ಬೇಕರಿಗಳಲ್ಲಿ ಸಿಗುವ ಸಿಹಿ ತಿಂಡಿಗಳ ಪರೀಕ್ಷೆಗೆ ಮುಂದಾದ ಆಹಾರ ಇಲಾಖೆ!
ಬೆಂಗಳೂರು ಸೆಪ್ಟೆಂಬರ್ 26: ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿ ಕೊಬ್ಬು ಬಳಸಲಾಗಿದೆ ಎನ್ನುವ ವಿಚಾರ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಅಲ್ಲದೆ ಈ ಸುದ್ದಿ ಅಂಗಡಿ, ಬೀದಿ ಬದಿ, ಬೇಕರಿಗಳಲ್ಲಿ ಸಿಗುವ ಸಿಹಿ ತಿಂಡಿಗಳ ಗುಣಮಟ್ಟದ ಬಗ್ಗೆ ಅನುಮಾನವನ್ನು ಹುಟ್ಟಿಸಿದೆ. ಹೀಗಾಗಿ ಕರ್ನಾಟಕದಲ್ಲಿ ಬೇಕರಿಗಳಲ್ಲಿ ಸಿಗುವ ಸಿಹಿ ತಿನಿಸುಗಳ ಪರಿಶೀಲನೆಗೆ ಆಹಾರ ಇಲಾಖೆ ಮುಂದಾಗಿದೆ.
ಹೌದು.... ದೇವಸ್ಥಾನಗಳಲ್ಲಿ ಸಿಗುವ ಪ್ರಸಾದದ ಗತಿಯೇ ಹೀಗಾದರೆ? ಬೇಕರಿ ಹಾಗೂ ಅಂಗಡಿಗಳಲ್ಲಿ ಸಿಗುವ ಸಿಹಿ ತಿನಿಸುಗಳ ಕಥೆ ಹೇಗೆ ಎನ್ನುವ ಪ್ರಶ್ನೆ ಸಹಜವಾಗಿ ಜನಸಾಮಾನ್ಯರಲ್ಲಿ ಮೂಡಿದೆ. ಇದಕ್ಕೂ ಮುಂಚೆ ರಾಜ್ಯದಲ್ಲಿ ಗೋಬಿ ಹಾಗೂ ಕಾಬಾಬ್ ತಯಾರಿಕೆಯಲ್ಲಿ ಆರೋಗ್ಯಕರವಲ್ಲದ ಕಲರ್ ಬಳಕೆ ಮಾಡುತ್ತಿರುವುದು ಪರೀಕ್ಷೆಯಿಂದ ದೃಢವಾಗಿತ್ತು. ಈಗ ಬೇಕರಿಗಳಲ್ಲಿ ಸಿಗುವ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಬಳಕೆ ಮಾಡುವ ಬಣ್ಣ ಹಾಗೂ ಪದಾರ್ಥಗಳು ಎಷ್ಟು ಆರೋಗ್ಯಕರವೆಂದು ತಿಳಿಯಲಾಗುತ್ತಿದೆ.

