'ಮಾತು ಬಿಟ್ಟು ಕೆಲಸದಲ್ಲಿ ನಿನ್ನ ಪ್ರತಾಪ ತೋರಿಸು': ಪ್ರತಾಪ್ ಸಿಂಹಗೆ ಸಿದ್ದರಾಮಯ್ಯ ತರಾಟೆ!
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಭಾಗಗಳಲ್ಲಿ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಆದರೆ ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ನೀರು ತುಂಬಿಕೊಂಡಿದ್ದು ಹಲವು ವಾಹನಗಳು ಮುಳುಗಡೆಯಾಗಿವೆ.
ಬೆಂಗಳೂರು-ಮೈಸೂರು ರಸ್ತೆ ಇನ್ನೂ ನಿರ್ಮಾಣ ಹಂತದಲ್ಲಿ ಇದ್ದು, ಬಿಡದಿಯಿಂದ ರಾಮನಗರದವರೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಇನ್ನು ನೆಮ್ಮದಿಯಿಂದ ಓಡಾಡಬಹುದು ಎಂದುಕೊಂಡಿದ್ದ ವಾಹನ ಪ್ರಯಾಣಿಕರಿಗೆ ಮಳೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಆರಂಭಕ್ಕೂ ಮುನ್ನವೇ ಬೆಂಗಳೂರು-ಮೈಸೂರು ಹೆದ್ದಾರಿಯ ಹಲವು ವೈಫಲ್ಯಗಳು ಅನಾವರಣವಾಗಿದೆ.
ಈಗಾಗಲೇ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪ್ರಯಾಣಿಸುವವರು ಪರ್ಯಾಯ ಮಾರ್ಗ ಬಳಸುವಂತೆ ಮನವಿ ಮಾಡಲಾಗಿದೆ. ಬೆಂಗಳೂರು -ಮೈಸೂರು ರಸ್ತೆ ತಮ್ಮದೇ ಸರ್ಕಾರದ ಹೆಮ್ಮೆಯ ಯೋಜನೆ ಎಂದು ಹೇಳಿಕೊಳ್ಳುತ್ತಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಪ್ರತಾಪ್ ಸಿಂಹ ಮಾತ್ರವಲ್ಲದೆ ರಾಜ್ಯ ಬಿಜೆಪಿಯನ್ನು ಕೂಡ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುವ ಮತ್ತು ಅತ್ಯಂತ ಜನನಿಬಿಡ ಮಾರ್ಗಗಳಲ್ಲಿ ಒಂದಾಗಿರುವ ಬೆಂಗಳೂರು-ಮೈಸೂರು ಹೆದ್ದಾರಿಯು ಈಗ ಮುಳುಗಿದೆ. ಇಂತಹ ನಾಚಿಕೆಗೇಡಿನ ಕಾಮಗಾರಿ ಮಾಡಿರುವ ಕರ್ನಾಟಕ ಬಿಜೆಪಿ ನಾಯಕರು ರಾಜ್ಯದ ಜನೆತೆಗೆ ಈಗ ಉತ್ತರ ಕೊಡಲಿ ಎಂದು ಹೇಳಿದ್ದಾರೆ.

ಕೆಲಸದಲ್ಲಿ ನಿನ್ನ ಪ್ರತಾಪ ತೋರಿಸು
ಸಂಸದ ಪ್ರತಾಪ್ ಸಿಂಹರನ್ನು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ 'ಪ್ರತಾಪ' ಬರೀ ಘರ್ಜನೆಯಲ್ಲಲ್ಲ, ಕಾರ್ಯದಲ್ಲೂ ಇರಬೇಕು ಎಂದು ಹೇಳಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಬಗ್ಗೆ ಪ್ರತಾಪ್ ಸಿಂಹ ಸಾಕಷ್ಟು ಆಸಕ್ತಿ ವಹಿಸಿದ್ದರು. ಈ ಬಗ್ಗೆ ತಮ್ಮ ಫೇಸ್‌ಬುಕ್, ಟ್ವಿಟರ್ ಖಾತೆಗಳಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ಮಾಡುತ್ತಿರುವ ಬಗ್ಗೆಯೂ ಹೇಳಿದ್ದರು.
ಭಾರಿ ಮಳೆಯಿಂದಾಗಿ ರಸ್ತೆಯ ಕಾಮಗಾರಿಯ ವೈಜ್ಞಾನಿಕತೆ ಬಗ್ಗೆಯೇ ಪ್ರಶ್ನೆ ಮೂಡುವಂತಾಗಿದೆ. ಬರಿ ಬಾಯಿ ಮಾತಿನಲ್ಲಿ ಮಾತ್ರವಲ್ಲ ಕೆಲಸದಲ್ಲಿ ನಿನ್ನ ಪ್ರತಾಪ ತೋರಿಸು ಎಂದು ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

