ಗೌಪ್ಯವಾಗಿ ಕೋಡಿಮಠದ ಸ್ವಾಮೀಜಿ ಭೇಟಿಯಾದ ಜಿ.ಪರಮೇಶ್ವರ್, ಚರ್ಚೆಯಾಗಿದ್ದೇನು?
ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೋಡಿಮಠಕ್ಕೆ ಭೇಟಿ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಬ್ರೇಕ್‌ಫಾಸ್ಟ್ ಮೀಟಿಂಗ್ ಸಂಚಲನ ಸೃಷ್ಟಿಸಿದೆ. ಹೈಕಮಾಂಡ್ ಸೂಚನೆ ಮೇರೆಗೆ ಈ ಬೆಳವಣಿಗೆ ನಡೆದಿದ್ದು, ಸದ್ಯದಲ್ಲೇ ಇಬ್ಬರನ್ನೂ ದೆಹಲಿಗೆ ಕರೆಸಿ ಮಾತನಾಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್ ಅವರ ನಡೆ ಅಚ್ಚರಿ ಮೂಡಿಸಿದೆ. ರಾಜಕೀಯ ಭವಿಷ್ಯವಾಣಿಗೆ ಹೆಸರುವಾಸಿಯಾಗಿರುವ ಕೋಡಿಮಠದ ಸ್ವಾಮೀಜಿಯನ್ನು ಪರಮೇಶ್ವರ್ ಅವರು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಹೌದು, ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಗೃಹ ಸಚಿವ ಜಿ.ಪರಮೇಶ್ವರ್ ಅವರು ಕೋಡಿಮಠಕ್ಕೆ ಭೇಟಿ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠ ಶ್ರೀಗಳು ಆಗಾಗ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಬಗ್ಗೆ ಸ್ಫೋಟಕ ಭವಿಷ್ಯ ನುಡಿಯುವಲ್ಲಿ ಖ್ಯಾತಿ ಪಡೆದಿದ್ದಾರೆ. ಇಂದು ದಿಢೀರನೆ ಪರಮೇಶ್ವರ್ ಅವರು ಇಲ್ಲಿಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.

ಪರಮೇಶ್ವರ್ ಅವರು ಕೋಡಿಮಠದ ಸ್ವಾಮೀಜಿ ಅವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಹಾಗೂ ಪೊಲೀಸರಿಗೆ ಪರಮೇಶ್ವರ್ ಅವರು ಯಾವುದೇ ಮಾಹಿತಿ ನೀಡದೆ ದಿಢೀರ್ ಮಠಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ರಾಜಕೀಯ ಭವಿಷ್ಯಕ್ಕೆ ಪ್ರಸಿದ್ಧಿ ಪಡೆದಿರುವ ಕೋಡಿಶ್ರೀಗಳ ಬಳಿ ತಮ್ಮ ಮುಂದಿನ ರಾಜಕೀಯದ ಹಾದಿಯ ಬಗ್ಗೆ ಪರಮೇಶ್ವರ್ ಚರ್ಚಿಸಿದ್ದಾರೆ ಎನ್ನಲಾಗಿದೆ.
ಸ್ಥಳೀಯ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ, ಸ್ಥಳೀಯ ಕಾಂಗ್ರೆಸ್ ಮುಖಂಡರು ಸೇರಿ ಯಾರಿಗೂ ಮಾಹಿತಿ ನೀಡದೇ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿರುವ ಕೋಡಿಮಠಕ್ಕೆ ಪರಮೇಶ್ವರ್ ಅವರು ದಿಢೀರ್ ಭೇಟಿ ನೀಡಿದ್ದಾರೆ. ರಾಜ್ಯದಲ್ಲಿ ಸಿಎಂ ಕುರ್ಚಿ ಕದನ ನಡೆಯುತ್ತಿರುವಾಗಲೇ ಕೋಡಿಮಠಕ್ಕೆ ಪರಮೇಶ್ವರ್ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಜೊತೆ ಗೌಪ್ಯವಾಗಿ ಚರ್ಚೆ ನಡೆಸಿರುವ ಅವರು ತಮ್ಮ ರಾಜಕೀಯ ಭವಿಷ್ಯ ಕೇಳಿ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ.
ಕೋಡಿಶ್ರೀಗಳು ಈ ಹಿಂದೆ ಹಲವು ಬಾರಿ ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದರು. ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಸಿದ್ದರಾಮಯ್ಯ ಅವರಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಅಧಿಕಾರ ಬಿಡಬೇಕು ಎಂದೆಲ್ಲ ಇತ್ತೀಚೆಗೆ ಕೋಡಿಶ್ರೀ ಭವಿಷ್ಯ ನುಡಿದಿದ್ದರು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುತ್ತಾರಾ? ಅಥವಾ ಇಲ್ಲವಾ ಎಂದು ಹಲವು ಬಾರಿ ಭವಿಷ್ಯ ನುಡಿದಿದ್ದರು.












Click it and Unblock the Notifications