ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಬಿಜೆಪಿಗೆ, ಖರ್ಗೆ ವಿರುದ್ಧ ಸ್ಪರ್ಧೆ?
ಬೆಂಗಳೂರು, ಆಗಸ್ಟ್ 29 : ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಬಿಜೆಪಿ ಸೇರಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ.
ಕೆ.ರತ್ನಪ್ರಭಾ ಅವರು ಬಿಜೆಪಿ ಸೇರುವ ಕುರಿತು ಬುಧವಾರ ಭಾರಿ ಚರ್ಚೆ ನಡೆಯುತ್ತಿದೆ. ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿರುವ ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ದಲಿತ ಸಮುದಾಯಕ್ಕೆ ಸೇರಿದ ರತ್ನಪ್ರಭಾ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂಬುದು ಸದ್ಯದ ಸುದ್ದಿ.
ರತ್ನಪ್ರಭಾ ಅವರನ್ನು ಅಭ್ಯರ್ಥಿಯಾಗಿ ಮಾಡಿದರೆ ದಲಿತ ಸಮುದಾಯದ ಮತಗಳ ಜೊತೆಗೆ ಪ್ರಜ್ಞಾವಂತರ ಮತಗಳು ಸಹ ಬಿಜೆಪಿಗೆ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಸೋತರೆ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ತರಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ.

ಕಲಬುರಗಿಗೆ ರತ್ನಪ್ರಭಾ ಅವರು ಈಗಾಗಲೇ ಒಮ್ಮೆ ಭೇಟಿ ನೀಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಪುನಃ ಭೇಟಿ ನೀಡಲಿದ್ದಾರೆ. ಈ ಭೇಟಿ ಅವರು ಕ್ಷೇತ್ರದಿಂದ 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹುಟ್ಟುವಂತೆ ಮಾಡಿದೆ.
ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ಕೆ.ರತ್ನಪ್ರಭಾ ಅವರು ಕರ್ನಾಟಕದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬರುವಾಗ ಮುಖ್ಯ ಕಾರ್ಯದರ್ಶಿಯಾಗಿದ್ದರು. ಕೆಲವು ತಿಂಗಳ ಹಿಂದೆ ಅವರು ನಿವೃತ್ತರಾಗಿದ್ದಾರೆ. ಈಗ ಅವರು, ರಾಜಕೀಯದತ್ತ ಮುಖ ಮಾಡಿದ್ದಾರೆ?.
9 ಬಾರಿ ವಿಧಾನಸಭೆಗೆ ಮತ್ತು 2 ಬಾರಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದಾರೆ. ಈಗ ಅವರನ್ನು ಸೋಲಿಸಲು ಬಿಜೆಪಿ ತಂತ್ರ ರೂಪಿಸಿದ್ದು, ಅದರ ಭಾಗವಾಗಿಯೇ ಬಾಬೂರಾವ್ ಚಿಂಚನಸೂರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ, ಈಗ ರತ್ನಪ್ರಭಾ ಅವರು ಪಕ್ಷ ಸೇರುವ ಸಾಧ್ಯತೆ ಇದೆ.
ಯಾರು ರತ್ನಪ್ರಭಾ? : ಹೈದರಾಬಾದ್ ಮೂಲದ ರತ್ನಪ್ರಭಾ ಅವರು 1981ನೇ ಬ್ಯಾಚ್ ಐಎಎಸ್ ಅಧಿಕಾರಿ. ತಂದೆ ಸಿವಿಲ್ ಇಂಜಿನಿಯರ್ ಆಗಿದ್ದರು. ತಾಯಿ ವೈದ್ಯೆ. ರತ್ನಪ್ರಭಾ ಅವರ ಸಹೋದರ ಸಹ ನಾಗರಿಕ ಸೇವೆಯಲ್ಲಿದ್ದಾರೆ.
1981ರಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಬೀದರ್‌ನಲ್ಲಿ ರತ್ನಪ್ರಭಾ ಅವರು ಸೇವೆ ಆರಂಭಿಸಿದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.












Click it and Unblock the Notifications