9 ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆ ಇದು
ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಸುಮಾರು 9 ಸಾವಿರ ಕೋಟಿ ರುಪಾಯಿ ಖರ್ಷು ಮಾಡಲಾಗಿದೆ. ಟ್ವೀಟರ್ ಬಳಕೆದಾರರೊಬ್ಬರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಮುಳುಗಡೆಯಾಗಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕಾಗಿ 9 ಸಾವಿರ ಕೋಟಿ ರುಪಾಯಿ ಖರ್ಚು ಮಾಡಿದ್ದೀರಾ ಎಂದು ಸಂಸದ ಪ್ರತಾಪ್ ಸಿಂಹರನ್ನು ಪ್ರಶ್ನೆ ಮಾಡಿದ್ದಾರೆ.
ರಸ್ತೆ ನಿರ್ಮಾಣಕ್ಕಾಗಿ ಸರಿಯಾಗಿ ಯೋಜನೆ ಮಾಡಲಾಗಿತ್ತಾ, ರಸ್ತೆ ಸಂಚಾರ ಆರಂಭಕ್ಕೂ ಮುನ್ನವೇ ಈ ಪರಿಸ್ಥಿತಿಯಾದರೆ ಮುಂದಿನ ದಿನಗಳಲ್ಲಿ ಇನ್ಯಾವ ರೀತಿ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಾಹನ ಮುಳುಗಿರುವ ವಿಡಿಯೋ ಭಾರಿ ವೈರಲ್
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಳೆ ನೀರು ತುಂಬಿಕೊಂಡು ವಾಹನಗಳು ಮುಳುಗಡೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಈಗಾಗಲೇ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಂಚಿಕೊಂಡಿರುವ ವಿಡಿಯೋದಲ್ಲಿ ಹಲವು ಕಾರು, ಲಾರಿ, ಬಸ್‌ಗಳು ಮುಳುಗಡೆಯಾಗಿರುವುದನ್ನು ಕಾಣಬಹುದಾಗಿದೆ. ಯಾವುದಾದರೂ ನಗರ ಪ್ರದೇಶದಲ್ಲಿ ಈ ಪರಿಸ್ಥಿತಿಯಾದರೆ ರಾಜಕಾಲುವೆ ಒತ್ತುವರಿ ಎನ್ನುವ ಸಬೂಬು ನೀಡಬಹುದು. ಆದರೆ ಹೆದ್ದಾರಿಯಲ್ಲೇ ಈ ಪರಿಸ್ಥಿತಿಯಾದರೆ ಹೇಗೆ ಎಂದು ಜನ ಕೇಳುತ್ತಿದ್ದಾರೆ.

ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿ
ರಾಮನಗರದ ಬಳಿ ಹೆದ್ದಾರಿಯಲ್ಲಿ ವಾಹನಗಳು ಮುಳುಗಡೆಯಾಗಿದ್ದ ಪ್ರದೇಶಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಅನಿವಾರ್ಯವಾಗಿ ಸಂಚರಿಸಲೇಬೇಕಾದ ಸಂದರ್ಭದಲ್ಲಿ ಪರ್ಯಾಯ ಮಾರ್ಗ ಬಳಸುವಂತೆ ಸಲಹೆ ನೀಡಿದರು. "ಬೆಂಗಳೂರು-ಬೆಂಗಳೂರು ಹೆದ್ದಾರಿಯ ವಿವಿಧ ಭಾಗಗಳಲ್ಲಿ ಮಳೆನೀರು ತುಂಬಿದೆ. ಅನೇಕ ಕಡೆ ಹೆದ್ದಾರಿ ಜಲಾವೃತವಾಗಿದೆ. ಅಲ್ಲಲ್ಲಿ ವಾಹನಗಳು ನೀರಿನಲ್ಲಿ ಸಿಲುಕಿವೆ. ಹೀಗಾಗಿ ವಾಹನ ಸಂಚಾರ ಮಾಡುವುದು ಅಪಾಯಕಾರಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications