ಸುಪ್ರೀಂ ಕೋರ್ಟ್ ಆದೇಶದಂತೆ ಜಿಬಿಎ ಚುನಾವಣೆ; ಜಿಲ್ಲಾ, ತಾಲೂಕು ಪಂಚಾಯಿತ್ ಎಲೆಕ್ಷನ್ ಬಗ್ಗೆ ಮಾಹಿತಿ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಅನುಸಾರ ನಿಗದಿತ ದಿನಾಂಕದ ಒಳಗೆ ಜಿಬಿಎ ಪಾಲಿಕೆಗಳ ಚುನಾವಣೆ ನಡೆಸಲಾಗುವುದು. ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯ ನಿರ್ದೇಶನ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಪಾಲಿಕೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಗಡುವು ನೀಡಿರುವ ಕುರಿತು ಇಂದು (ಮಂಗಳವಾರ) ಅರಮನೆ ಮೈದಾನ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಿದ್ದು, ಅದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಎಲ್ಲಾ ರೀತಿಯ ಆದೇಶ ನೀಡಲಿದೆ. ನಮಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯಬೇಕು. ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ಅನುಸಾರ ಏನೆಲ್ಲಾ ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ ಎಂದು ತಿಳಿಸಿದರು.

ತಾಂತ್ರಿಕ ಆಕ್ಷೇಪಣೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್ ಅವರು, ಕೆಲವರು ಆಕ್ಷೇಪಣೆ ಸಲ್ಲಿಸುತ್ತಾರೆ. ಅದಕ್ಕೆ ಸಮಿತಿ ರಚಿಸಲಾಗಿದ್ದು, ಅದು ತೀರ್ಮಾನ ಮಾಡಲಿದೆ. ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಲಿದ್ದು, ಅವರಿಗೆ ಏನು ನಿರ್ದೇಶನ ನೀಡಬೇಕೋ ನೀಡುತ್ತೇವೆ. ಮೀಸಲಾತಿ ವಿಚಾರವಾಗಿ ಮಹಿಳೆಯರಿಗೆ ಕಡಿಮೆಯಾಗಿದೆ ಎಂಬ ಮಾತು ಕೇಳಿಬಂದಿವೆ. ಇದನ್ನು ನಾನು ಗಮನಿಸಿಲ್ಲ. ಇದನ್ನು ಪರಿಶೀಲಿಸಿ ತಪ್ಪಾಗಿದ್ದರೆ ಸರಿಪಡಿಸಲು ಅವರಿಗೆ ಸೂಚಿಸಲಾಗುವುದು. ನಾವು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ಚುನಾವಣೆ ನಡೆಸಲು ನ್ಯಾಯಾಲಯದ ಬಳಿ ಕಾಲಾವಕಾಶ ಕೇಳುತ್ತೀರಾ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್ ಅವರು, ಇಲ್ಲ, ನಾವು ಯಾವುದೇ ಕಾಲಾವಕಾಶ ಕೇಳುವುದಿಲ್ಲ ಎಂದು
ಈ ಚುನಾವಣೆ ನಮ್ಮ ಪಾಲಿಗೆ ಏನು ಸವಾಲಿದೆ? ಚುನಾವಣೆ ನಡೆಸುವುದು ನನ್ನ ಕರ್ತವ್ಯ. ಕಾರ್ಯಕರ್ತರಿಗೆ ಅಧಿಕಾರ ಕೊಡುವು, ಹೊಸ ನಾಯಕರನ್ನು ತಯಾರು ಮಾಡುತ್ತಿದ್ದೇವೆ. ನಾವು ಮಾಡುತ್ತಿರುವ ಕೆಲಸಕ್ಕೆ ಜನ ಬೆಂಬಲ ನೀಡುವ ವಿಶ್ವಾಸವಿದೆ. ನಾವು ಐದೂ ಪಾಲಿಕೆಗಳಲ್ಲೂ ಗೆಲ್ಲುತ್ತೇವೆ ಎಂದು ಹೇಳಿದರು.
ನೇರ ಹಣಾಹಣಿಗೆ ಬಿಜೆಪಿ- ಜೆಡಿಎಸ್ ಒಂದಾಗಬೇಕು
ಬಿಜೆಪಿ ಹಾಗೂ ಜೆಡಿಎಸ್ ಫ್ರೆಂಡ್ಲಿ ಫೈಟ್ ವಿಚಾರವಾಗಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಅವರು ಏನಾದರೂ ಮಾಡಿಕೊಳ್ಳಲಿ. ಜತೆಯಾಗಿಯಾದರೂ ಚುನಾವಣೆ ಮಾಡಲಿ, ಬೇರೆಯಾಗಿ ಬೇಕಾದರೂ ಮಾಡಲಿ. ಅವರು ಸಂಸತ್ ಚುನಾವಣೆಯಲ್ಲಿ ಒಟ್ಟಿಗೆ ಚುನಾವಣೆ ಮಾಡಿದಂತೆ ವಿಧಾನಸಭೆ ಹಾಗೂ ಪಾಲಿಕೆ ಚುನಾವಣೆಯನ್ನು ಮಾಡಿದರೆ ನೇರ ಹಣಾಹಣಿ ಇರುತ್ತದೆ ಎಂದು ತಿಳಿಸಿದರು.












Click it and Unblock the Notifications