ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ: ಲಿಂಗಾಯತ, ಒಕ್ಕಲಿಗ ಸಮುದಾಯದ ಇಬ್ಬರಿಗೂ ಇಲ್ಲ, ಈ ಹೆಸರೇ ಬಹುತೇಕ ಅಂತಿಮ?
ಬೆಂಗಳೂರು, ಆಗಸ್ಟ್. 02: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತೀರುವ ಬಿಜೆಪಿಗೆ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರನ್ನು ನೇಮಿಸುವಲ್ಲಿ ಸಂಕಷ್ಟ ಎದುರಾಗಿದೆ. ಯಾರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಬೆಕು ಎಂಬ ಗೊಂದಲದಲ್ಲಿರುವ ನಾಯಕರು ಕೊನೆಗೂ ದಲಿತ ಅಸ್ತ್ರ ಬಳಸಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲಿಂಗಾಯತ, ಒಕ್ಕಲಿಗ ಸಮುದಾಯಗಳ ನಾಯಕರನ್ನು ನೇಮಿಸಲು ಕಸರತ್ತು ನಡೆಸಿದ್ದ ಬಿಜೆಪಿ ಕೊನೆಗೆ ಪ್ರಭಾವಿ ನಾಯಕ ಸಿಟಿ ರವಿ ಅವರಲ್ಲಿಗೆ ಬಂದು ನಿಂತಿತ್ತು. ಆದರೆ, ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸುತ್ತಿಲ್ಲ ಎಂಬ ವಿಷಯ ಬಹಿರಂಗವಾಗಿದ್ದು, ಬಿಜೆಪಿಯಲ್ಲಿ ದಲಿತ ನಾಯಕ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರ ಹೆಸರು ಮುನ್ನಲೆಗೆ ಬಂದಿದೆ.

ಪ್ರಭಾವಿ ಭೋವಿ ಸಮಾಜದವರಾದ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹೆಸರಿಗೆ ಆರ್‌ಎಸ್‌ಎಸ್ ನಾಯಕರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ನಾಯಕರನ್ನು ಬಿಟ್ಟು, ಜಾತಿ ಸಮೀಕರಣಕ್ಕೆ ಹೊಂದುವ ಹೆಸರು ಇದು ಎಂದು ನಾಯಕರು ಹೇಳಿದ್ದಾರೆ. ಹೀಗಾಗಿ ಅರವಿಂದ್ ಲಿಂಬಾವಳಿ ರಾಜ್ಯಾಧ್ಯಕ್ಷರಾಗುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಇನ್ನೇರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಬಹುದು.
ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿ. ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ನೂತನ ಶಾಸಕ ವಿಜಯೇಂದ್ರ ಹೆಸರು ಚಾಲ್ತಿಯಲ್ಲಿತ್ತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಿಟಿ ರವಿ ಅವರ ಹೆಸರನ್ನು ಬಲವಾಗಿ ವಿರೋಧಿಸಿ ತಮ್ಮ ಮಗನಿ ಹೆಸರು ಶಿಫಾರಸು ಮಾಡಿದ್ದರು. ಇದರ ಜೊತೆಗೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸೋಲು ಕಂಡಿರುವ ವಿ ಸೋಮಣ್ಣ ಬಿಜೆಪಿ ವಿರುದ್ಧ ಆಗ್ಗಾಗೆ ಕಿಡಿ ಕಾರುತ್ತಿದ್ದು, ಪಕ್ಷದ ಹುದ್ದೆ ಮೇಲೆ ಕಣ್ಣಿಟ್ಟಿದ್ದರು.

ಹೀಗಾಗಿ ಎಲ್ಲರನ್ನೂ ಸಮಾಧಾನ ಪಡಿಸಲು ಪಕ್ಷದ ನಾಯಕರು ಅರವಿಂದ್ ಲಿಂಬಾವಳಿ ಹೆಸರನ್ನು ಫೈನಲ್ ಮಾಡಬಹುದು. ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ರಾಜ್ಯಾಧ್ಯಕ್ಷರಾಗಲು ಆರ್‌ಎಸ್‌ಎಸ್ ಮುಖಂಡರು ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿಯಿದೆ.
ಅರವಿಂದ ಲಿಂಬಾವಳಿ ಅವರು ತಮ್ಮ ಜೀವನದ ಆರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ಗೆ ಸೇರಿದವರು. 35 ವರ್ಷಗಳಿಂದ ಆರ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP)ಯ ಸದಸ್ಯರಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ. 1992 ರಿಂದ 1995ರವೆಗೆ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಇತ್ತ, ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ತೆರಳಿರುವ ಸಿಟಿ ರವಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸಿ ಟಿ ರವಿ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ಕುರಿತು ಹೈಕಮಾಂಡ್ ನಾಯಕರ ಮಟ್ಟದಲ್ಲಿ ಚರ್ಚೆಗಳು ನಡೆದಿದೆ ಎಂದು ಹೇಳಲಾಗಿತ್ತು. ಆದರೆ, ಅರವಿಂದ್ ಲಿಂಬಾವಳಿ ಹೆಸರು ಮುನ್ನಲೆಗೆ ಬಂದಿದ್ದು, ಮುಂದಿನ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications