Karnataka Weather: ಬಿಸಿಲಿನ ಆಘಾತಕ್ಕೆ ಈ ವರ್ಷದ ಮೊದಲ ಸಾವು; ಕರ್ನಾಟಕದಲ್ಲಿ ಸೆಖೆಯೋ ಸೆಖೆ, ಬೀಸುತ್ತಿದೆ ಬಿಸಿಗಾಳಿ
ಬೀದರ್: ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಬಿಸಿಲ ಧಗೆ ಏರುತ್ತಲೇ ಇದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಗಳಾದ ಕಲಬುರಗಿ, ಬೀದರ್ ಜಿಲ್ಲೆಗಳು ಗರಿಷ್ಠ ತಾಪಮಾನದ ದಾಖಲೆಗಳನ್ನೂ ಸಹ ಬರೆಯುತ್ತಿವೆ. ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನಲ್ಲಿ ಭಾನುವಾರ ತರಕಾರಿ ತರಲೆಂದು ಮಾರುಕಟ್ಟೆಗೆ ಹೋಗಿದ್ದ 20 ವರ್ಷದ ಯುವಕನೊಬ್ಬ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಸಾವಿಗೆ ತೀವ್ರವಾದ ಬಿಸಿಲಾಘಾತವೇ ಕಾರಣ ಎಂದು ಶಂಕಿಸಲಾಗಿದ್ದು ಇದು ಬಿಸಿಲಿನ ಆಘಾತಕ್ಕೆ ಈ ವರ್ಷದ ಮೊದಲ ಸಾವು ಎಂದು ಹೇಳಲಾಗುತ್ತಿದೆ.
ಮೃತ ಯುವಕನನ್ನು ಉತ್ತರ ಪ್ರದೇಶ ಮೂಲದ ಮೊಹಮ್ಮದ್ ಸಮೀರ್ ಎಂದು ಗುರುತಿಸಲಾಗಿದೆ. ಈತ ಬೀದರ್ ನಗರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಕಮಲನಗರ ಪಟ್ಟಣದ ಕ್ಷೌರದ ಅಂಗಡಿ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದನು.

ಈ ಘಟನೆಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಬಿಸಿಲಾಘಾತವೇ ಕಾರಣ ಎಂಬುದು ದೃಢಪಟ್ಟರೆ, ಇದು ಈ ಬೇಸಿಗೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ದಾಖಲಾದ ಮೊದಲ ಬಿಸಿಲಾಘಾತದ ಸಾವಿನ ಪ್ರಕರಣವಾಗಲಿದೆ. ಭಾನುವಾರದಂದು ಬೀದರ್ ಜಿಲ್ಲೆಯಲ್ಲಿ ಹಗಲಿನ ತಾಪಮಾನವು ಸರಿಸುಮಾರು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು. ಇದು ಈ ಋತುವಿನ ಹಗಲಿನ ಸರಾಸರಿ ತಾಪಮಾನವಾದ 36-37 ಡಿಗ್ರಿ ಸೆಲ್ಸಿಯಸ್‌ಗಿಂತ ಬಹಳಷ್ಟೇ ಹೆಚ್ಚಾಗಿದೆ.
ಬೀದರ್‌ನಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ನೆರೆಯ ಕಲಬುರಗಿ ಜಿಲ್ಲೆಯಂತೂ ತೀವ್ರವಾದ ಬಿಸಿಗಾಳಿಯ ಹೊಡೆತಕ್ಕೆ ಸಿಲುಕಿದೆ. ಅಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್ ಗಡಿಯನ್ನು ದಾಟಿ ದಾಖಲಾಗಿದೆ.
ಸಮೀರ್ ಅವರ ತಂದೆ ಲೈಕ್ ಅಹ್ಮದ್ ಅವರು ತಮ್ಮ ಮಗನ ಸಾವು ಬಿಸಿಲಾಘಾತದಿಂದಲೇ ಸಂಭವಿಸಿದೆ ಎಂದು ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಪ್ರಕಾರ, ವಿಪರೀತ ಬಿಸಿಲಿನ ಬೇಗೆಯಿಂದ ಬಳಲಿದ್ದಂತೆ ಕಾಣುತ್ತಿದ್ದ ಸಮೀರ್, ನಡುರಸ್ತೆಯಲ್ಲಿ ಕುಸಿದು ಬೀಳುವ ಮುನ್ನ ಅಂಗಡಿಯೊಂದರ ಬಳಿ ಕುಳಿತು ನೀರು ಕುಡಿದಿದ್ದಾನೆ. "ಆತ ಮತ್ತೆ ರಸ್ತೆಗೆ ಇಳಿಯುವ ಮುನ್ನ ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಪಡೆದಿದ್ದ" ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ.
ಈ ಕಮಲನಗರವು ಮಹಾರಾಷ್ಟ್ರ ರಾಜ್ಯಕ್ಕೆ ತೀರಾ ಸಮೀಪದಲ್ಲಿದೆ ಮತ್ತು ಅಲ್ಲಿಯೂ ಸಹ ವಿಪರೀತ ಬಿಸಿಲಿನ ವಾತಾವರಣವಿದೆ. ಮುಂಬರುವ ದಿನಗಳಲ್ಲಿ ಬೀದರ್‌ನಲ್ಲಿ ಗರಿಷ್ಠ ತಾಪಮಾನವು 40ರ ಗಡಿ ದಾಟುವ ನಿರೀಕ್ಷೆಯಿರುವುದರಿಂದ, ವ್ಯಾಪಾರ-ವಹಿವಾಟಿನ ಸಮಯವನ್ನು ಅನಧಿಕೃತವಾಗಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸೀಮಿತಗೊಳಿಸಲಾಗಿದೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಸರ್ಕಾರಿ ಕಚೇರಿಗಳು ಸಹ ಮುಂಜಾನೆಯೇ ತೆರೆಯಲ್ಪಡುತ್ತಿದ್ದು, ಮಧ್ಯಾಹ್ನದ ನಂತರ ಮುಚ್ಚಲ್ಪಡುತ್ತಿವೆ. ಜಾಗತಿಕ ತಾಪಮಾನ ಏರಿಕೆಯ ಈ ದಿನಗಳಲ್ಲಿ ಸಾರ್ವಜನಿಕರು ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಂತ ಅವಶ್ಯಕವಾಗಿದೆ.












Click it and Unblock the Notifications