ಮಾಜಿ ಎಂಎಲ್ಸಿ & ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಎನ್ ತಿಪ್ಪಣ್ಣ ನಿಧನ
ವಿಧಾನ ಪರಿಷತ್ತಿನ ಮಾಜಿ ಸಭಾಪತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಮುತ್ಸದ್ದಿಗಳಾದ ಡಾ. ಎನ್. ತಿಪ್ಪಣ್ಣ (97) ಅವರು ಶುಕ್ರವಾರ ನಿಧನರಾಗಿದ್ದಾರೆ. ತಿಪ್ಪಣ್ಣ ಅವರು ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ತಿಪ್ಪಣ್ಣ ಅವರ ನಿಧನಕ್ಕೆ ರಾಜಕೀಯ ನಾಯಕರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಅವರ ಹುಟ್ಟೂರು ಚಿತ್ರದುರ್ಗ ಜಿಲ್ಲೆ ತುರುವನೂರಿನಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಲಿದೆ.
ಅವರ ಬಳ್ಳಾರಿಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ತಿಪ್ಪಣ್ಣನವರು ಅತ್ಯಂತ ಸರಳ ಹಾಗೂ ಸಜ್ಜನಿಕೆಯ ಹಿರಿಯ ಮುತ್ಸದ್ದಿಗಳಾಗಿ ಸಮಾಜದ ಹಾಗೂ ನಾಡಿನ ಒಳಿತಿಗಾಗಿ ತಮ್ಮನ್ನು ಸಮರ್ಪಿಸಿಕೊಂಡು ಅವಿಸ್ಮರಣೀಯ ಸೇವೆ ಸಲ್ಲಿಸಿದ್ದರು. ತಮ್ಮ ಜೀವಿತಾವಧಿಯವರೆಗೂ ಸಮಾಜದ ಏಳಿಗೆಗಾಗಿ ಕಾಳಜಿಪೂರ್ವಕವಾಗಿ ಚಿಂತಿಸುತ್ತಿದ್ದವರು. ಹಿರಿಯ ವಕೀಲರಾಗಿ ಸಂಘಟನೆಗಳ ಮುಂಚೂಣಿಯಲ್ಲಿ ನಿಂತು ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಆದರ್ಶ ರಾಜಕಾರಣದ ಬಹುದೊಡ್ಡ ಕೊಂಡಿಯಾಗಿದ್ದ ಭವಿಷ್ಯದ ಪೀಳಿಗೆಗೆ ಬೆಳಕಾಗಿ ಮಾರ್ಗದರ್ಶಕರಾಗಿದ್ದ ತಿಪ್ಪಣ್ಣನವರ ಅಗಲಿಕೆ ಅತೀವ ವೇದನೆಯುಂಟುಮಾಡಿದೆ.

ತಿಪ್ಪಣ್ಣನವರ ಬದುಕು, ಸೇವೆ, ಸಾಧನೆ ನಾಡಿನ ಇತಿಹಾಸದಲ್ಲಿ ಹಾಗೂ ವೀರಶೈವ ಲಿಂಗಾಯತ ಸಮಾಜದ ಬೆಳವಣಿಗೆಯಲ್ಲಿ ಸದಾ ಪ್ರೇರಣಾದಾಯಕ ಶಕ್ತಿಯಾಗಿ ಉಳಿಯಲಿದೆ. ಅವರ ಕುಟುಂಬ ವರ್ಗ ಹಾಗೂ ಅಭಿಮಾನಿ ವರ್ಗಕ್ಕೆ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುವೆ ಎಂದು ಹೇಳಿದ್ದಾರೆ.
ಸಂಸದ ಬಸವರಾಜ ಬೊಮ್ಮಾಯಿ ಅವರು, ವಿಧಾನಪರಿಷತ್ ಮಾಜಿ ಸದಸ್ಯರು ಹಾಗೂ ಮಾಜಿ ಸಭಾಧ್ಯಕರು ಆಗಿದ್ದ ಡಾ. ಎನ್. ತಿಪ್ಪಣ್ಣ ಅವರು ನಿಧನ ಹೊಂದಿರುವ ಸುದ್ದಿ ಕೇಳಿ ಅತ್ಯಂತ ದುಃಖವುಂಟಾಗಿದೆ. ಹಿರಿಯ ನ್ಯಾಯವಾದಿಯಾಗಿ, ಬಳ್ಳಾರಿ ವಿ. ವಿ ಸಂಘದ ಮಾಜಿ ಅಧ್ಯಕ್ಷರಾಗಿ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಧ್ಯಕ್ಷರಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ದೂರದೃಷ್ಠಿ ಉಳ್ಳವರಾಗಿದ್ದ ಅವರು ಬಳ್ಳಾರಿ ವಿ ವಿ ಸಂಘದ ಮೂಲಕ ಅನೇಕ ಶಾಲೆ ಕಾಲೇಜು ಪ್ರಾರಂಭಿಸಿ ಶಿಕ್ಷಣಾಭಿರುದ್ದಿಗೆ ತಮ್ಮದೇ ಆದ ಕೊಡುಗೆ ನೀಡಿರುತ್ತಾರೆ.
ಅವರ ಅಗಲಿಕೆಯಿಂದ ಸಮಾಜ ಹಿರಿಯ ಮಾರ್ಗದರ್ಶಕರನ್ನು ಕಳೆದುಕೊಂಡು ಬಡವಾದಂತಾಗಿದೆ. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ನೀಡಲಿ, ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಇಳಿವಯಸ್ಸಿನಲ್ಲೂ ಸಮಾಜಸೇವೆ: ಇನ್ನು ಡಾ. ಎನ್. ತಿಪ್ಪಣ್ಣ ಅವರು ಡಾ. ಎನ್. ತಿಪ್ಪಣ್ಣ ಅವರು ಇಳಿವಯಸ್ಸಿನಲ್ಲೂ ಸಮಾಜಸೇವೆಯ ಮೂಲಕ ಖ್ಯಾತಿ ಗಳಿಸಿದ್ದರು. ಬಳ್ಳಾರಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಾಡಿನ ಹಲವರು ತಿಪ್ಪಣ್ಣ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.












Click it and Unblock the Notifications