ಜಾಹೀರಾತು ಕೊಡುವ ಹಣದ ಅರ್ಧದಲ್ಲಿ ಸಬ್ಸಿಡಿಯನ್ನೇ ಕೊಡಬಹುದಿತ್ತು-ಸಿ.ಟಿ ರವಿ
ಚಿಕ್ಕಮಗಳೂರು, ಏಪ್ರಿಲ್ 28: ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ವಿರುದ್ಧದ ಕರ್ನಾಟಕ ಸರ್ಕಾರದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಳಿಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಮಾಜಿ ಸಚಿವ ಸಿ.ಟಿ ರವಿ ಪ್ರತಿಕ್ರಿಯಿಸಿದ್ದು, ಈಗ ಬಿಡುಗಡೆ ಮಾಡಿರುವ ಹಣವನ್ನಾದರೂ ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ನೆರವಿಗೆ ಬರಬೇಕು ಎನ್ನುವ ಆಸಕ್ತಿ ಇಲ್ಲ. ರೈತರ ವಿಷಯದಲ್ಲಿ ರಾಜಕಾರಣ ಮಾಡಬೇಕೆಂಬುದರಲ್ಲೇ ಆಸಕ್ತಿ ಹೆಚ್ಚಾಗಿತ್ತು. ಈಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನಾದರೂ ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಿ ಎಂದು ಹೇಳಿದರು.

600ಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. ಹಿಂದೆ ನಿಮ್ಮ ಒಬ್ಬ ಸಚಿವ, ರೈತರುಸ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದು ರೈತರ ಬಗ್ಗೆ ಇವರಿಗಿರುವ ಕಾಳಜಿಯನ್ನ ತೋರಿಸುತ್ತದೆ. ರೈತ ಸಂಕಷ್ಟಕ್ಕೆ ಒಳಗಾಗಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಣಕ್ಕಾಗಿ ಯಾರಾದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ..? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಯಾದಿಯಾಗಿ ಸಚಿವರು ಶಾಸಕರುಗಳೆಲ್ಲರೂ ಕೇವಲ ರಾಜಕಾರಣ ಮಾಡುವುದರಲ್ಲಿ ನಿರತರಾಗಿದ್ದಾರೆ. ರೈತರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ ಇನ್ನು ಮುಂದೆಯಾದರೂ ಪ್ರಾಮಾಣಿಕವಾಗಿ ಪ್ರಯತ್ನಿಸಿ. ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ಕೊಡಿ. ತಕ್ಷಣ ಕೇಂದ್ರದ 6 ಸಾವಿರದ ಜೊತೆಗೆ ನೀವು 6 ಸಾವಿರ ಸೇರಿಸಿ 12, 000 ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಿ. ಜಾಹೀರಾತು ಕೊಡುವ ಹಣದ ಅರ್ಧದಲ್ಲಿ ಸಬ್ಸಿಡಿಯನ್ನೇ ಕೊಡಬಹುದಿತ್ತು. ನಿಮಗೆ ಜಾಹೀರಾತು ಕೊಡುವುದಕ್ಕೆ ಹಣ ಇದೆ. ಸಗಣಿ ಬಾಚಿ ಕಷ್ಟಪಡುವ ಮಹಿಳೆಗೆ ಸಬ್ಸಿಡಿ ಕೊಡದೆ ಇರುವುದು ದುರದೃಷ್ಟಕರ. ತಕ್ಷಣ ಹಾಲಿನ ಸಬ್ಸಿಡಿ ದರವನ್ನು ಬಿಡುಗಡೆ ಮಾಡಿ. ರೈತ ವಿದ್ಯಾನಿಧಿಸ್ತಗಿತಗೊಳಿಸಿದ್ದು ಯಾವ ರೀತಿಯ ನ್ಯಾಯ..? ನೀವು ನ್ಯಾಯದ ಮಾತಾಡ್ತೀರಿ, ನ್ಯಾಯದ ಮಾತಾಡುವ ಸಂದರ್ಭದಲ್ಲಿ ಇದು ಎಷ್ಟು ಸರಿ..? ಇದು ರೈತ ಮಕ್ಕಳಿಗೆ ಮಾಡುವ ಅನ್ಯಾಯ ಅಲ್ಲವೇ..? ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.












Click it and Unblock the Notifications