆ.
ಬೇರೆ ಬೇರೆ ಭಾಗಗಳಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರಮುಖ ರೈಲು ಸಂಪರ್ಕವನ್ನು ಒದಗಿಸುವ ಜೊತೆಗೆ ಪ್ರಾದೇಶಿಕ ಅಭಿವೃದ್ಧಿ ಮತ್ತು ವ್ಯಾಪಾರವನ್ನು ಹೆಚ್ಚಿಸುವ ನಿರೀಕ್ಷೆ ಇದೆ.
ಯಾವೆಲ್ಲ ಪ್ರದೇಶಗಳಲ್ಲಿ ರೈಲು ಮಾರ್ಗ ನಿರ್ಮಾಣ?
ಗಿಣಿಗೇರಾ ದಿಂದ ಆರಂಭವಾಗುವ ರೈಲು ಮಾರ್ಗವು ಬೂದಗುಂಪಾ, ಜಬ್ಬಲ್ ಗುಡ್ಡ, ಚಿಕ್ಕಬೆಣಕಲ್, ಗಂಗಾವತಿ, ಶ್ರೀರಾಮ್‌ನಗರ, ಸಿದ್ದಾಪುರ, ಕಾರಟಗಿ, ಗೋರೆಬಾಳ, ಸಿಂಧನೂರು ಅಲ್ಲಿಂದ ಜವಳಗೆರೆ, ಹಿರೇಕೋತಂಗಲ್, ಮಾನ್ವಿ, ನಿರಮಾನ್ವಿ, ಕಲ್ಲೂರು, ಮಮದಾಪುರ ಮಾರ್ಗವಾಗಿ ರಾಯಚೂರು ವರೆಗೆ ನಿರ್ಮಾಣಗೊಳ್ಳುತ್ತಿದೆ.
ಇದರಲ್ಲಿ ಗಿಣಿಗೆರಾದಿಂದ ಸಿಂಧನೂರುವರೆಗೆ ಒಟ್ಟು ಹತ್ತು ನಿಲ್ದಾಣಗಳ ವ್ಯಾಪ್ತಿಯಲ್ಲಿ ಮಾರ್ಗ ನಿರ್ಮಾಣ ಪೂರ್ಣಗೊಂಡು (83.83 ಕಿಮೀ.) ರೈಲು ಸೇವೆ ಆರಂಭವಾಗಿದೆ. ಸಿಂಧನೂರಿನಿಂದ ರಾಯಚೂರುವರೆಗಿನ ಏಳು ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೆ ಅಗತ್ಯ ಅನುದಾನ ನೀಡಲಾಗಿದೆ. ಭಾರತೀಯ ರೈಲ್ವೆ ಮತ್ತು ಕರ್ನಾಟಕ ಸರ್ಕಾರ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE)) ಸಹಕಾರದಲ್ಲಿ ಯೋಜನೆ ಕಾಮಗಾರಿ ನಡೆಯುತ್ತಿದೆ. ಹಿರೇಕೋತಂಗಲ್-ಮಮದಾಪುರ (39.5 ಕಿ.ಮೀ) ವಿಭಾಗಕ್ಕೆ EPC (ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ) ಒಪ್ಪಂದವನ್ನು ನೀಡಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.












Click it and Unblock the Notifications