ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಎದುರಾಯ್ತು ಮತ್ತೊಂದು ಸಂಕಷ್ಟ
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಮತ್ತೊಂದು ಆಪತ್ತು ಎದುರಾಗಿದೆ. ಅಕ್ರಮ ಗಣಿ ಸುಳಿಯಲ್ಲಿ ಸಿಲುಕಿ ಪರದಾಡಿದ್ದ ಬಿಜೆಪಿ ನಾಯಕನಿಗೆ ಕೆಲವು ದಿನಗಳ ಹಿಂದಷ್ಟೇ ರಿಲೀಫ್ ಸಿಕ್ಕಿತ್ತು. ಆದರೆ ಇದೀಗ ಜನಾರ್ದನ ರೆಡ್ಡಿ ಅವರ ಮನೆ ಬಳಿ ನಡೆದಿರುವ ಬ್ಯಾನರ್ ಗಲಾಟೆ ವಿಚಾರ ಹಲ್‌ಚಲ್ ಎಬ್ಬಿಸಿದೆ. ಹಾಗೇ ಇದರ ಜೊತೆಗೆ ರಾಜಕೀಯ ಚದುರಂಗದಾಟ ಕೂಡ ಶುರುವಾಗಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕಾಂಗ್ರೆಸ್ ನಾಯಕರು ಇದೇ ಅಸ್ತ್ರ ಬಳಸಿ ಹೋರಾಟ ಕೂಡ ಶುರು ಮಾಡಿದ್ದಾರೆ.
ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಸ್ಥಳೀಯವಾಗಿ ಆಯೋಜನೆ ಮಾಡಲಾಗಿತ್ತು, ಜನವರಿ 3ಕ್ಕೆ ಕಾರ್ಯಕ್ರಮ ಕೂಡ ನಿಗದಿ ಮಾಡಲಾಗಿತ್ತು. ಇದೇ ಕಾರಣಕ್ಕೆ ಬಳ್ಳಾರಿಯ ಹವಂಬಾವಿ ನಗರದ ಜನಾರ್ದನ ರೆಡ್ಡಿ ಅವರ ಮನೆ ಮುಂಭಾಗದಲ್ಲೇ ಬ್ಯಾನರ್ ಹಾಕಲು ಒಂದು ಗುಂಪು ಮುಂದಾಗಿತ್ತು. ಇಂತಹ ಸ್ಥಿತಿಯಲ್ಲಿ ಗಲಾಟೆ ನಡೆದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ & ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗ ರಾಜಶೇಖರ್ ಎಂಬುವವರು ಮೃತಪಟ್ಟಿರುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಇದೇ ಸಂದರ್ಭದಲ್ಲಿ ಈ ಘಟನೆ ರಾಜಕೀಯ ತಿರುವು ಕೂಡ ಪಡೆಯುತ್ತಿದೆ.

ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ
ಅಕ್ರಮ ಗಣಿಗಾರಿಕೆ ಪ್ರಕರಣ ಸೇರಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ವಿರುದ್ಧ ಈಗಾಗಲೇ ಹಲವು ಕೇಸ್‌ಗಳು ಇವೆ. ಈ ಎಲ್ಲಾ ಘಟನೆಗಳ ಜೊತೆಗೆ ಈಗ ರಾಜಶೇಖರ್ ಸಾವು ಹೊಸದೊಂದು ಸಮಸ್ಯೆಯನ್ನು ಜನಾರ್ದನ ರೆಡ್ಡಿ ರಾಜಕೀಯ ಬದುಕಿನಲ್ಲಿ ಸೃಷ್ಟಿ ಮಾಡಿದೆ. ಈ ಘಟನೆ ಸಂಬಂಧ ಶಾಸಕ ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಅಲಿಖಾನ್ ಮತ್ತು ದಮ್ಮೂರ ಶೇಖರ್, ಮೋತ್ಕರ್ ಶ್ರೀನಿವಾಸ್, ಪ್ರಕಾಶ್ ರೆಡ್ಡಿ ಸೇರಿ ರಮಣ, ಪಾಲನ್ನ, ದಿವಾಕರ್ ಹಾಗೂ ಮಾರುತಿ ಪ್ರಸಾದ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಈ ಮೂಲಕ ಜನಾರ್ದನ ರೆಡ್ಡಿ ಅವರ ರಾಜಕೀಯ ಭವಿಷ್ಯಕ್ಕೆ ಕೂಡ ಅಡ್ಡಿ ಎದುರಾದಂತಾಗಿದೆ.
ಬಳ್ಳಾರಿಯಲ್ಲಿ ಮತ್ತೆ ರಕ್ತಸಿಕ್ತ ರಾಜಕೀಯ
ಕೆಲವು ವರ್ಷಗಳ ಹಿಂದೆ ಬಳ್ಳಾರಿ ರಾಜಕೀಯ ದೇಶಾದ್ಯಂತ ಸದ್ದು ಮಾಡುವ ಹಂತದಲ್ಲಿ ಇತ್ತು. ಆದರೆ ಆ ನಂತರ ಪರಿಸ್ಥಿತಿ ಒಂದಷ್ಟು ಸುಧಾರಣೆ ಕಂಡು, ಕೊನೆಗೆ ಎಲ್ಲವೂ ಸೈಲೆಂಟ್ ಆಗಿದೆ ಎಂದುಕೊಳ್ಳುವ ಸಮಯದಲ್ಲೇ ಮತ್ತೊಂದು ಸಾವು ಬಳ್ಳಾರಿ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಒಂದು ಕಡೆ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಮತ್ತೊಂದು ಕಡೆ ಜನಾರ್ದನ ರೆಡ್ಡಿ ಅವರ ಬೆಂಬಲಿಗರ ನಡುವೆ ಕಾದಾಟ ಜೋರಾಗಿದೆ. ಹಾಗೇ ರಾಜಕೀಯವಾಗಿ ಕೂಡ ಈ ಘಟನೆ ಕಾಂಗ್ರೆಸ್ ನಾಯಕರಿಗೆ ಅಸ್ತ್ರವಾಗುವ ನಿರೀಕ್ಷೆ ಇದೆ.












Click it and Unblock the Notifications