ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಎಸ್.ಕೆ.ಬಸವರಾಜನ್ ದಂಪತಿ
ಬೆಂಗಳೂರು, ಜನವರಿ 05; ಚಿತ್ರದುರ್ಗದ ಮುರುಘಾರಾಜೇಂದ್ರ ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
ಅದರ ಮೇಲೆ ಸ್ವಾಮೀಜಿ ವಿರುದ್ಧ ಕೇಸ್ ದಾಖಲಿಸಲು ಸಂತ್ರಸ್ತರಿಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದು ಕೋರಿ ಮಠದ ಮಾಜಿ ಆಡಳಿತಾಧಿಕಾರಿ ಎಸ್. ಕೆ. ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅವರಿಬ್ಬರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯಲ್ಲಿ ದೂರುದಾರರಾದ ಮರುಘಾ ರಾಜೇಂದ್ರ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಗ್ರಾಮೀಣಾ ಠಾಣಾ ಪೊಲೀಸರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ತಮ್ಮ ವಿರುದ್ಧ ಪಿತೂರಿ: ಮಠ ನಡೆಸುತ್ತಿರುವ ಪ್ರಿಯದರ್ಶಿನಿ ಶಾಲೆಯ ಶಿಕ್ಷಕ ಬಸವ ರಾಜೇಂದ್ರಪ್ಪ ಮತ್ತು ಪ್ರಕರಣದ ಸಂತ್ರಸ್ತೆಯ ತಾಯಿ ನಡುವೆ ನಡೆದ ಮೊಬೈಲ್ ಕರೆ ಸಂಭಾಷಣೆಯನ್ನು ಆಧರಿಸಿ ದೂರುದಾರರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಡಾ. ಶಿವಮೂರ್ತಿ ಮರುಘಾ ಸ್ವಾಮಿಜಿ ಅವರ ವ್ಯಕ್ತಿತ್ವ ಮತ್ತು ಘನತೆಗೆ ಧಕ್ಕೆ ತಂದು ಮತ್ತು ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ದೂರು ದಾಖಲಿಸಲು ಸಂತ್ರಸ್ತರಿಗೆ ಪ್ರಚೋದನೆ ನೀಡಲಾಗಿದೆ ಹಾಗೂ ಪಿತೂರಿ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆದರೆ ಅದೆಲ್ಲಾ ಸುಳ್ಳು ಮತ್ತು ಆ ಆರೋಪಗಳಲ್ಲಿ ಯಾವುದೇ ಆಧಾರವಿಲ್ಲವೆಂದು ಹೇಳಲಾಗಿದೆ.
ಅಲ್ಲದೆ, ಪ್ರಕರಣ ಸಂಬಂಧ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿಲ್ಲ. ಆದರೂ ಪೊಲೀಸರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮನ್ನು ಬಂಧಿಸಿದ್ದಾರೆ. ತಮಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸರ ನಡೆಯಿಂದ ಸಂವಿಧಾನದ ಪರಿಚ್ಛೇದ 21 ಅಡಿಯಲ್ಲಿ ತಮಗೆ ಪ್ರಾಪ್ತವಾಗಿರುವ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರದ ಹಕ್ಕು ಉಲ್ಲಂಘನೆಯಾಗಿದೆ. ಆದ್ದರಿಂದ ಎಫ್‌ಐಆರ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಜಾಮೀನು ನೀಡಿದ್ದ ಹೈಕೋರ್ಟ್; ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಕ್ರಿಮಿನಲ್ ಸಂಚು ರೂಪಿಸಿದ ಆರೋಪದಡಿ ಎಸ್. ಕೆ. ಬಸವರಾಜನ್ ಬಂಧಿಸಲಾಗಿತ್ತು. ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್. ಕೆ. ಬಸವರಾಜನ್‌ಗೆ ಕರ್ನಾಟಕ ಹೈಕೋರ್ಟ್ ಕೆಲವು ದಿನಗಳ ಷರತ್ತುಬದ್ಧ ಜಾಮೀನು ನೀಡಿತ್ತು.
ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸುವ ಸಂಬಂಧ ಮಠದ ಪ್ರಿಯದರ್ಶಿನಿ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿರುವ ಬಸವರಾಜೇಂದ್ರ ಮತ್ತು ಮಠದ ದಾಸೋಹದ ಸಿಬ್ಬಂದಿ ಮಹಿಳೆಯೊಬ್ಬರ ನಡುವೆ ನಡೆದಿದೆ ಎನ್ನಲಾದ ಫೋನ್ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪ್ರಕರಣ ಸಂಬಂಧ ಮಠದ ಉಸ್ತುವಾರಿ ಸ್ವಾಮೀಜಿ ಬಸವಪ್ರಭು ಸ್ವಾಮೀಜಿ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿ, ಅರ್ಜಿದಾರರನ್ನು ಬಂಧಿಸಿದ್ದರು.
ಹೈಕೋರ್ಟ್ ಬಸವರಾಜನ್‌ಗೆ ಜಾಮೀನು ನೀಡಿದ್ದರಿಂದ ಮುರುಘಾ ಸ್ವಾಮೀಜಿಗಿಂತ ಮುಂಚಿತವಾಗಿಯೇ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಎಸ್.ಕೆ. ಬಸವರಾಜನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ರಜಾಕಾಲದ ಏಕಸದಸ್ಯಪೀಠ ಜಾಮೀನು ಮಂಜೂರು ಮಾಡಿತ್ತು.
ಆಡಳಿತಾಧಿಕಾರಿ ನೇಮಕ; ಚಿತ್ರದುರ್ಗದ ಮುರುಘಾಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ. ಎಸ್. ವಸ್ತ್ರದ್‌ರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಚಿತ್ರದುರ್ಗದ ಮಠದ ಭಕ್ತರಾದ ಡಿ. ಎಸ್. ಮಲ್ಲಿಕಾರ್ಜುನ ಮತ್ತಿತರರು ಸರ್ಕಾರ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ.












Click it and Unblock the Notifications