ಕೇಂದ್ರ ಸರ್ಕಾರ ಈಗಲೂ ಕುರುಡು, ಕಿವುಡು; ಸಿದ್ದರಾಮಯ್ಯ
ನವದೆಹಲಿ, ಸೆಪ್ಟೆಂಬರ್ 01: "ದೇಶದ ಜಿಡಿಪಿ ಶೇಕಡಾ 23.9ರಷ್ಟು ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿಗೆ ನಿಜ. ಈ ಕುಸಿತದ ಪೂರ್ಣ ಹೊಣೆಯನ್ನು ಕೊರೊನಾ ರೋಗದ ಮೇಲೆ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಇನ್ನೂ ಹೆಚ್ಚಿನ ಆಘಾತಕಾರಿ ಬೆಳವಣಿಗೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
Recommended Video
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಆರ್ಥಿಕತೆ ರೋಗಗ್ರಸ್ತವಾಗಿದೆ" ಎಂದು ಅವರು ದೂರಿದ್ದಾರೆ.
"ಆರ್‌ಬಿಐ ಗವರ್ನರ್ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರ ತನಕ ಖ್ಯಾತ ಆರ್ಥಿಕ ತಜ್ಞರೆಲ್ಲರೂ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದಾರೆ. ಆಗಲೂ ಈಗಲೂ ಸರ್ಕಾರ ಕುರುಡು-ಕಿವುಡು" ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಹೇಳಿದ್ದಾರೆ.
"2015ರಲ್ಲಿ ಜಿಡಿಪಿ ಅಂದಾಜು ಮಾಡುವ ಮೂಲವರ್ಷವನ್ನು 2004-05ರಿಂದ 2011-12ಕ್ಕೆ ಬದಲಾಯಿಸಲಾಯಿತು. ಅದರ ನಂತರ ಬಣ್ಣ ಬಯಲಾಗಬಾರದೆಂದು ಅಧಿಕೃತ ಅಂಕಿ ಅಂಶಗಳನ್ನೇ ತಡೆಹಿಡಿಯಲಾಯಿತು. ಈಗ ಎಲ್ಲವನ್ನು ಕೊರೊನಾ ಲೆಕ್ಕಕ್ಕೆ ಬರೆದು ನರೇಂದ್ರ ಮೋದಿ ಅವರು ಕೈತೊಳೆದುಕೊಳ್ಳಲು ಹೊರಟಿದ್ದಾರೆ" ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಕೋವಿಡ್ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ
"ಕೊರೊನಾ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದ್ದ ಪ್ರಧಾನಿ ಅವರು ಜನರಿಗೆ ಜಾಗಟೆ ಬಾರಿಸಲು, ದೀಪ ಹಚ್ಚಲು ಹೇಳಿರುವುದು ಕೊರೊನಾ ಮಾರಿಯನ್ನು ಸರ್ಕಾರ ಎಷ್ಟು ಗಂಭೀರವಾಗಿದೆ ಎನ್ನುವುದಕ್ಕೆ ಸಾಕ್ಷಿ" ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಪ್ರಧಾನಿಗಳೇ ಹೊಣೆ
"ಈಗ ರೋಧಿಸಿ ಏನು ಫಲ? ಲಾಕ್ ಡೌನ್ ಅಗತ್ಯವಿತ್ತು ನಿಜ, ನಮ್ಮ ಪಕ್ಷ ಕೂಡಾ ಬೆಂಬಲಿಸಿತ್ತು. ಆದರೆ ಅವೈಜ್ಞಾನಿಕವಾಗಿ, ದಿನಕ್ಕೊಂದು ರೀತಿಯ ಅನಿಶ್ಚಿತ ನಿರ್ಧಾರಗಳ ಮೂಲಕ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮವಾಗಿ ಲಾಭವಾಗಲಿಲ್ಲ, ನಷ್ಟವಾಗಿದ್ದೇ ಹೆಚ್ಚು. ಇದರ ಪೂರ್ಣ ಹೊಣೆಯನ್ನು ಪ್ರಧಾನಿಗಳು ವಹಿಸಿಕೊಳ್ಳಬೇಕಾಗುತ್ತದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೋದಿ ತಪ್ಪೊಪ್ಪಿಕೊಳ್ಳಬೇಕು
"ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ಥಿತಿಗೆ ನೋಟು ರದ್ದತಿ, ದೋಷಪೂರಿತ ಜಿಎಸ್ ಟಿಯ ಅವೈಜ್ಞಾನಿಕ ಜಾರಿ ಮತ್ತು ಕೆಲಸವೇ ಗೊತ್ತಿಲ್ಲದ ಅಡ್ಡಕಸುಬಿ ಸಚಿವರು ಕೂಡಾ ಕಾರಣ ಎಂದು ನರೇಂದ್ರ ಮೋದಿ ಅವರು ದೇಶದ ಮುಂದೆ ಮೊದಲು ತಪ್ಪೊಪ್ಪಿಕೊಳ್ಳಬೇಕು" ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮೋದಿ ವಿಫಲ ನಾಯಕ
"ಸಂಕಟ-ಸಂಕಷ್ಟಗಳನ್ನು ಎದುರಿಸಿ ಗೆದ್ದುಬರುವವನೇ ನಿಜವಾದ ನಾಯಕ. ಪಂಡಿತ ಜವಾಹರಲಾಲ ನೆಹರೂ ಅವರಿಂದ ಮನಮೋಹನ್ ಸಿಂಗ್ ವರೆಗೆ ಎಲ್ಲ ಪ್ರಧಾನಿಗಳು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಗೆದ್ದವರು. ನರೇಂದ್ರ ಮೋದಿ ಅವರಂತಹ ಕೈಲಾಗದ ವಿಫಲ ನಾಯಕರು ಮಾತ್ರ ನೆಪಗಳ ಮೊರೆ ಹೋಗುತ್ತಾರೆ" ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.











Click it and Unblock the Notifications