ಕರ್ನಾಟಕಕ್ಕೂ ಬರಲಿದೆ ಫೋರ್ಸ್ ಒನ್ ಪಡೆ
ಬೆಂಗಳೂರು, ನ.8 : ಭಯೋತ್ಪಾದಕರ ದಾಳಿ ನಡೆದಾಗ ಕಾರ್ಯಾಚರಣೆ ನಡೆಸುವ ಫೋರ್ಸ್ ಒನ್ ಕಮಾಂಡೋ ಪಡೆಯನ್ನು ಬೆಂಗಳೂರಿನಲ್ಲೂ ರಚಿಸಲು ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಎನ್‌ಎಸ್‌ಜಿ ಕಮಾಂಡೋಗಳಿಂದ ತರಬೇತಿ ಪಡೆದ ಈ ಪಡೆ ಭಯೋತ್ಪಾದಕ ದಾಳಿಗಳ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತದೆ.
ಬೆಂಗಳೂರಿನಲ್ಲಿ ಗುರುವಾರಿಂದ ಆರಂಭವಾಗಿರುವ ಪೊಲೀಸ್ ಆಯುಕ್ತರ ಸಮ್ಮೇಳನದಲ್ಲಿ ಮಾತನಾಡಿದ ಕೆ.ಜೆ.ಜಾರ್ಜ್, ವಾಣಿಜ್ಯ ನಗರಿ ಮುಂಬೈನಲ್ಲಿ ಫೋರ್ಸ್ ಒನ್ ಕಮಾಂಡೋ ಪಡೆಯನ್ನು ರಚಿಸಲಾಗಿದೆ. ಕರ್ನಾಟಕದಲ್ಲೂ ಇಂತಹ ಪಡೆ ರಚಿಸಲು ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಹೇಳಿದರು.

ಫೋರ್ಸ್ ಒನ್ ಪಡೆ ಭಯೋತ್ಪಾದಕರ ದಾಳಿ ವೇಳೆ ನೆರವಾಗಲಿಗೆ. ಎನ್‌ಎಸ್‌ಜಿ ಕಮಾಂಡೋಗಳಿಂದ ತರಬೇತಿ ಪಡೆದ ಇಂತಹ ಪಡೆ ಸದ್ಯ ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿಯೂ 'ಫೋರ್ಸ್ ಒನ್' ಪಡೆ ರಚಿಸುವ ಬಗ್ಗೆ ಪೊಲೀಸ್ ಸಂಶೋಧನಾ ಬ್ಯೂರೋ ಪ್ರಸ್ತಾಪಿಸಿದೆ. ರಾಜ್ಯ ಸರ್ಕಾರ ಇದಕ್ಕೆ ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಭಾಗವಹಿಸಿದ್ದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ಮಹಾ ನಿರ್ದೇಶಕ ರಾಜನ್ ಗುಪ್ತಾ, ಮುಂಬೈ ನಗರದಲ್ಲಿ ಭಯೋತ್ಪಾದಕರ ದಾಳಿ ವೇಳೆ ಕಾರ್ಯಾಚರಣೆಗೆ ನೆರವಾಗಲು 'ಫೋರ್ಸ್ ಒನ್' ಪ್ರತ್ಯೇಕ ಕಮಾಂಡೋ ಪಡೆ ರಚಿಸಲಾಗಿದೆ. ಪೊಲೀಸ್ ಇಲಾಖೆಗೆ ಸೇರಿದಂತೆ ಈ ಪಡೆಗೆ ಎನ್‌ಎಸ್‌ಜಿ ಕಮಾಂಡೋಗಳಿಂದ ತರಬೇತಿ ನೀಡಿಲಾಗಿದೆ. ಕರ್ನಾಟಕಕ್ಕೂ 'ಫೋರ್ಸ್ ಒನ್' ಪಡೆ ಸ್ಥಾಪಿಸಲು ಸರ್ಕಾರ ಅಗತ್ಯ ನೆರವು ನೀಡಬೇಕೆಂದು ಮನವಿ ಮಾಡಿದ್ದರು.
ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗಿದೆ ಎಂದು ಹೇಳಿದ ಗೃಹ ಸಚಿವರು, ನಗರದಲ್ಲಿ ನೂತನ ಬಡಾವಣೆಗಳನ್ನು ನಿರ್ಮಿಸುವಾಗ ಶಾಲೆ, ಆಟದ ಮೈದಾನ, ಉದ್ಯಾನಕ್ಕೆ ಆದ್ಯತೆ ನೀಡುವ ರೀತಿ ಅಲ್ಲಿ ಪೊಲೀಸ್ ಠಾಣೆ ಸ್ಥಾಪಿಸುವ ಬಗ್ಗೆಯೂ ಚಿಂತನೆ ನಡೆಸಬೇಕು ಎಂದು ಹೇಳಿದರು.
ಫೋರ್ಸ್ ಒನ್ ಬಗ್ಗೆ : 2008ರಲ್ಲಿ ಮುಂಬೈ ಮೇಲೆ ಭಯೋತ್ಪದಾಕ ದಾಳಿ ನಡೆದ ನಂತರ ಮಹಾರಾಷ್ಟ್ರ ಗೃಹ ಇಲಾಖೆ 2010ರಲ್ಲಿ 'ಫೋರ್ಸ್ ಒನ್' ಪಡೆ ರಚಿಸಿತು. ಮುಂಬೈ ನಗರದ ಭದ್ರತಾ ವ್ಯವಸ್ಥೆ ನೋಡಿಕೊಳ್ಳುವುದು ಮತ್ತು ಮಹಾರಾಷ್ಟ್ರ ವಿಧಾನಸಭೆ ಹಾಗೂ ಪ್ರಮುಖ ರಾಜಕಾರಣಿಗಳಿಗೆ ರಕ್ಷಣೆ ನೀಡುವುದು ಈ ಪಡೆ ಕೆಲಸ.
ಫೋರ್ಸ್ ಒನ್ ಪಡೆಗೆ ಪುಣೆಯ ಮಿಲಿಟರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಡಿಆರ್‌ಡಿಓದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಬಗ್ಗೆ ತರಬೇತಿ ನೀಡಲಾಗಿದೆ. ಜತೆಗೆ ಇಸ್ರೇಲ್ ಪಡೆಯಿಂದಲೂ ತರಬೇತಿ ನೀಡಲಾಗಿದೆ. ಅರ್ಜಿ ಹಾಕಿದ್ದ 3000 ಆಸಕ್ತ ಪೊಲೀಸರ ಪೈಕಿ 216 ಮಂದಿಯನ್ನು ಆಯ್ಕೆಗೊಳಿಸಿ 'ಫೋರ್ಸ್ ಒನ್' ಕಮಾಂಡೋ ಪಡೆ ರಚಿಸಲಾಗಿದೆ












Click it and Unblock the Notifications