ಮಾರ್ಚ್ ನಂತರ ರಾಜ್ಯ ರಾಜಕೀಯ ಬದಲಾವಣೆ: ಪರಮೇಶ್ವರ ಹೇಳಿದ್ದೇನು?
ಬೆಂಗಳೂರು, ಜನವರಿ 15: ರಾಜ್ಯ ಕಾಂಗ್ರೆಸ್‌ನಲ್ಲಿ ಡಿನ್ನರ್ ಪಾಲಿಟಿಕ್ಸ್ ತಾರಕಕ್ಕೇರಿದೆ. ಈ ನಡುವೆ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ರಚನೆ ಕುರಿತು ಗುಸು ಗುಸು ಕೇಳಿ ಬರುತ್ತಿದ್ದು, ಬಜೆಟ್ ಅಧಿವೇಶನ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿದೆ ಎನ್ನುವ ಚರ್ಚೆ ಹುಟ್ಟಿಕೊಂಡಿದೆ.
ಸದಾಶಿವನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ ನಂತರ ರಾಜಕೀಯ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಶಾಸ್ತ್ರ ಹೇಳಲು ಬರುವುದಿಲ್ಲ. ಜೋತಿಷ್ಯ ಹೇಳುವುದಿದ್ದರೆ ನಾನು ಹೇಳುತ್ತಿದ್ದೆ ಎಂದು ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಹೇಳಿದರು.

ಹಸುವಿನ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಓರ್ವನನ್ನು ಬಂಧಿಸಲಾಗಿದೆ. ಆತನಿಗೆ ಯಾರಾದರು ಸಹಕಾರ ನೀಡಿದ್ದಾರೆಯೇ ಎಂಬುದು ತನಿಖೆಯಲ್ಲಿ ಹೊರಬರುತ್ತದೆ. ಆತನಿಂದ ಯಾರಾದರು ಒತ್ತಾಯ ಪೂರ್ವಕವಾಗಿ ಮಾಡಿಸಿರುವುದು ಹೊರಬಂದರೆ ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಬಿಜೆಪಿಯವರು, ಇಷ್ಟ ಬಂದಂತೆ ಮಾತನಾಡಿರುವುದಕ್ಕೆಲ್ಲ ಉತ್ತರಿಸಲು ಆಗುವುದಿಲ್ಲ. ಘಟನೆಗೆ ಬಿಜೆಪಿಯವರೇ ಸಹಕರಿಸಿದ್ದಾರೆ ಎಂದು ನಾನು ಹೇಳುತ್ತೇನೆ. ಆ ರೀತಿ ಆಗುತ್ತದೆಯೇ? ಎಲ್ಲದರಲ್ಲು ರಾಜಕೀಯ ಮಾಡಿದರೆ ಜನ ಗಮನಿಸುತ್ತಾರೆ ಎಂದು ಹೇಳಿದರು.
ಜಾತಿಗಣತಿ ವರದಿಯ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವುದು ಈಗಿನ ಕೆಲಸ. ಅನುಷ್ಟಾನಗೊಳಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟಿರುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಜಾತಿಗಣತಿ ವರದಿಯ ಸೀಲ್ಡ್ ಕವರ್‌ನ್ನು ಸಚಿವ ಸಂಪುಟ ಸಭೆಯಲ್ಲಿ ತೆರೆಯಬೇಕು. ಅದಕ್ಕು ಮುಂಚೆ ತೆರೆಯಬಾರದು. ಒಂದು ವೇಳೆ ತೆರೆದರೆ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ ಎಂದರು.
ವರದಿ ಬಗ್ಗೆ ಚರ್ಚೆ ಆಗುತ್ತದೆಯೇ ಎಂಬುದರ ಕುರಿತು ಹೇಳಲಾಗುವುದಿಲ್ಲ. ಒಂದಷ್ಟು ವಿಷಯಗಳು ಗೊತ್ತಾಗುತ್ತವೆ. ಸರ್ಕಾರವು 160 ಕೋಟಿ ರೂ. ಖರ್ಚು ಮಾಡಿ ವರದಿ ತರಿಸಿಕೊಳ್ಳಲಾಗಿದೆ. ವರದಿಯಲ್ಲಿರುವ ಅಂಶಗಳು ಸಾರ್ವಜನಿಕರಿಗೆ ಗೊತ್ತಾಗಬೇಕಲ್ಲವೇ ಅನುಷ್ಟಾನಗೊಳಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟಿರುವ ವಿಚಾರ. ಸರ್ಕಾರದ ತೀರ್ಮಾನ ಅಂತಿಮ. ಜಾತಿಗಣತಿ ವರದಿಯಲ್ಲಿರುವ ಮಾಹಿತಿ ಹೊರಗಡೆ ಬರಬೇಕಲ್ಲವೇ? ಅದಕ್ಕಾಗಿ ಒತ್ತಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ಸಮುದಾಯಗಳ ಸಭೆಗಳನ್ನು ಪಕ್ಷವೇ ಮಾಡಲಿ. ಅದರಲ್ಲಿ ಏನು ತಪ್ಪಿದೆ. ನಮಗೆ ನಮ್ಮ ಸಮಸ್ಯೆ ಬಗೆಹರಿಯಬೇಕು. ಪಕ್ಷ ಅಂದರೆ ನಾವಲ್ಲವೇ? ಪಕ್ಷ ಅಂದರೆ ಬೇರೆ ಇದೆಯಾ? ನಾವೇ ಪಕ್ಷ, ನಾವಿದ್ದರೆ ಪಕ್ಷ. ಜನಸಮುದಾಯ ಕಟ್ಟಿರುವ ಪಕ್ಷ ಅಲ್ಲವೇ ಕಾಂಗ್ರೆಸ್. ಕಾಂಗ್ರೆಸ್ ಪಕ್ಷವೇ ಒಂದು ಆಂದೋಲನ. ನಮ್ಮದು ಕೇಡರ್ ಪಾರ್ಟಿ ಅಲ್ಲ ಎಂದರು.
ಸಚಿವ ತಿಮ್ಮಾಪುರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ತಿಮ್ಮಸಪುರ ಅವರಿಗೆ ಸಾಮರ್ಥ್ಯ ಇದೆಯಲ್ಲವೇ. ಮೂವತ್ತು ವರ್ಷಕ್ಕು ಹೆಚ್ಚು ರಾಜಕೀಯ ಮಾಡಿದ್ದಾರೆ. ಸಿಎಂ ಬದಲಾವಣೆ ವಿಚಾರದ ಕುರಿತು ಯಾರು ಮಾತನಾಡಬಾರದು ಎಂದು ಹೈಕಮಾಂಡ್ ಪ್ರತಿನಿಧಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಹೇಳಿದ್ದಾರೆ. ಹೀಗಾಗಿ ಅದರೆ ಬಗ್ಗೆ ಕಡಿಮೆ ಮಾತನಾಡುತ್ತೇವೆ ಎಂದು ಹೇಳಿದರು.












Click it and Unblock the Notifications