Garlic Price: ಬೆಳ್ಳುಳ್ಳಿ ಕಬಾಬ್ ಟ್ರೆಂಡ್ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆ ಗಗನಕ್ಕೆ- ಕೆಜಿಗೆ ಅರ್ಧ ಸಾವಿರಕ್ಕೂ ಚೂರು ಕಮ್ಮಿ
ಬೆಂಗಳೂರು, ಫೆಬ್ರವರಿ 10: ಬೆಳ್ಳುಳ್ಳಿ ಕಬಾಬ್ ಟ್ರೆಂಟ್ ಆಗ್ತಾ ಇದ್ದ ಹಾಗೆ ಬೆಳ್ಳುಳ್ಳಿ ಬೆಲೆಯು ಗಗನಕ್ಕೇರಿದೆ. ರಾಜ್ಯದಾದ್ಯಂತ ಪೂರೈಕೆಯಲ್ಲಿ ತೀವ್ರ ಕುಸಿತ ಕಂಡಿದ್ದು ಬೆಳ್ಳುಳ್ಳಿ ಬೆಲೆಯು ಸಾಮಾನ್ಯ ಜನರಲ್ಲಿ ತೀವ್ರ ಆಘಾತ ತಂದಿದೆ. ಬೆಳ್ಳುಳ್ಳಿ ಪೂರೈಕೆಯಲ್ಲಿ ಶೇ 50 ರಷ್ಟು ಕುಸಿತವಾಗಿದೆ ಎಂದು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ನಲ್ಲಿ ಬೆಳ್ಳುಳ್ಳಿಯ ಪೂರೈಕೆ ಶೇ.50 ರಷ್ಟು ಕುಸಿದಿದೆ. ಈ ಹಿನ್ನೆಲೆಯಲ್ಲಿ ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಪ್ರತಿ ಕೆಜಿಗೆ 350 ರೂಪಾಯಿ ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಬರೋಬ್ಬರಿ 400 ರೂಪಾಯಿಗೆ ಏರಿಕೆಯಾಗಿದೆ.

ಈ ಕುರಿತು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ಜೊತೆಗೆ ಮಾತನಾಡಿರುವ ಬೆಂಗಳೂರು ಸಗಟು ಬೆಳ್ಳುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ದೀಪಕ್ ಜೆ ಷಾ, 'ಬೆಂಗಳೂರಿಗೆ ಸಾಮಾನ್ಯವಾಗಿ ದಿನಕ್ಕೆ 3,000 ಚೀಲ ಬೆಳ್ಳುಳ್ಳಿ ಬರುತ್ತಿದ್ದು, ಪ್ರತಿ ಚೀಲವೂ 40 ಕೆಜಿ ತೂಕವಿರುತ್ತದೆ. ಆದರೆ ಕಳೆದ ಕೆಲವು ದಿನಗಳಿಂದ ಪೂರೈಕೆಯು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ಬೆಳ್ಳುಳ್ಳಿ ದರವೂ ಗಗನಕ್ಕೆ ಏರಿದೆ' ಎಂದು ಅವರು ತಿಳಿಸಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಬರಗಾಲದ ಕಾರಣ ಪೂರೈಕೆಗೆ ತೊಂದರೆಯಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತಿದ್ದು, ಇಡೀ ಕರ್ನಾಟಕಕ್ಕೆ ಪೂರೈಸಲು ಇದು ಸಾಕಾಗುತ್ತಿಲ್ಲ ಎಂದು ಷಾ ಹೇಳಿದ್ದಾರೆ.

