ಮಹಾ ಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದ ಐದು ಜನರು ದಾರುಣ ಸಾವು: ಆಗಿದ್ದೇನು?
ಉತ್ತರ ಪ್ರದೇಶ, ಫೆಬ್ರವರಿ 21: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ ಜಗತ್ತೀನ ಅತಿ ದೊಡ್ಡ ಉತ್ಸವವಾಗಿ ದಾಖಲೆ ಸೃಷ್ಟಿಸುತ್ತಿದೆ. 144 ವರ್ಷಗಳಿಗೊಮ್ಮೆ ನಡೆಯುವ ಈ ಹಿಂದೂ ಧರ್ಮದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರವಾದ ಉತ್ಸವದಲ್ಲಿ ಈಗಾಗಲೇ ಸುಮಾರು ಐವತ್ತು ಕೋಟಿಗೂ ಅಧಿಕ ಭಕ್ತರು ಭಾಗಿಯಾಗಿದ್ದು, ಇನ್ನೂ ಐದು ದಿನಗಳ ಕಾಲ ನಡೆಯಲಿರುವ ಮಹಾ ಕುಂಭಮೇಳದಲ್ಲಿ ಒಟ್ಟಾರೆಯಾಗಿ ಅರವತ್ತು ಕೋಟಿ ಭಕ್ತರು ಭಾಗಿಯಾಗಿ ಪುಣ್ಯಸ್ನಾನ ಮಾಡುವ ನಿರೀಕ್ಷೆ ಇದೆ.
ಮಹಾ ಕುಂಭ ಮೇಳಕ್ಕೆ ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲದೇ ವಿದೇಶದಿಂದ ಬಂದ ಭಕ್ತರು ಕೂಡ ಭಾಗಿಯಾಗಿದ್ದರು. ಈಗೀಗ ಭಕ್ತರ ಸಂಖ್ಯೆ ಸ್ವಲ್ಪಮಟ್ಟಿಗೆ ಕಮ್ಮಿಯಾಗುತ್ತಿದ್ದು, ಉತ್ತರ ಪ್ರದೇಶದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಗಂಗಾ, ಯಮುನಾ ಮತ್ತು ಸರಸ್ವತಿ ಮಹಾ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಕೈಗೊಳ್ಳುತ್ತಿದ್ದಾರೆ. ಇನ್ನೂ ಭಕ್ತರ ಸಂಖ್ಯೆ ತಗ್ಗಿದ ಮೇಲೆ ಕರ್ನಾಟಕದಿಂದಲೂ ಅನೇಕರು ಮಹಾ ಕುಂಭ ಮೇಳದತ್ತ ಪ್ರಯಾಣ ಬೆಳೆಸುತ್ತಿದ್ದಾರೆ.

ಕೋಟ್ಯಂತರ ಭಕ್ತರ ರೀತಿ ಮಹಾ ಕುಂಭ ಮೇಳಕ್ಕೆ ತೆರಳಿ ಪವಿತ್ರಾ ಸ್ನಾನ ಕೈಗೊಂಡು ಮರಳುತ್ತಿದ್ದ ಕುಟುಂಬವೊಂದಕ್ಕೆ ಭರಸಿಡಿಲು ಬಡಿದಿದೆ. ಇಂದು ಉತ್ತರ ಪ್ರದೇಶದ ಮಿರಾಜ್‌ಪುರ್ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಪ್ರಯಾಗ್ ರಾಜ್‌ನ ಮಹಾ ಕುಂಭ ಮೇಳಕ್ಕೆ ತೆರಳಿದ್ದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲಕ್ಷ್ಮೀ (56), ಸುನೀತಾ (42), ನೀಲಮ್ಮ (55), ಕಲಾವತಿ ಹಾಗೂ ಸಂತೋಷ್ ಕುಮಾರ್ (42) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಕರ್ನಾಟಕದ ಬೀದರ್ ಜಿಲ್ಲೆಯ ಲಾಡಗೇರಿ ಬಡಾವಣೆಯ ನಿವಾಸಿಗಳು ಪ್ರಯಾಗ್ ರಾಜ್ ಮಹಾ ಕುಂಭ ಮೇಳಕ್ಕೆ ತೆರಳಲು ನಿರ್ಧರಿಸಿ, ಫೆಬ್ರವರಿ 19ರಂದು ಬೀದರ್‌ನಿಂದ ಚಾಲಕ ಸೇರಿ 13 ಮಂದಿ ಕ್ರೂಸರ್‌ನಲ್ಲಿ ಪ್ರಯಾಗ್ ರಾಜ್‌ಗೆ ತೆರಳಿದ್ದರು. ಮಹಾ ಕುಂಭ ಮೇಳದಲ್ಲಿ ಪುಣ್ಯ ಸ್ನಾನ ಕೈಗೊಂಡ ಬಳಿಕ ಕಾಶಿ ಪ್ರವಾಸ ಮುಗಿಸಿ ಅಲ್ಲಿಂದ ಅಯೋಧ್ಯೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ದುರಂತ ಸಂಭವಿಸಿದ್ದು, ವಾರಣಾಸಿ ಬಳಿಯ ಮಿರಾಜ್‌ಪುರ್ ನಗರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಲಾರಿಗೆ ಡಿಕ್ಕಿಯಾಗಿದೆ.
ಈ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಉಳಿದವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications