'ರಾಜಕಾರಣಿಗಳು ಒಬ್ಬರನ್ನೊಬ್ಬರು ಎಕ್ಸ್‌ಪೋಸ್ ಮಾಡ್ಕೊಳ್ಳಿ': ಪ್ರತಾಪ್ ಸಿಂಹ ಮಾತಿನ ಅರ್ಥವೇನು?
ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣದ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. ನನಗೆ ಈ ರಾಜಕಾರಣದಲ್ಲಿ ಕೆಲವನ್ನು ನೋಡಿ..ನೋಡಿ..ಸಾಕಾಗಿ ಹೋಗಿದೆ. ರಾಜಕೀಯ ನಾಯಕರು ನನ್ನ ಬಳಿ ನಿಂದೇನೋ ಇದೆ, ಅದನ್ನು ಬಿಚ್ಚಿಡ್ತೀನಿ, ಇದನ್ನು ಬಿಚ್ಚಿಡ್ತೀನಿ ಅಂತೆಲ್ಲ ಹೇಳುತ್ತಲೇ ಇರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿರುವ ಅವರು, ನಾನು ಆ ಪಕ್ಷ, ಈ ಪಕ್ಷ ಎಂದೆಲ್ಲ ಹೆಸರೇಳಲ್ಲ. ಎಲ್ಲಾ ಪಕ್ಷದ ಹಿರಿಯ ನಾಯಕರೂ ಹೊಂದಾಣಿಕೆ ರಾಜಕೀಯದಲ್ಲೇ ಇದ್ದಾರೆ. ಇಲ್ಲದಿದ್ರೆ ಮುಡಾದಲ್ಲಿ ಬಿಜೆಪಿ-ಜೆಡಿಎಸ್ನವರದ್ದೂ ಪಾತ್ರ ಇದೆ ಎಂದು ಹೇಳುತ್ತಾರೆ. ಹಾಗೆ ಇದ್ದಿದ್ದರೆ, ಕಾಂಗ್ರೆಸ್‌ನವರು ಏಕೆ ದಾಖಲೆಗಳನ್ನು ಬಿಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನವರು ತಮ್ಮ ಮೇಲಿನ ಆರೋಪಗಳಿಗೆ ಒಂದು ಸಾಕ್ಷಿಯನ್ನಾದರೂ ಕೊಟ್ಟಿದ್ದಾರಾ? ತನಿಖಾ ಸಂಸ್ಥೆಗಳೆಲ್ಲ ಸರ್ಕಾರದ ಹತ್ತಿರನೇ ಇದೆ. ಅಧಿಕಾರ, ಇಡೀ ಪೊಲೀಸ್ ವ್ಯವಸ್ಥೆ ಕೂಡ ಅವರೊಂದಿಗೆ ಇದೆ. 40 ಪರ್ಸೆಂಟ್ ಹಗರಣದ ಬಗ್ಗೆ ತನಿಖೆ ಮಾಡಿಸಬಹುದಲ್ಲ? ಪಿಎಸ್‌ಐ ಹಗರಣದ ಬಗ್ಗೆ ಏಕೆ ತನಿಖೆ ಮಾಡಿಸುತ್ತಿಲ್ಲ? ಮತ್ತೊಂದೆಡೆ ಸಚಿವ ಪ್ರಿಯಾಂಕ್ ಖರ್ಗೆ ಅದೇನೋ ದಾಖಲೆ ಇದೆ ಎಂದು ಹೇಳಿದ್ರು, ಅದನ್ನು ಕೊಡ್ರಪ್ಪ ಇವಾಗ..ನೀವೇ ಇಟ್ಕೊಂಡು ಏನ್ ಮಾಡ್ತಿದ್ದೀರಾ? ಎಂದು ಕಾಲೆಳೆದಿದ್ದಾರೆ.
ಕರ್ನಾಟಕ ಸರ್ಕಾರವೇ ಈಗ ನಿಮ್ಮ ಕೈಯಲ್ಲಿದೆ. ಯಾವ ಯಾವ ಹಗರಣ ಇದೆಯೋ ಎಲ್ಲವನ್ನೂ ತಗೊಂಡು ಬನ್ನಿ. ಹಿರಿಯ ರಾಜಕಾರಣಿಗಳೆಲ್ಲ ಒಬ್ಬರನ್ನೊಬ್ಬರು ಎಕ್ಸ್‌ಪೋಸ್ ಮಾಡಿಕೊಳ್ಳಿ. ಇದರಿಂದ ಕನಿಷ್ಠ ಪಕ್ಷ ಮುಂದಿನ ತಲೆಮಾರಿಗಾದರೂ ರಾಜಕೀಯಕ್ಕೆ ಒಳ್ಳೆಯ ರಾಜಕಾರಣಿಗಳು ಬರಲು ಅವಕಾಶ ಸಿಗಲಿದೆ ಎಂದು ಸವಾಲು ಹಾಕಿದ್ದಾರೆ.
ಮೈಸೂರು ನನ್ನ ಕರ್ಮಭೂಮಿ. ನಾನು ಇಲ್ಲಿಯೇ ಇರುತ್ತೇನೆ. ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಇದ್ದೇನೆ. ನನಗೆ ದೆಹಲಿಗೆ ಹೋಗಬೇಡ ಎಂದರೆ, ಇಲ್ಲೇ ಇರು ಎಂದರ್ಥ ಎನ್ನುವ ಮೂಲಕ ಪ್ರತಾಪ್ ಸಿಂಹ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಕಾಂಗ್ರೆಸ್ನವರ ತೀರ್ಮಾನ ಏನಿದೆ ಎನ್ನುವುದೂ ತಿಳಿದಿಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರೆ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗೆ ಇಳಿಯಬೇಕಾಗುತ್ತದೆ. ಆದರೆ ಕೋರ್ಟ್ ತೀರ್ಮಾನ ಏನಾಗುತ್ತದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಬೇರೊಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ, ಕರ್ನಾಟಕಕ್ಕೆ ಒಬ್ಬ ಯೋಗಿ ಆದಿತ್ಯನಾಥ್ ಅಂತಹ ನಾಯಕ ಬೇಕಾಗಿದೆಯೇ ಹೊರತು ಜಾತಿವಾದಿ ನಾಯಕರಲ್ಲ ಎಂದು ಸ್ವಪಕ್ಷದ ನಾಯಕರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು.
ಕಳೆದ ಬಾರಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಬಾವುಟ, ಕರಪತ್ರ ಹಂಚಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಇದೇ ಸಮಯದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಆಯ್ತು. ಆರೋಪಿಗಳು ಎಲ್ಲಿದ್ದರು ಎಂದು ಪೊಲೀಸರಿಗೂ ಗೊತ್ತಿತ್ತು. ಅವರ ಬಳಿ ಬಂದೂಕೂ ಇತ್ತು. ಆದರೆ, ಟ್ರಿಗರ್ ಎಳೆಯಬೇಡಿ ಎಂದು ಬಿಜೆಪಿ ಸರ್ಕಾರಕ್ಕೆ ಆರ್ಡರ್ ಮಾಡಿದ್ದು ಯಾರು? ರಾಜಕಾರಣಿಗಳೆಂಬ ಎಂಬ ದುಷ್ಟ ವ್ಯವಸ್ಥೆಯಡಿ ಪೊಲೀಸರು ಸಿಲುಕಿದ್ದಾರೆ ಎಂದು ಸ್ವಪಕ್ಷದ ವಿರುದ್ಧವೇ ಗುಡುಗಿದ್ದರು.












Click it and Unblock the Notifications