ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ ಭರ್ಜರಿ ಎಂಟ್ರಿ: ಸುಧಾಕರ್ ಹೇಳಿದ್ದೇನು?
ಚಿಕ್ಕಬಳ್ಳಾಪುರ, ಅಕ್ಟೋಬರ್ 09: ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 10 ಆರಂಭವಾಗಿದ್ದು, ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ. ಇತ್ತ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಸಂದರ್ಭದಲ್ಲಿ ರಾಜಕಾರಣಿ ಈ ಶೋ ಬೇಕಿತ್ತಾ ಎಂದು ಮಾಜಿ ಸಚಿವ ಡಾ. ಕೆ ಸುಧಾಕರ್ ಕಿಡಿಕಾರಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಒಬ್ಬ ರಾಜಕಾರಣಿ ಈ ರೀತಿಯ ಶೋಗೆ ಹೋಗಿದ್ದು ಇದೆ ಮೊದಲು, ಬಿಗ್ ಬಾಸ್‌ಗೆ ಹೋಗುವ ಮೂಲಕ ನಗೆಪಾಟೀಲಿಗೆ ಈಡಾಗಿದ್ದಾರೆ ಎಂದು ಕುಟುಕಿದ್ದಾರೆ.

ಬಿಗ್ ಬಾಸ್ ಗೆ ಹೋಗಿರುವುದು ನಾಚಿಕೆಗೇಡಿನ ಸಂಗತಿ. ಬಿಗ್ ಬಾಸ್‌ನಲ್ಲಿ ಭಾಗಿಯಾಗುವ ಮೂಲಕ ಜಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾನ ಮರ್ಯಾದೆ ಕಳೆದಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದ ಹೆಸರನ್ನ ಹಾಳು ಮಾಡಿದ್ದಾರೆ. ಜನರಿಗೆ ನಾವು ತಪ್ಪು ಮಾಡಿದ್ದೇವೆ ಎಂದು ಅರಿವಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ವಿರೋದ ಪಕ್ಷದ ನಾಯಕರ ಆಯ್ಕೆ ವಿಳಂಬವಾಗುತ್ತಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಐದು ತಿಂಗಳಾದ್ರೂ ವಿಪಕ್ಷನಾಯಕರನ್ನು ಮಾಡಲಿಲ್ಲ ಅಂದ್ರೆ . ಅದಕ್ಕೆ ಬಲವಾದ ಕಾರಣ ಏನಾದ್ರೂ ಇರಬೇಕು . ಕುಮಾರಸ್ವಾಮಿಯನ್ನು ವಿಪಕ್ಷನಾಯಕರನ್ನು ಮಾಡುವ ವಿಚಾರವಾಗಿ ಮಾತನಾಡಿ, ಕಾನೂನಾತ್ಮಕವಾಗಿ ಏನಾದ್ರೂ ತೊಂದರೆ ಆಗಬಹುದು .
ನಮ್ಮಲ್ಲೇ ಅರವತ್ತಕ್ಕೂ ಹೆಚ್ಚಿನ ಜನ ಇದಾರೆ. ಮಾಜಿ ಮುಖ್ಯಮಂತ್ರಿಗಳಿದ್ದಾರೆ, ಹಿರಿಯ ನಾಯಕರಿದ್ದಾರೆ . ನನಗೆ ಗೊತ್ತಿರುವ ಹಾಗೆ ಕುಮಾರಸ್ವಾಮಿ ವಿಪಕ್ಷನಾಯಕ ಆಗಲು ಸಾದ್ಯವಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ನಾನು ರಾಜಕೀಯ ಜೀವನ ಪ್ರಾರಂಭ ಮಾಡಿದ್ದೇ ಜನತಾದಳದ ವಿರುದ್ದ. ಇಲ್ಲಿ ತನಕ ಜನತಾದಳದ ವಿರುದ್ದವೇ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಈಗ ಜನತಾದಳದೊಂದಿಗೆ ಮೈತ್ರಿಯಾಗಿರುವ ಸಂದಿಗ್ಧ ಪರಿಸ್ಥಿತಿ ಬಂದಿದೆ. ನಾವು ಶಿಸ್ತಿನ ಸಿಪಾಯಿಗಳು ಆಗಿರುವುದರಿಂದ ಹೈಕಮ್ಯಾಂಡ್ ಹೇಳಿದಹಾಗೆ ಮಾಡ್ತೀನಿ .
ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಬದ್ದವಾಗಿದ್ದೇನೆ ಎಂದು ಹೇಳಿದರು.
ರೈತರಿಗೆ ವಿದ್ಯುತ್ ನೀಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಹಲವು ವಿಷಯಗಳ ಕುರಿತು ಇದೆ 11 ರಂದು ಪ್ರತಿಭಟನೆಗೆ ಕರೆ ನೀಡಿದ್ದೇವೆ, ಕಷ್ಟ ಬಿಜೆಪಿದು ಹೆಸರು ಕಾಂಗ್ರೆಸ್ ದು, ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ನಿದ್ದೆಗೆ ಜಾರಿದೆ. ಕಾಂಗ್ರೆಸ್ ಭ್ರಷ್ಟ ಸರ್ಕಾರ, ರೈತರ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಜಾತಿ ಸಮೀಕ್ಷೆ ವಿಚಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹನ್ನೊಂದು ವರ್ಷ ಆಯಿತು ಇದುವರೆಗೂ ಜಾತಿಗಣತಿ ಮಾಡಲಿಲ್ಲ, ಕೆಲವು ಜಾತಿಗಳನ್ನು ಅಸಮಾಧಾನ ಮಾಡುವುದು .
ಜಾತಿ ಜಾತಿಗಳ ಮೇಲೆ ರಾಜಕೀಯ ಮಾಡಿಕೊಂಡು ಬಂದಿರುವುದು ಇತಿಹಾಸ. ಜಾತಿಗಳಲ್ಲಿ ಉಪಜಾತಿಗಳನ್ನು ಮಾಡಿದ್ದಾರೆ ಕೆಲವುಗಳನ್ನು ತೆಗೆದಿದ್ದಾರೆ, ಜಾತಿಗಣತಿ ಪಟ್ಟಿ ಬಿಡುಗಡೆ ಮಾಡಲಿ ದೊಡ್ಡ ದೊಡ್ಡ ಕಲಹಗಳಾಗ್ತವೆ ಎಂದು ಹೇಳಿದರು.












Click it and Unblock the Notifications