Gold ಲಕ್ಕುಂಡಿ: ನಿಧಿ ನೀಡಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬ: "ಬಡವರಿದ್ದೀವಿ ಸರ್ಕಾರ ಸಹಾಯ ಮಾಡಬೇಕು"
ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಈಚೆಗೆ ನಿಧಿ / ಚಿನ್ನಭರಣ ಸಿಕ್ಕಿದೆ. ಇಲ್ಲಿನ ಗಂಗವ್ವ ರಿತ್ತಿ ಹಾಗೂ ಪುತ್ರ ಪ್ರಜ್ವಲ್ ರಿತ್ತಿ ಅವರು ಮನೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಮಡಿಕೆಯಲ್ಲಿ 460 ಗ್ರಾಂ ಚಿನ್ನದ ಆಭರಣಗಳು ಸಿಕ್ಕಿದ್ದವು. ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಈ ಕುಟುಂಬವು ಪ್ರಾಮಾಣಿಕತೆ ಮೆರೆದಿತ್ತು. ಇದೀಗ ಈ ಕುಟುಂಬ ನೆಲೆಸಿದ್ದ ಜಾಗದಲ್ಲಿ ಉತ್ಖನನ ಕಾರ್ಯ ನಡೆಯುತ್ತಿದ್ದು, ನಿಷೇಧಿತ ಪ್ರದೇಶ ಎಂದು ಗುರುತಿಸಲಾಗಿದೆ. ರಿತ್ತಿ ಕುಟುಂಬವು ಅವರ ನೆಂಟರ ಮನೆಯಲ್ಲಿ ನೆಲೆಸಿದ್ದಾರೆ. ನಿಧಿ ಸಿಕ್ಕ ಮೇಲೆ ಅವರು ಬದುಕು ಹೇಗೆಲ್ಲಾ ಬದಲಾಗಿದೆ ಎನ್ನುವ ಬಗ್ಗೆ ಗಂಗವ್ವ ರಿತ್ತಿ ಅವರು Oneindia Kannadaದೊಂದಿಗೆ ಮಾತನಾಡಿದ್ದಾರೆ.
ನಿಧಿ ಸಿಕ್ಕ ಮೇಲೆ ರಿತ್ತಿ ಕುಟುಂಬವು ಅಕ್ಷರಶಃ ಗೊಂದಲಕ್ಕೀಡಾಗಿದೆ. ಸದ್ಯ ಈ ಕುಟುಂಬವು ಅವರ ನೆಂಟರ ಮನೆಗೆ ಸ್ಥಳಾಂತರಗೊಂಡಿದೆ. ನಮಗೆ ನಿಧಿ ಸಿಕ್ಕಿರುವ ಜಾಗದಲ್ಲಿ ಮನೆ ಬೇಡ, ಹೊಸದಾಗಿ ಜಾಗ ಕೊಡಿ, ನನಗೂ ಮತ್ತು ಮಗ ಪ್ರಜ್ವಲ್ ರಿತ್ತಿಯ ಜೀವನೋಪಾಯಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ದಾರಿ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ನಿಧಿ ನೀಡಿದ ಗಂಗವ್ವ ರಿತ್ತಿ ಅವರು ಮನವಿ ಮಾಡಿದರು. ಇದೇ 26ಕ್ಕೆ ನಮಗೆ ಏನು ಕೊಡಲಿದ್ದಾರೆ ಎನ್ನುವುದನ್ನು ಘೋಷಣೆ ಮಾಡುವುದಾಗಿ ಸಚಿವ ಎಚ್.ಕೆ. ಪಾಟೀಲ್ ಅವರು ಹೇಳಿದ್ದಾರೆ. ಅದೇ ಭರವಸೆಯಲ್ಲಿ ಇದ್ದೇವೆ ಎಂದು ಗಂಗವ್ವ ರಿತ್ತಿ ಅವರು Oneindia Kannadaಕ್ಕೆ ತಿಳಿಸಿದ್ದಾರೆ.

