ಅರಣ್ಯ ಇಲಾಖೆ ನೌಕರರು ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ 20ಲಕ್ಷ ಪರಿಹಾರ
ಬೆಂಗಳೂರು,ಆಗಸ್ಟ್ 23: ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಹಾಗೂ ನೌಕರರು ಕರ್ತವ್ಯದ ಮೇಲಿರುವ ವೇಳೆ ಮೃತಪಟ್ಟಲ್ಲಿ ಅಥವಾ ಗಾಯಗೊಂಡಲ್ಲಿ ಪರಿಹಾರ ಮೊತ್ತ ಘೋಷಿಸುವುದಲ್ಲದೆ ವಿಶೇಷ ಗುಂಪು ವಿಮಾ ಮೊತ್ತ ಭರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕರ್ತವ್ಯದ ಮೇಲಿರುವಾಗ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾವಿಗೀಡಾದರೆ ಅಥವಾ ಗಾಯಗೊಂಡರೆ ನೀಡುವ ಪರಿಹಾರದ ಮಾದರಿಯಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿದಾಗ ಉಂಟಾಗಬಹುದಾದ ಅಪಾಯಕ್ಕೆ ಭದ್ರತೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯದ ಮೇಲಿರುವ ಮೃತಪಟ್ಟರೆ, ಅವರ ಹತ್ತಿರದ ಸಂಬಂಧಿಗಳಿಗೆ 20 ಲಕ್ಷ ರೂ.ಗಳು, ಶಾಶ್ವತ ಅಂಗವಿಕಲತೆ ಹೊಂದುವ ನೌಕರರಿಗೆ 10 ಲಕ್ಷ ರೂ. ಹಾಗೂ ಗಂಭೀರ ಸ್ವರೂಪದ ಗಾಯಗಳುಂಟಾದರೆ 2 ಲಕ್ಷ ರೂ.ಗಳ ಪರಿಹಾರವನ್ನು ಸರ್ಕಾರ ಪ್ರಕಟಿಸಿದೆ.

ಅಲ್ಲದೇ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಮತ್ತು ಕಾವಲುಗಾರ, ಉಪ ವಲಯ ಅರಣ್ಯಾಧಿಕಾರಿ, ವಲಯ ಅರಣ್ಯಾಧಿಕಾರಿಗಳು ಮರಣ ಹೊಂದಿದರೆ ವಿಶೇಷ ಗುಂಪು ವಿಮಾ ಮೊತ್ತ 10 ಲಕ್ಷ ಗೂ.ಗಳಿಗೆ ಹಾಗೂ ಕ್ಷೇಮಾಭಿವೃದ್ಧಿ ಮತ್ತು ಹಂಗಾಮಿ ನೌಕರರಿಗೆ ವಿಶೇಷ ಗುಂಪು ವಿಮಾ ಮೊತ್ತ 5 ಲಕ್ಷ ರೂ.ಗಳಿಗೆ ಮಂಜೂರಾತಿ ನೀಡಲಾಗಿದೆ.
ಸರ್ಕಾರ ನಿಗದಿಪಡಿಸಿದ ಪರಿಹಾರದ ಮೊತ್ತ ಪಡೆಯಲು ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಗಳ ಅಧಿಕೃತ ವೈದ್ಯಾಧಿಕಾರಿಗಳು, ಅರಣ್ಯ ಸಿಬ್ಬಂದಿ ಅಧಿಕಾರಿಗಳ ಗಾಯಕ ಸ್ವರೂಪದ ಬಗೆಗೆ ನೀಡುವ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಒದಗಿಸುವುದು.
ಮರಣ ಅಥವಾ ಗಾಯಗೊಂಡ ಸಂದರ್ಭದಲ್ಲಿ ಪೂರಕ ಆಧಾರ ಮತ್ತು ದಾಖಲೆಗಳನ್ನು ಮೇಲಧಿಕಾರಿಗಳಿಂದ ಒದಗಿಸುವುದು ಹಾಗೂ ಕರ್ತವ್ಯದ ಮೇಲಿದ್ದಾಗ ಮರಣ ಹೊಂದಿದರೆ ಮರಣ ದೃಢೀಕರಣ ಪತ್ರ ಒದಗಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications