Free Electricity: ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಗಣನೀಯ ಹೆಚ್ಚಳ, ಎಲೆಕ್ಟ್ರಿಕ್ ಸ್ಟೌವ್‌ಗಳಿಗೆ ಫುಲ್ ಡಿಮ್ಯಾಂಡ್!
ಬೆಂಗಳೂರು, ಮೇ 24: ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಭರವಸೆ ನೀಡಿದ್ದ ಕಾಂಗ್ರೆಸ್, ಅಧಿಕಾರಕ್ಕೆ ಬಂದ ನಂತರ ಮೊದಲ ಕ್ಯಾಬಿನೆಟ್‌ನಲ್ಲೇ ಅದನ್ನು ಕಾರಿ ಮಾಡಲು ಒಪ್ಪಿಗೆ ಪಡೆದುಕೊಂಡಿದೆ. ಆದಷ್ಟು ಬೇಗ ಅದಕ್ಕೆ ನಿಯಮಾವಳಿಗಳನ್ನು ರೂಪಿಸಿ ಜಾರಿಗೆ ತರುವುದಾಗಿ ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.
ಉಚಿತ ವಿದ್ಯುತ್ ಯೋಜನೆ ಜಾರಿಯಾಗುವ ಮುನ್ಸೂಚನೆ ಸಿಗುತ್ತಿದ್ದಂತೆ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇವುಗಳ ಮಾರಾಟ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಅದರಲ್ಲೂ ನಗರ ಪ್ರದೇಶದ ಜನ ಎಲೆಕ್ಟ್ರಿಕ್ ಸ್ಟೌವ್‌ಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಉಚಿತ ಗ್ಯಾಸ್ ಕೊಟ್ಟ ಭರವಸೆ ಕೊಟ್ಟಿದ್ದರೂ, ಉಚಿತ ಕರೆಂಟ್ ಇರುವಾಗ ಎರಡನ್ನೂ ಬಳಸುವ ಐಡಿಯಾ ಜನಗಳದ್ದು.

ಇನ್ನು ಇತರೆ ಎಲೆಕ್ಟ್ರಾನಿಕ್ ವಸ್ತುಗಳಾದ, ಏರ್ ಕೂಲರ್, ಫ್ಯಾನ್, ಎಲೆಕ್ಟ್ರಿಕ್ ಗೀಸರ್ ಗಳ ಮಾರಾಟದಲ್ಲಿ ಕೂಡ ಹೆಚ್ಚಳವಾಗಿದೆ. ಮೊದಲೆಲ್ಲಾ ಹೆಚ್ಚಿನ ವಿದ್ಯುತ್ ಬಿಲ್ ಬರುತ್ತದೆ ಎಂದು ಏರ್ ಕೂಲರ್, ಏರ್ ಕಂಡಿಷನರ್ ಬಳಲಸು ಮಧ್ಯಮ ವರ್ಗದ ಜನ ಹಿಂದೇಟು ಹಾಕುತ್ತಿದ್ದರು, ಉಚಿತ ವಿದ್ಯುತ್ ಘೋಷಣೆ ನಂತರ ಇವುಗಳ ಮಾರಾಟದಲ್ಲಿ ಕೂಡ ಹೆಚ್ಚಳವಾಗಿದೆ ಎನ್ನುತ್ತಾರೆ ಎಲೆಕ್ಟ್ರಾನಿಕ್ ಅಂಗಡಿಗಳ ಮಾಲೀಕರು.
ಸಾಧಾರಣವಾಗಿ ಎಸಿ, ಗೀಸರ್ ಬಳಸದ ಮನೆಗಳಲ್ಲಿ ತಿಂಗಳಿಗೆ 50-60 ಯುನಿಟ್ ವಿದ್ಯುತ್ ಅಷ್ಟೆ ಖರ್ಚಾಗುತ್ತದೆ, ಈಗ ಸರ್ಕಾರವೇ 200 ಯುನಿಟ್ ವಿದ್ಯುತ್ ಉಚಿತ ಮಾಡಿರುವುದರಿಂದ ಸಮರ್ಪಕವಾಗಿ ಬಳಸಿಕೊಳ್ಳಲು ಜನ ಈಗಾಗಲೇ ಪ್ಲಾನ್ ಮಾಡಿಕೊಂಡಿದ್ದಾರೆ.
ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳು ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅಂಗಡಿಗಳ ಮಾಲೀಕರೇ ಮಾಹಿತಿ ನೀಡಿದ್ದಾರೆ. ಜನರೇನೊ ಈಗ ಉಚಿತ ಕರೆಂಟ್ ಸಿಗುತ್ತೆ ಅಂತ ಎಲ್ಲಾ ಖರೀದಿ ಮಾಡ್ತಿದ್ದಾರೆ, ಆದರೆ ಸರ್ಕಾರ ಏನಾದರೂ ಉಚಿತ ವಿದ್ಯುತ್ ನೀಡಲು ಹಲವು ನಿಯಮಗಳನ್ನು ರೂಪಿಸಿದರೆ ಆಮೇಲೆ ಸರ್ಕಾರ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ.
ಗ್ರಾಮೀಣ ಭಾಗಗಳಲ್ಲಿ ಕೂಡ ಮಾರಾಟ ಹೆಚ್ಚಳ
ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಕಡಿಮೆ ಇರುತ್ತದೆ. ಈಗ ಉಚಿತ ವಿದ್ಯುತ್ ಘೋಷಣೆ ಮಾಡಿರುವುದರಿಂದ ಗ್ರಾಮೀಣ ಪ್ರದೇಶದ ಜನ ಕೂಡ ವಾಷಿಂಗ್ ಮೆಷಿನ್, ಏರ್ ಕೂಲರ್, ಎಲೆಕ್ಟ್ರಿಕ್ ಗೀಸರ್, ಎಲೆಕ್ಟ್ರಿಕ್ ಸ್ಟೌವ್ ನಂತಹ ವಸ್ತುಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಉಚಿತ ವಿದ್ಯುತ್ ಏನೋ ಕೊಡಬಹುದು ಆದರೆ ಹಳ್ಳಿಗಳಿಗೆ ನಿರಂತರ ವಿದ್ಯುತ್ ಪೂರೈಕೆ ಕೊಟ್ರೆ ಸಾಕು ಅನ್ನೋದು ಜನರ ಮಾತು.
ದಿನಕ್ಕೆ ಹತ್ತಾರು ಬಾರಿ ಲೋಡ್ ಶೆಡ್ಡಿಂಗ್ ಮಾಡುವುದನ್ನು ಬಿಟ್ಟರೆ ಸಾಕು, ನಗರ ಪ್ರದೇಶಗಳಂತೆ ಹಳ್ಳಿಗಳಿಗೂ 24 ಗಂಟೆ ವಿದ್ಯುತ್ ಕೊಡಬೇಕು ಎನ್ನುವುದು ಗ್ರಾಮೀಣ ಜನರ ಬೇಡಿಕೆ. ಕಾಂಗ್ರೆಸ್ ಸರ್ಕಾರವಾದರೂ ಹಳ್ಳಿಗಳಿಗೂ ನಿರಂತರ ವಿದ್ಯುತ್ ಪೂರೈಕೆ ಮಾಡಲು ಕ್ರಮ ವಹಿಸುತ್ತಾ ಎಂದು ಕಾದು ನೋಡಬೇಕಿದೆ.












Click it and Unblock the Notifications