ಕೆಇಎ ಪರೀಕ್ಷಾರ್ಥಿಗಳಿಗೆ ಉಚಿತ ಆಟೋ: ಎಎಪಿಯಿಂದ ಸೌಲಭ್ಯ
ಬೆಂಗಳೂರು, ಅಕ್ಟೋಬರ್ 28: ನಿಗಮ-ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುತ್ತಿರುವ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಯುವ ಘಟಕ ಉಚಿತ ಆಟೋ ಪ್ರಯಾಣ ಸೌಲಭ್ಯವನ್ನು ಕಲ್ಪಿಸಿದೆ.
ವಕೀಲ ಹಾಗೂ ಆಮ್ ಆದ್ಮಿ ಪಕ್ಷದ ರಾಜ್ಯ ಯುವಘಟಕದ ಅಧ್ಯಕ್ಷ ಲೋಹಿತ್ ಜಿ. ಹನುಮಾಪುರ ಅವರ ನೇತೃತ್ವದಲ್ಲಿ ನೂರಕ್ಕು ಹೆಚ್ಚು ಆಟೋಗಳು ನಗರದಾದ್ಯಂತ ಉಚಿತ ಪ್ರಯಾಣ ಸೌಲಭ್ಯವನ್ನು ನೀಡುತ್ತಿವೆ.

ಶನಿವಾರ ಬೆಂಗಳೂರು ನಗರದಾದ್ಯಂತ 50ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸಕಾಲದಲ್ಲಿ ಉಚಿತ ಸೌಲಭ್ಯ ಸಿಕ್ಕಿರುವುದರಿಂದ ವಿದ್ಯಾರ್ಥಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಸೌಲಭ್ಯ ಅಕ್ಟೋಬರ್ 29, ಭಾನುವಾರವು ಲಭ್ಯವಿರುವುದಾಗಿ ಲೋಹಿತ್ ಜಿ. ತಿಳಿಸಿದ್ದಾರೆ.
ಟ್ರಾಫಿಕ್ ಹಾಗೂ ಮಾಲಿನ್ಯ ನಿಯಂತ್ರಣದ ದೃಷ್ಟಿಯಲ್ಲಿ ದೆಹಲಿ ಮಾದರಿಯ ಪ್ರೀಮಿಯಂ ಬಸ್‌ಗಳ ಸಂಚಾರವನ್ನು ಬೆಂಗಳೂರಿನಲ್ಲೂ ಆರಂಭಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸರ್ಕಾರವು "ಪ್ರೀಮಿಯಂ ಬಸ್ ಅಗ್ರಿಗೇಟರ್ ಪಾಲಿಸಿ 2023"ಗೆ ಅನುಮೋದನೆ ನೀಡಿದೆ.

ಈ ಮೂಲಕ ಬಡತನ ರೇಖೆಗಿಂತ ಮೇಲಿರುವ ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗದವರನ್ನು ಬಸ್‌ಗಳಲ್ಲಿ ಸಂಚರಿಸುವಂತೆ ಉತ್ತೇಜನ ನೀಡುವ ಸಲುವಾಗಿ ಆ್ಯಪ್ ಆಧಾರಿತ ಆನ್‌ಲೈನ್ ಬಸ್ ಸೇವೆ ಯೋಜನೆಯನ್ನು ಆರಂಭಿಸಲಾಗಿದೆ. ಇ-ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ರಾಜ್ಯಪಾಲರ ಅನುಮೋದನೆ ಸಿಗುತ್ತಿದ್ದಂತೆ ಪ್ರೀಮಿಯಂ ಬಸ್ ಸೇವೆಗೆ ಚಾಲನೆ ಸಿಗಲಿದೆ.
ಈ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಅವರು, "ಬಡವರು ಮತ್ತು ಬಡ ಮಧ್ಯಮ ವರ್ಗದವರು ಬಸ್‌ಗಳಲ್ಲಿ ಸಂಚರಿಸುತ್ತಾರೆ. ಹಾಗೆಯೇ ಮಧ್ಯಮ ವರ್ಗದವರು ಮತ್ತು ಶ್ರೀಮಂತ ವರ್ಗದವರು ತಮ್ಮ ಖಾಸಗಿ ವಾಹನಗಳನ್ನು ಬಿಟ್ಟು ಬಸ್‌ಗಳಲ್ಲೇ ದಿನನಿತ್ಯ ಓಡುವಂತೆ ಉತ್ತೇಜನ ನೀಡುವ ಸಲುವಾಗಿ ದೆಹಲಿ ಮಾದರಿಯ ಪ್ರೀಮಿಯಂ ಬಸ್‌ಗಳ ಸೇವೆಯನ್ನು ರಾಜ್ಯದ ಬೆಂಗಳೂರಿನಂತಹ ನಗರಗಳಲ್ಲಿ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರನ್ನು ಒತ್ತಾಯಿಸಿದರು.
ಎಸಿ, ವೈಫೈ, ಜಿಪಿಎಸ್, ಸಿಸಿಟಿವಿ ಸೇರಿದಂತೆ ಲಕ್ಸೂರಿ ಖಾಸಗಿ ವಾಹನಗಳಲ್ಲಿರುವ ಎಲ್ಲ ರೀತಿಯ ವ್ಯವಸ್ಥೆಗಳನ್ನು ಒಳಗೊಂಡ ಆಧುನಿಕ ಬಸ್‌ಗಳು ಸಂಚಾರ ಆರಂಭಿಸಿದರೆ ಸ್ವಂತ ಕಾರುಗಳನ್ನು ಬಿಟ್ಟು ಬಸ್‌ಗಳಲ್ಲೇ ಸಂಚರಿಸಲು ಆರಂಭಿಸುತ್ತಾರೆ. ಈ ಮೂಲಕ ಸಂಚಾರ ದಟ್ಟಣೆ, ವಾಯು ಮಾಲಿನ್ಯದಂತಹ ಪ್ರಮುಖ ಸಮಸ್ಯೆಗಳನ್ನು ಹತೋಟಿಗೆ ತರಬಹುದು. ಪ್ರೀಮಿಯಂ ಬಸ್‌ಗಳಲ್ಲಿ ಆನ್‌ಲೈನ್ ಮೂಲಕ ಸೀಟ್ ಕಾಯ್ದಿರಿಸುವುದು ಹಾಗೂ ಪೇಮೆಂಟ್ ಮಾಡುವ ಅವಕಾಶವಿದೆ. ನಿಂತು ಪ್ರಯಾಣಿಸುವುದಕ್ಕೆ ಅವಕಾಶವಿಲ್ಲ. ಎಲ್ಲರಿಗೂ ಆಸನದ ಸಿಗಲಿದೆ. ಬಸ್ ಒಳಗೆ ಟಿಕೆಟ್ ಹರಿಯುವ ಸಂಪ್ರದಾಯ ಇರುವುದಿಲ್ಲ. ನೂಕುನುಗ್ಗಲು, ಅನವಶ್ಯಕ ಗದ್ದಲ ಇರುವುದಿಲ್ಲ. ಸ್ವಂತ ಗಾಡಿಯಲ್ಲಿ ಆರಾಮದಾಯಕವಾಗಿ, ಅನುಕೂಲಕರವಾಗಿ ಪ್ರಯಾಣಿಸಿದಂತೆ ದಿನನಿತ್ಯ ಓಡಾಡಬಹುದು ಎಂದು ಜಗದೀಶ್ ವಿವರಿಸಿದರು.












Click it and Unblock the Notifications