ಕಾಂಗ್ರೆಸ್ ಮಾಜಿ ಶಾಸಕ ನಿಧನ; ಗಣ್ಯರಿಂದ ಸಂತಾಪ
ಬೆಳಗಾವಿ, ಜೂನ್ 18: ನಿಪ್ಪಾಣಿ ಕ್ಷೇತ್ರದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ಇಂದು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ 70ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ.
ಬಹು ಕಾಯಿಲೆಗಳಿಂದ ಬಳಲುತ್ತಿದ್ದ ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್ ಅವರು ತಡರಾತ್ರಿ 2 ಗಂಟೆ ಸುಮಾರಿಗೆ ಕೆ.ಎಲ್.ಇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜ್ಯ ಕಾಂಗ್ರೆಸ್ನ ಹಿರಿಯ ರಾಜಕಾರಣಿ ಕಾಕಾ ಸಾಹೇಬ್ ಪಾಟೀಲ್ ನಿಧನ ಸುದ್ದಿ ಕೇಳಿ ಕಾರ್ಯಕರ್ತರು ಆಘಾತಗೊಂಡಿದ್ದಾರೆ. ಹಲವು ರಾಜಕೀಯ ಮಿತ್ರರು ಸಂತಾಪ ಸೂಚಿಸಿದ್ದಾರೆ. ಪತ್ನಿ, ಇಬ್ಬರು ಮಕ್ಕಳನ್ನ ಕಾಕಾ ಸಾಹೇಬ್ ಪಾಟೀಲ್ ಅಗಲಿದ್ದಾರೆ.

ಕಾಂಗ್ರೆಸ್ ನಾಯಕರಾಗಿದ್ದ ಕಾಕಾ ಸಾಹೇಬ್ ಪಾಟೀಲ್ 1999 ರಿಂದ 2013ರ ವರೆಗೂ ಸತತವಾಗಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನಿಪ್ಪಾಣಿ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದರು. ಕಾಕಾ ಸಾಹೇಬ್ ಪಾಟೀಲ್ ಸಜ್ಜನ ರಾಜಕಾರಣಿ ಆಗಿದ್ದು, ನಿಪ್ಪಾಣಿಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ಹೊಂದಿದ್ರು. ಕಾಕಾ ಸಾಹೇಬ್ ಪಾಟೀಲ್ ನಿಧನ ಸುದ್ದಿ ಕೇಳಿ ಬೆಂಬಲಿಗರು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಕಾಂಗ್ರೆಸ್ ಹಿರಿಯ ನಾಯಕ ಕಾಕಾ ಸಾಹೇಬ್ ಪಾಟೀಲ್ ಅವರ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತಾಪ ಸೂಚಿಸಿದ್ದು, ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ನಾಯಕರಾಗಿದ್ದ ಶ್ರೀ ಕಾಕಾಸಾಹೇಬ್ ಪಾಟೀಲ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ನೋವಾಗಿದೆ. ಶಿಸ್ತಿನ ರಾಜಕಾರಣ ಹಾಗೂ ಜನ ಸಾಮಾನ್ಯರ ಸೇವೆಗೆ ಹೆಸರು ವಾಸಿಯಾಗಿದ್ದ ಕಾಕಾಸಾಹೇಬ್ ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಕಾಕಾಸಾಹೇಬ್ ಪಾಟೀಲ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಿರಿಯ ನಾಯಕರಾಗಿದ್ದ ಕಾಕಾಸಾಹೇಬ್ ಪಾಟೀಲ ಅವರ ನಿಧನ ದುಃಖವುಂಟುಮಾಡಿದೆ. ನೇರ ನಡೆ ನುಡಿ, ಜನಪರ ಕಾಳಜಿಯ ಮುತ್ಸದ್ದಿ ನಾಯಕನ ಅಗಲಿಕೆಯಿಂದ ರಾಜಕೀಯ ರಂಗ ಮಾತ್ರವಲ್ಲ, ಇಡೀ ಸಮಾಜ ಬಡವಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕರಾದ ಕಾಕಾ ಸಾಹೇಬ್ ಪಾಟೀಲ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ. ಕಾಕಾ ಸಾಹೇಬ್ ಪಾಟೀಲರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಪಾಟೀಲ್ ಅವರು ಮೂರು ಬಾರಿ ಶಾಸಕರಾಗಿ ಕೆಲಸ ಮಾಡಿದ್ದು, ಸಾರ್ವಜನಿಕ ಸೇವೆಗೆ ತಮ್ಮ ಜೀವನ ಮುಡುಪಿಟ್ಟವರು.
ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ನಂತರ ಶಾಸಕರಾಗಿ ಆಯ್ಕೆಯಾಗಿದ್ದರು. 1999 ರಿಂದ 2013 ರ ವರೆಗೂ ಸತತವಾಗಿ ಚುನಾವಣೆ ಗೆಲ್ಲುವ ಮೂಲಕ ಕಾಂಗ್ರೆಸ್ ನ ಪ್ರಭಾವಿ ಶಾಸಕರಾಗಿದ್ದರು. ಅಲ್ಲದೆ ಅಪಾರ ಕಾರ್ಯಕರ್ತರನ್ನು ಬೆಳೆಸಿದ್ದ ನಾಯಕರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಡಿ.ಕೆ. ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications