RTO ಹೊಸ ಕಚೇರಿ-ಚಾಲನಾ ಪರೀಕ್ಷಾ ಪಥಕ್ಕೆ ರಾಮಲಿಂಗಾ ರೆಡ್ಡಿ ಶಂಕುಸ್ಥಾಪನೆ
ಬೆಂಗಳೂರು, ನವೆಂಬರ್ 17: ಇತ್ತೀಚೆಗೆ ಚನ್ನಗಿರಿ ತಾಲೂಕು ಮತ್ತು ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಸಾರಿಗೆ ಮೂಲಸೌಕರ್ಯ ಯೋಜನೆಗಳ ಉದ್ಘಾಟಿಸಲಾಗಿತ್ತು. ಅದರ ಬೆನ್ನಲ್ಲೆ ಮಧುಗಿರಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ನೂತನ ಕಟ್ಟಡ ಹಾಗೂ ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಸೋಮವಾರ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು, ದೇಶದಲ್ಲಿಯೇ ಅತೀ ಹೆಚ್ಚು ಸ್ವಯಂ ಚಾಲಿತ ಚಾಲನಾ ಪಥವನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯ ಪಾತ್ರವಾಗಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ 7 ಟ್ರ್ಯಾಕ್ ಚಾಲನೆಯಲ್ಲಿವೆ. ಈ ವರ್ಷ 10 ಟ್ರ್ಯಾಕ್ ಪ್ರಾರಂಭವಾಗಿದೆ. 28 ಟ್ರ್ಯಾಕ್ ಗಳ ಕಾರ್ಯ ಮುಗಿಯುವ ಹಂತದಲ್ಲಿದೆ. ಒಟ್ಟು 45 ಟ್ರ್ಯಾಕ್ ಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಸಚಿವರು ಮಾಹಿತಿ ನೀಡಿದರು.

ಕೋಟ್ಯಂತರ ರೂ. ವೆಚ್ಚದಲ್ಲಿ ಪರೀಕ್ಷಾ ಪಥ
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ 3.14 ಎಕರೆ ವಿಸ್ತೀರ್ಣ ದಲ್ಲಿ 11.50 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ಮತ್ತು ಸಾರಿಗೆ ಅಧಿಕಾರಿಗಳ ಕಛೇರಿ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಸಾರಿಗೆ ಬಸ್ ನಿಲ್ದಾಣ ನವೀಕರಣಕ್ಕೆ ಆದ್ಯತೆ ಹಾಗೂ ತಾಲ್ಲೂಕಿಗೆ ಮತ್ತಷ್ಟು ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ಭರವಸೆ ನೀಡಿದರು.
ಕರ್ನಾಟಕ ಸಾರಿಗೆ ಇಲಾಖೆಯಿಂದ ವಿವಿಧ ಜಿಲ್ಲೆಗಳಲ್ಲಿ ಸಾರಿಗೆ ಘಟಕ, ಡಿಪೋ ನಿರ್ಮಾಣಕ್ಕೆ ತಿರ್ಮಾನಿಸಲಾಗಿದೆ. ಇತ್ತೀಚೆಗೆ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣವನ್ನು ಆಳಂದಲ್ಲಿ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದ್ದರು. ಐದು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನಿಲ್ದಾಣ ಇದಾಗಿದ್ದು, ಸುವ್ಯವಸ್ಥೆ ಹೊಂದಿದೆ. ಸ್ಥಳೀಯರಿಗೆ ಸಾಕಷ್ಟು ಅನುಕೂ ನೀಡುತ್ತಿದೆ.
ಅದೇ ರೀತಿ ದಾವಣಗೆರೆ ತಾಲೂಕಿನ ಚೆನ್ನಗಿರಿ ತಾಲೂಕಿನಲ್ಲಿ ನಾಲ್ಕು ಎಕರೆಯಲ್ಲಿ ಬಸ್ ಘಟಕವನ್ನು ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದನ್ನು ಸಚಿವರು ಉದ್ಘಾಟಿಸಿದ್ದರು. ಅಲ್ಲದೆ ಇಲ್ಲಿಂದ ಹಲವಾರು ಬಸ್‌ಗಳನ್ನು ನಿಯೋಜಿಸಿದ್ದು, ಅವುಗಳ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು. ಇದೀಗ ಮಧುಗಿರಿಯಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.












Click it and Unblock the Notifications