ಕರ್ನಾಟಕ ಗಡಿಭಾಗದ ಈ ಹಳ್ಳಿಗಳನ್ನು ತೆಲಂಗಾಣಕ್ಕೆ ಸೇರಿಸಿ ಅಂತಿರೋದು ಯಾರು,ಯಾಕೆ ?
ಕರ್ನಾಟಕದ ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳು ಆರ್ಥಿಕ ಹಾಗೂ ಸಾಮಾಜಿಕ ಸೇರಿದಂತೆ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಇಲ್ಲಿ ಮೂಲಸೌಕರ್ಯ ಸೇರಿದಂತೆ ಹಲವು ಸೌಕರ್ಯಗಳು ಇಲ್ಲಿಯವೆರೆಗೂ ಸಿಕ್ಕಿಲ್ಲ. ಈ ಬಗ್ಗೆ ಚರ್ಚೆಗಳು ಹಾಗೂ ಹೋರಾಟಗಳು ನಡೆಯುತ್ತಲ್ಲೇ ಇವೆ. ಆದರೆ, ಅದು ತಾರ್ಕಿಕ ಅಂತ್ಯ ಕಂಡಿಲ್ಲ. ಇದೀಗ ಯಾದಗಿರಿ ಜಿಲ್ಲೆಯ ಎರಡು ಪ್ರಮುಖ ಹಳ್ಳಿಯ ಜನ ನಮ್ಮನ್ನು ಪಕ್ಕದ ತೆಲಂಗಾಣ ರಾಜ್ಯಕ್ಕೆ ಸೇರಿಸಿ ಬಿಡಿ ಎಂದು ಮನವಿ ಮಾಡುತ್ತಿದ್ದಾರೆ.
ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರವು ಹಲವು ವರ್ಷಗಳಿಂದ ಈಡೇರಿಸಿಯೇ ಇಲ್ಲ. ಹೀಗಾಗಿ, ನಮ್ಮನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಯಾದಗಿರಿ ವಡಗೇರಾ ತಾಲ್ಲೂಕಿನ ಶಿವಾಪುರ ಹಾಗೂ ಗೋನಾಳ ಗ್ರಾಮದ ಜನ ಆಗ್ರಹಿಸಿದ್ದಾರೆ. ಯಾದಗಿರಿಯ ಈ ಜಿಲ್ಲೆಗಳನ್ನು ಆದಷ್ಟು ಬೇಗ ತೆಲಂಗಾಣಕ್ಕೆ ಸೇರಿಸಿ ಬಿಡಿ ಎನ್ನುವ ಆಗ್ರಹ ಕೇಳಿ ಬಂದಿದೆ.

ಎರಡೂ ಗ್ರಾಮದ ಜನರಿಗೆ ಸಂಕಷ್ಟ
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗೋನಾಳ ಹಾಗೂ ಶಿವಾಪುರ ಗ್ರಾಮದ ಜನರು ಕಳೆದ ಆರು ದಶಕಗಳಿಂದಲೂ ಪಹಣೆಗಾಗಿ ಅಲೆದಾಡುತ್ತಿದ್ದಾರೆ. ಪಹಣೆ ನೀಡುವಂತೆ ಒತ್ತಾಯಿಸಿ ಸರ್ಕಾರಿ ಕಚೇರಿಗಳನ್ನು ಅಲೆದದ್ದೇ ಬಂತು. ಆದರೆ, ಇಲ್ಲಿಯ ವರೆಗೆ ಈ ಭಾಗದ ಜನರಿಗೆ ಸರ್ಕಾರದಿಂದ ನೀಡುವ ನಿವೇಶನದ ಹಕ್ಕು ಪತ್ರಗಳ (ಪಹಣಿ) ಸಿಕ್ಕಿಲ್ಲ. ಈ ಗ್ರಾಮದ ಗ್ರಾಮಸ್ಥರು ಒಂದಲ್ಲ ಎರಡಲ್ಲ 800ಕ್ಕೂ ಹೆಚ್ಚು ಬಾರಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿ ಸುಸ್ತಾಗಿದ್ದಾರೆ. ರೈತರು ಸೂಕ್ತ ದಾಖಲೆ ಇಲ್ಲದೆ ಅವರ ಕೆಲಸಗಳನ್ನು ಮಾಡಿಕೊಳ್ಳಲು ಇನ್ನಿಲ್ಲದಂತೆ ಪರದಾಡುತ್ತಿದ್ದಾರೆ. ಅಂದಾಜಿನ ಪ್ರಕಾರ, 10,000 ಸಾವಿರಕ್ಕೂ ಹೆಚ್ಚು ಎಕರೆ ಭಾಗ (ಜಮೀನುಗಳಿಗೆ) ಹಕ್ಕು ಪತ್ರ ವಿತರಣೆಯನ್ನು ಮಾಡಿಲ್ಲ. ಹೀಗಾಗಿ, ಈ ಭಾಗದ 900 ರೈತರು ಸಮಸ್ಯೆಗೆ ಗುರಿಯಾಗಿದ್ದಾರೆ.
ತೆಲಂಗಾಣ ರೈತರು ನೆಮ್ಮದಿಯಾಗಿದ್ದಾರೆ
ಕರ್ನಾಟಕದ ಈ ಭಾಗದ ರೈತರಿಗಿಂತ ತೆಲಂಗಾಣ ಭಾಗದ ರೈತರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಆ ಭಾಗದ ರೈತರಿಗೆ ಸಿಗಬೇಕಾದ ಎಲ್ಲ ರೀತಿಯ ಸೌಲಭ್ಯಗಳು ಸಹ ಕಾಲಕಾಲಕ್ಕೆ ಸಿಕ್ಕಿವೆ. ಇದರಿಂದ ಅವರು ಕೃಷಿಯಿಂದ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ನಮಗೆ ಅದು ಸಾಧ್ಯವಾಗುತ್ತಿಲ್ಲ. ಎರಡು ಗ್ರಾಮದ ನೂರಾರು ಜನ ರೈತರು ನೆಮ್ಮದಿ ಕಳೆದುಕೊಂಡಿದ್ದಾರೆ. ದಾಖಲೆ ಪತ್ರವಿಲ್ಲದೆ ರೈತರಿಗೆ ಸಾಲ ಸೌಲಭ್ಯ ಸೇರಿದಂತೆ ಹಲವು ನ್ಯಾಯಯುತ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ನಮ್ಮ ಗ್ರಾಮದಿಂದ ಕೂಗಳತೆಯ ದೂರದಲ್ಲಿರುವ ಪಕ್ಕದ ತೆಲಂಗಾಣ ರಾಜ್ಯದ ಕೃಷ್ಣಾ ಗ್ರಾಮ ಭಾಗದ ರೈತರು ಅಲ್ಲಿನ ಸರ್ಕಾರದಿಂದ ಎಲ್ಲ ಮಾದರಿಯ ಸೌಲಭ್ಯಗಳನ್ನು ಯಾವುದೇ ಸಮಸ್ಯೆಗಳಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ನಮ್ಮ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಇಲ್ಲವೇ ಈ ಗ್ರಾಮಗಳನ್ನು ತೆಲಂಗಾಣ ರಾಜ್ಯಕ್ಕೆ ಸೇರಿಸಬೇಕು. ನಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಯಾದಗಿರಿಯ ಸಹಾಯಕ ಆಯುಕ್ತ ಮತ್ತು ತಹಶೀಲ್ದಾರ್ ಇಲ್ಲಿಂದ ವರ್ಗಾವಣೆ ಮಾಡಬೇಕು. ಒಂದೊಮ್ಮೆ ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾಡಳಿತ ವಿಫಲವಾದರೆ, ವಿಷ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.












Click it and Unblock the Notifications