• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ಪೆಟ್ರೋಲ್, ಡೀಸೆಲ್ ದರ ಇಳಿಕೆ

|
Google Oneindia Kannada News

ಬೆಂಗಳೂರು, ನ.4: ಕರ್ನಾಟಕ ಸಹಿತ ದೇಶದಾದ್ಯಂತ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಲು ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಾಖ್ಯಾನಿಸಿದರು.

'ಉಪಚುನಾವಣೆ ಫಲಿತಾಂಶ ಬರುತ್ತಿದ್ದಂತೆ, ಮತದಾರನ ತೀರ್ಪಿನಿಂದ ಬೆಳಕು ಬರಲಿದೆ ಎಂದು ನಾನು ನಿನ್ನೆಯೇ ಹೇಳಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ, ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಈ ಉಪಚುನಾವಣೆ ಫಲಿತಾಂಶದ ನಂತರ ಇಂಧನ ದರ ಇಳಿಕೆಯೇ ಸಾಕ್ಷಿ ಎಂದು ಅವರು ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕಡಿಮೆ ಮಾಡಿವೆ. ದೇಶಾದ್ಯಂತ ನಡೆದ ಉಪಚುನಾವಣೆಯಲ್ಲಿ ಬಹುತೇಕ ಕಡೆ ಸರ್ಕಾರದ ವಿರುದ್ಧ ಜನ ಮತದಾನ ಮಾಡಿದ್ದಾರೆ. ನಾವು ಕೂಡ ಈ ಚುನಾವಣೆ ಮೂಲಕ ಸಂದೇಶ ರವಾನಿಸಬೇಕು, ಎಚ್ಚರಿಕೆ ನೀಡಬೇಕು ಎಂದು ಮತದಾರರಲ್ಲಿ ಕೇಳಿಕೊಂಡಿದ್ದೆವು. ಅದರಂತೆ ಪ್ರಬುದ್ಧ ಮತದಾರರು ಮತ ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೆ ಮಾಲೀಕರು ಅನ್ನೋದು ಮತ್ತೆ ಸಾಬೀತಾಗಿದೆ. ಹೀಗಾಗಿಯೇ ಇಂಧನ ದರ ಕಡಿಮೆ ಆಗಿದೆ ಎಂದು ಹೇಳಿದರು.

'ಇಂಧನ ಬೆಲೆ ಇಳಿಕೆ ದೀಪಾವಳಿ ಉಡುಗೊರೆ ಎನ್ನುತ್ತಿದ್ದಾರೆ. 10 ರೂ ಇರುವುದನ್ನು 5 ರೂ. ಮಾಡಿದಾಗ ಅದು ಉಡುಗೊರೆ ಆಗುತ್ತದೆ. ಆದರೆ 50-60 ರೂ. ಇರಬೇಕಾದ ಇಂಧನ ಬೆಲೆ ಈಗ ಎಷ್ಟಿದೆ? ಇಷ್ಟು ದಿನ ಪಿಕ್ ಪಾಕೆಟ್ ಮಾಡಿದ್ದಾರೆ. ನೀವು ಸ್ಕೂಟರ್, ಕಾರ್ ಯಾವುದಾದರೂ ಸರಿ. ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಮಾಜಿ ಪ್ರಧಾನಿಗಳಾದ ನರಸಿಂಹರಾವ್, ವಾಜಪೇಯಿ, ಮನಮೋಹನ್ ಸಿಂಗ್ ಹಾಗೂ ಈಗಿನವರ ಅವಧಿಯಲ್ಲಿ ಕಚ್ಚಾತೈಲ ಬೆಲೆ ಎಷ್ಟಿತ್ತು, ಎಷ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ತಾಳೆ ಮಾಡಿ ನೋಡಿ. ಕಚ್ಚಾತೈಲ ಬೆಲೆ ಇಳಿದಾಗ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದರಾ?' ಎಂದು ಕೇಳಿದರು.

ನ.14ರಿಂದ ದೇಶದಾದ್ಯಂತ ಜನಜಾಗೃತಿ:

ಅಡುಗೆ ಅನಿಲ ಸೇರಿ ಎಲ್ಲ ವಸ್ತುಗಳ ಬೆಲೆ ಇಳಿಕೆ ಆಗುವವರೆಗೂ ಕಾಂಗ್ರೆಸ್‌ನಿಂದ ನ.14 ರಿಂದ ದೇಶದೆಲ್ಲೆಡೆ ಜನರಲ್ಲಿ ಜಾಗೃತಿ ಮೂಡಿಸುವ ಹೋರಾಟ ಮುಂದುವರಿಸುತ್ತದೆ. ಈ ಹೋರಾಟ ಇಲ್ಲಿಗೇ ನಿಲ್ಲಬಾರದು. ಯುವಕರಿಗೆ ಉದ್ಯೋಗ ಸಿಗಬೇಕು. ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಕಬ್ಬಿಣ, ಸೀಮೆಂಟ್ ದಿನಬಳಕೆ ವಸ್ತುಗಳ ಬೆಲೆಯೂ ಇಳಿಯಬೇಕು.ಇಂಧನ ಬೆಲೆ ಇಳಿಸಿದ ಸರ್ಕಾರದ ತೀರ್ಮಾನ ಸ್ವಾಗತಿಸುತ್ತೇವೆ. ಆದರೆ ತೆರಿಗೆ ಹೆಸರಲ್ಲಿ ಲೂಟಿ ಮಾಡಿರುವ ಹಣ ಜನರಿಗೆ ತಲುಪಿಸಲು ಕಾರ್ಯಕ್ರಮ ರೂಪಿಸಬೇಕು. ಜನ ಈ ಆಡಳಿತ ವಿರುದ್ಧ ಬೇಸತ್ತಿದ್ದಾರೆ ಎಂಬುದು ಈಗಾಗಲೇ ಎಲ್ಲರಿಗೂ ಮನದಟ್ಟಾಗಿದೆ ಎಂದರು.

ಕಲ್ಲಿದ್ದಲು ಕೊರತೆ ವಿಚಾರದಲ್ಲಿ ಸರ್ಕಾರದ ಕಾರ್ಯಸೂಚಿ ಏನು?:

'ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಇದರಿಂದ ರಾಜ್ಯಕ್ಕೆ ಯಾವುದೇ ಬಂಡವಾಳ ಹೂಡಿಕೆದಾರರು ಬರುವುದಿಲ್ಲ. ಮುಂದೆ ಉದ್ಯೋಗ ಮತ್ತಷ್ಟು ನಷ್ಟವಾಗುವ ಸಾಧ್ಯತೆ ಇದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಈ ಬಗ್ಗೆ ನ.7 ರಂದು ನಮ್ಮ ನಾಯಕರ ಜತೆ ಚರ್ಚೆ ಮಾಡಿ ಕಾರ್ಯಕ್ರಮದ ವಿವರ ನೀಡುತ್ತೇನೆ' ಎಂದು ಹೇಳಿದರು.

ರಾಜ್ಯಕ್ಕೆ ಒಂದು ದಿನಕ್ಕೆ ಮಾತ್ರ ಸಾಕಾಗುವ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಸದ್ಯಕ್ಕೆ ಹೆಚ್ಚು ಮಳೆ ಇರುವುದರಿಂದ ಪರಿಸರ ಕೈ ಹಿಡಿದಿದೆ. ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆಗೆ ಸರ್ಕಾರದ ಕಾರ್ಯಸೂಚಿ ಏನು? ಎಂದು ತಿಳಿಸಬೇಕು. ಕಲ್ಲಿದ್ದಲು ಮಂತ್ರಿ ನಮ್ಮವರೇ ಇದ್ದಾರೆ. ಹಿಂದೆ ಹೈಕೋರ್ಟ್ ತೀರ್ಪು ಪ್ರಕಾರ ಕಲ್ಲಿದ್ದಲು ಬಳಸಿಕೊಳ್ಳಲು ಮುಂದಾದಾಗ ನಮ್ಮ ಸರ್ಕಾರಕ್ಕೆ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ, ಅದನ್ನು ತಪ್ಪಿಸಲು ಆಗಿನ ಕೇಂದ್ರ ಸಚಿವರು ಅನುಮತಿ ನೀಡಿರಲಿಲ್ಲ. ಬದಲಿಗೆ ನಮಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ಈಗ ಅವರದೇ ಸರ್ಕಾರ ಇದೆ ಎಂದು ಅನುಮತಿ ನೀಡಿದ್ದಾರೆ ಎಂದರು.

ಪ್ರಹ್ಲಾದ್ ಜೋಷಿ ಅವರು ರಾಜ್ಯಕ್ಕೆ ನಿತ್ಯ 24 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅವರು ಹೇಳಿರುವ ಕಲ್ಲಿದ್ದಲು ಇನ್ನೂ ರಸ್ತೆಯಲ್ಲಿಯೇ ಬರುತ್ತಿದೆ. ಬಳ್ಳಾರಿ, ರಾಯಚೂರಿಗೆ ಹೋಗಿ, ಅಲ್ಲೆಲ್ಲ ಎಷ್ಟು ಯುನಿಟ್ ವಿದ್ಯುತ್ ಸಾಮರ್ಥ್ಯ ಇದೆ, ಎಷ್ಟು ಉತ್ಪಾದನೆ ಆಗುತ್ತಿದೆ, ಎಷ್ಟು ಘಟಕಗಳು ಕಾರ್ಯ ಮಾಡುತ್ತಿವೆ ಎಂಬುದನ್ನು ಅವರು ಹೋಗಿ ನೀಡಬೇಕು ಎಂದು ಹೇಳಿದರು.

ಬೊಮ್ಮಾಯಿ ಆಡಳಿತಕ್ಕೆ ಹಾವೇರಿ ಜನರೇ ತೀರ್ಪು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸಾಧನೆ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಒಳ್ಳೆಯ ಜಾಹೀರಾತು ನೀಡಲಿ. ಅವರ ಸಾಧನೆ ನೋಡಿ ಅವರದೇ ಜಿಲ್ಲೆ ಜನ ಉಪಚುನಾವಣೆಯಲ್ಲಿ ತೀರ್ಪು ಕೊಟ್ಟಿದ್ದಾರೆ. ಅವರ ಸಾಧನೆ ಬಗ್ಗೆ ನಮ್ಮ ತಕರಾರು ಏನೂ ಇಲ್ಲ. ನಾವು ಅವರ ಆಡಳಿತದ ಬಗ್ಗೆ ದೂರುತ್ತಿಲ್ಲ. ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿಲ್ಲ. ಅವರ ನಾಯಕತ್ವದಲ್ಲಿಯೇ ಚುನಾವಣೆ ಮಾಡಬೇಕು ಎಂದು ಅವರ ಪಕ್ಷದ ನಾಯಕರೇ ಹೇಳಿದ್ದಾರೆ. ಅದು ಅವರ ಇಚ್ಛೆ' ಎಂದಷ್ಟೇ ಹೇಳಿದರು.

ಸಿ.ಪಿ. ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, 'ಕೆಲವರು ಸುದ್ದಿ ಹರಿಯಬಿಟ್ಟು ತಮ್ಮ ಮಾರುಕಟ್ಟೆ ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಅವರು ಬೆದರಿಕೆ ಹಾಕಿ ಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಹಿಂದೆ ಪರೀಕ್ಷೆ ಬರೆದಿದ್ದೇವೆ ಎಂದು ಹೇಳಿದ್ದು ಮಾತ್ರ ಗೊತ್ತಿದೆ. ಅವರು ಪಾಸಾಗಿದ್ದಾರೋ, ಇಲ್ಲವೋ ಅವರನ್ನೇ ಕೇಳಿ.' ಎಂದು ಚಟಾಕಿ ಹಾರಿಸಿದರು.

English summary
Petrol and Diesel price reduction by Central and State govt is the impact of By Election Results days KPCC president DK Shivakumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X