ಹೇಳಿಕೇಳಿ ಇದು ಹಬ್ಬದ ಸಮಯ. ದಸರಾ ಹಾಗೂ ದೀಪಾವಳಿ ಹಬ್ಬಗಳಿಗೆ ಬೇಕರಿಗಳಲ್ಲಿ ಸಾಕಷ್ಟು ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ. ಈಗಾಗಲೇ ಜನ ಬೇಕರಿಗಳಿಗೆ ಆರ್ಡರ್ ಕೊಟ್ಟಿದ್ದಾರೆ ಕೊಡಲು ಆರಂಭಿಸಿದ್ದಾರೆ. ಆದರೆ ಅನೇಕ ಸಿಹಿ ತಿಂಡಿಗಳಲ್ಲಿ ಕೃತಕ ಕಲರ್ ಬಳಕೆ ಮಾಡುವುದು ಆತಂಕವನ್ನು ಹೆಚ್ಚಿಸಿದೆ.
ಇದರಿಂದಾಗಿ ಆಹಾರ ಸುರಕ್ಷತಾ ಇಲಾಖೆ ಎಲ್ಲಾ ಬ್ರಾಂಡ್‌ಗಳ ಸ್ವೀಟ್ಸ್‌ಗಳನ್ನು ಪರೀಕ್ಷೆ ಮಾಡಲು ನಿರ್ಧರಿಸಿದೆ. ಅವಧಿ ಮುಗಿದ ಡ್ರೈಫ್ರೂಟ್ಸ್, ಕಲಬೆರಕೆ ತುಪ್ಪದ ಬಳಕೆಯಿಂದ ತಯಾರಾಗುವ ಸಿಹಿ ತಿಂಡಿಗಳ ಮೇಲೂ ನಿರ್ಬಂಧ ಹೇರಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಅನೇಕ ಕಡೆ ಕರಿದ ತಿಂಡಿಗಳ ಗುಣಮಟ್ಟದ ಬಗ್ಗೆ ಪರೀಕ್ಷೆ ಮಾಡಲಾಗಿದ್ದು ಸದ್ಯ ಸ್ವೀಟ್ಸ್‌ಗಳ ಟೆಸ್ಟ್ ಶುರುವಾಗಿದೆ. ಸ್ವೀಟ್ಸ್ ವರದಿ ಬಂದ ಬಳಿಕ ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವುದನ್ನು ಆಹಾರ ಇಲಾಖೆ ನಿರ್ಧರಿಸಲಿದೆ.
ರಾಜ್ಯದಲ್ಲಿ ಈಗಾಗಲೇ ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಬಳಕೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಕಬಾಬ್, ಫಿಶ್‌ಗೂ ಕೂಡ ರಾಜ್ಯ ಸರ್ಕಾರ ಕೃತಕ ಬಣ್ಣ ಬಳಕೆ ಮಾಡದಂತೆ ನಿಷೇಧ ಹೇರಿದೆ. ಆಹಾರ ಸುರಕತ್ಷತೆ ವಿಚಾರದಲ್ಲಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೆಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.

ಅಲ್ಲದೆ ಕೆಲವು ಆಹಾರಗಳಲ್ಲಿ ಕೃತಕ ಬಣ್ಣ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಕಾಟನ್ ಕ್ಯಾಂಡಿಗಳಲ್ಲೂ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಲಾಗಿದೆ. ಕಳಪೆ ಗುಣಮಟ್ಟದ ಆಹಾರ ಸೇವನೆ ಇತ್ತೀಚೆಗೆ ಜನರ ಆರೋಗ್ಯದ ಮೇಲೆ ತೀವ್ರ ಹಾನಿಯನ್ನುಂಟು ಮಾಡುತ್ತಿದೆ. ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಹಾನಿಕಾರಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಚಿವರ ಈ ಸೂಚನೆಯ ಮೇರೆಗೆ ರಾಜ್ಯಾದ್ಯಂತ ಬೇಕರಿಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಸ್ವೀಟ್ಸ್ ಗುಣಮಟ್ಟ ಪರೀಕ್ಷೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಇದರ ವರದಿ ಬಂದ ಬಳಿಕವಷ್ಟೇ ಸ್ವೀಟ್ಸ್ ಗುಣಮಟ್ಟ ತಿಳಿಯಲಿದೆ. ಒಟ್ಟಿನಲ್ಲಿ ಜನ ಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಯಾವುದೇ ಕ್ರಮ ಕೈಗೊಂಡರು, ಕೆಲ ವ್ಯಾಪಾರಿಗಳು ಲಾಭದ ಆಸೆಗೆ ಬಿದ್ದು ಕಲಬೆರಕೆ ಆಹಾರವನ್ನು ಮಾರಾಟ ಮಾಡುತ್ತಿರುವುದು ಚಾಲ್ತಿಯಲ್ಲಿದೆ.
ಹೀಗಾಗಿ ಹಬ್ಬ ಹರಿದಿನಗಳಲ್ಲಿ ಮನೆಯಲ್ಲೇ ಸಿಹಿ ತಿನಿಸುಗಳನ್ನು ತಯಾರಿಸಿ ಮನೆ ಮಂದಿಯಲ್ಲೇ ಹಬ್ಬವನ್ನು ಆರೋಗ್ಯಕರವಾಗಿ ಆನಂದಿಸುವುದು ತುಂಬಾ ಒಳ್ಳೆಯದು ಎನ್ನುವುದು ನಮ್ಮ ಸಲಹೆ.. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು..?












Click it and Unblock the Notifications