ನಿಧಿ ಸಿಕ್ಕ ಜಾಗ ಬೇಡ್ರಿ!
ಇನ್ನು ಲಕ್ಕುಂಡಿ ಗ್ರಾಮದಲ್ಲಿ ವಾಸವಿದ್ದ ಜಾಗದಲ್ಲಿ ನಿಧಿ ಸಿಕ್ಕಿದೆ. ಈ ಜಾಗದಲ್ಲಿ ಮುಂದುವರಿಯುವುದಕ್ಕೆ ನಮಗೆ ಆಸೆ ಇಲ್ಲ. ಭಯ ಆಗುತ್ತದೆ. ನಾನು - ನನ್ನ ಮಗ ಇಬ್ಬರೇ ಇದ್ದೇವೆ. ಸಹೋದರರು - ಸಂಬಂಧಿಕರು ಕೊಟ್ಟ ಆರ್ಥಿಕ ನೆರವಿನಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದೆವು. ಮನೆ ಕಟ್ಟುವುದಕ್ಕೂ ಸಾಲವಾಗಿದೆ. ಈಗ ಜಾಗದ ಗೊಂದಲ ಸಾಲದ ಸಂಕಷ್ಟ ಇದೆ. ಸರ್ಕಾರ ನಮಗೊಂದು ದಾರಿ ಮಾಡಿಕೊಡಬೇಕು. ನನಗೊಂದು ಉದ್ಯೋಗ - ಮಗನ ಶಿಕ್ಷಣಕ್ಕೆ ದಾರಿ ಮಾಡಿಕೊಡಬೇಕು ಎಂದು ಗಂಗವ್ವ ರಿತ್ತಿ ಅವರು ಮನವಿ ಮಾಡಿದ್ದಾರೆ.
ಇಂದು ಗ್ರಾಮ ಸಭೆ ಸಾಧ್ಯತೆ
ಇನ್ನು ರಿತ್ತಿ ಕುಟುಂಬಕ್ಕೆ ಜಾಗ ನೀಡುವ ಬಗ್ಗೆ ಚರ್ಚೆ ನಡೆದಿದೆ. ಮನೆಯನ್ನು ಸಹ ಕಟ್ಟಿಕೊಡುವ ಬಗ್ಗೆ ಸರ್ಕಾರ ಭರವಸೆ ನೀಡಿದೆ. ನಿವೇಶನ ನೀಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮದಲ್ಲಿ ಸಭೆ ಮಾಡಿ, ಗ್ರಾಮದ ಜನ ಅಭಿಪ್ರಾಯದ ಆಧಾರದ ಮೇಲೆ ರಿತ್ತಿ ಕುಟುಂಬಕ್ಕೆ ಏನು ನೀಡಬೇಕು ಎಂದು ನಿರ್ಧರಿಸುವ ಸಾಧ್ಯತೆ ಇದೆ.
ಜನವರಿ 22ರಂದು ಗ್ರಾಮದ ಜನ ಸೇರಿ ಸಭೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಸಚಿವ ಎಚ್.ಕೆ ಪಾಟೀಲ್ ಅವರು ಜನವರಿ 26ರ ಗಣರಾಜ್ಯೋತ್ಸವದಂದು ರಿತ್ತಿ ಕುಟುಂಬಕ್ಕೆ ಸರ್ಕಾರದಿಂದ ಯಾವ ಸೌಲಭ್ಯ ಕೊಡಲಾಗುವುದು ಹಾಗೂ ಏನೆಲ್ಲಾ ವ್ಯವಸ್ಥೆ ಮಾಡಲಿದ್ದೇವೆ ಎನ್ನುವುದನ್ನು ಬಹಿರಂಗಪಡಿಸಲಿದ್ದೇವೆ ಎಂದು ಹೇಳಿದ್ದಾರೆ.












Click it and Unblock the Notifications