ಸಾಮಾನ್ಯವಾಗಿ ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಿಂದ ಕರ್ನಾಟಕಕ್ಕೆ ಬೆಳ್ಳುಳ್ಳಿ ಬರುತ್ತದೆ. ಈಗ ನಾವು ಮಧ್ಯಪ್ರದೇಶದಿಂದ ಮಾತ್ರ ಸರಬರಾಜು ಮಾಡುತ್ತಿದ್ದೇವೆ. ಆದರೆ ತಿಂಗಳ ಅಂತ್ಯದ ವೇಳೆಗೆ, ಗುಜರಾತ್ ಮತ್ತು ರಾಜಸ್ಥಾನದಿಂದ ಸಾಮಾನ್ಯ ಪೂರೈಕೆ ಪುನರಾರಂಭವಾಗುತ್ತದೆ. ದರಗಳು ಸ್ಥಿರಗೊಳ್ಳುವ ನಿರೀಕ್ಷೆಯಿದೆ ಎಂದು ಷಾ ತಿಳಿಸಿದ್ದಾರೆ.
ಕಳೆದ ವರ್ಷ ಬೆಳ್ಳುಳ್ಳಿ ಬೆಳೆಗೆ ಸಂಬಂಧಿಸಿದಂತೆ ರೈತರು ಅನಿಶ್ಚಿತತೆಯನ್ನು ಎದುರಿಸಿದ್ದರು. ಮುಂಗಾರು ವಿಫಲವಾದ ಕಾರಣ ರೈತರು ಕೃಷಿಗಾಗಿ ಸರ್ಕಾರ ಮತ್ತು ಪಂಚಾಯತ್‌ಗಳಿಂದ ಬೋರ್‌ವೆಲ್ ಮತ್ತು ಟ್ಯಾಂಕರ್ ನೀರನ್ನು ಅವಲಂಬಿಸಿರುತ್ತಾರೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಒಂದು ತಿಂಗಳ ಅವಧಿಯಲ್ಲಿ, ಗುಜರಾತ್ ಮತ್ತು ರಾಜಸ್ಥಾನದಿಂದ ಹೊಸ ಸ್ಟಾಕ್ ಕರ್ನಾಟಕಕ್ಕೆ ಆಗಮಿಸಲಿದೆ. ಇದು ಮಾರ್ಚ್ ಮಧ್ಯದ ವೇಳೆಗೆ ದರವನ್ನು ಕಡಿಮೆ ಮಾಡುತ್ತದೆ. ಜನವರಿಯಲ್ಲಿ ಬೆಳ್ಳುಳ್ಳಿಯ ಕಿಲೋವಾರು ಬೆಲೆ 150 ರೂಪಾಯಿಯಾಗಿತ್ತು ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಬೆಳ್ಳುಳ್ಳಿಯಿಂದ ಆರೋಗ್ಯಕ್ಕಾಗುವ ಲಾಭಗಳೇನು?
ಬೆಳ್ಳುಳ್ಳಿಯು ಹೆಚ್ಚು ಪೌಷ್ಟಿಕವಾಗಿದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಬೆಳ್ಳುಳ್ಳಿ ಹಲವಾರು ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಮುಖ್ಯವಾಗಿ ಮ್ಯಾಂಗನೀಸ್, ವಿಟಮಿನ್ B6, ವಿಟಮಿನ್ ಸಿ, ಸೆಲೆನಿಯಮ್, ಫೈಬರ್ ಇರುತ್ತದೆ. ಬೆಳ್ಳುಳ್ಳಿಯನ್ನು ಪ್ರಪಂಚದ ಅನೇಕ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಬಲವಾದ ವಾಸನೆ ಮತ್ತು ರುಚಿಯಿಂದಾಗಿ ಬೆಳ್ಳುಳ್ಳಿ ಪ್ರಸಿದ್ದಿ ಹೊಂದಿದೆ. ಬೆಳ್ಳುಳ್ಳಿಯನ್ನು ಕತ್ತರಿಸಿದಾಗ, ಪುಡಿಮಾಡಿದಾಗ ಅಥವಾ ಅಗಿಯುವಾಗ ಸಲ್ಫರ್ ಸಂಯುಕ್ತಗಳ ರಚನೆಯಿಂದಾಗಿ ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಗಳು ಹೆಚ್ಚಿವೆ ಎಂದು ವಿಜ್ಞಾನಿಗಳು ತಿಳಿದಿದ್ದಾರೆ.












Click it and Unblock the Notifications