ಕರ್ನಾಟಕ: ಡೆಲ್ಟಾ, ಓಮಿಕ್ರಾನ್ ಎರಡೂ ಸೋಂಕಿಗೆ ತುತ್ತಾದ ವ್ಯಕ್ತಿ ಗುಣಮುಖ
ಬೆಂಗಳೂರು, ಡಿಸೆಂಬರ್ 17: ಒಂದೇ ವರ್ಷದಲ್ಲಿ ಡೆಲ್ಟಾ ಹಾಗೂ ಓಮಿಕ್ರಾನ್‌ಗೆ ತುತ್ತಾದ ವ್ಯಕ್ತಿ ಇದೀಗ ಗುಣಮುಖರಾಗಿದ್ದಾರೆ.
ಸ್ವಲ್ಪ ದಿನಗಳ ಹಿಂದೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿದ್ದ ರಾಜ್ಯದ ಮೂರನೇ ಓಮಿಕ್ರಾನ್ ರೋಗಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಡೆಲ್ಟಾ ರೂಪಾಂತರಿ ಸೋಂಕಿಗೆ ಸಹ ತುತ್ತಾಗಿದ್ದರು.
ರೋಗಿ ಎರಡು ಡೋಸ್ ಲಸಿಕೆಗಳನ್ನು ಕೂಡ ಪಡೆದ್ದರು. ಈ ಬಗ್ಗೆ ರೋಗಿ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದ ವಿಡಿಯೊ ವೈರಲ್ ಆಗಿದ್ದು, ಅದರಲ್ಲಿ ತನಗೆ ಓಮಿಕ್ರಾನ್ ಸೋಂಕು ಸೌಮ್ಯ ರೂಪದಲ್ಲಿ ಕಾಣಿಸಿಕೊಂಡಿತ್ತು, ಈಗ ಚೆನ್ನಾಗಿ ಗುಣಮುಖ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಎರಡೂ ಬಾರಿ ಕೂಡ ವೈರಸ್ ನ ಲಕ್ಷಣ ಹೆಚ್ಚು ಕಡಿಮೆ ಒಂದೇ ರೀತಿಯಾಗಿತ್ತು. ಆದರೆ ಈ ಹಿಂದೆ ಡೆಲ್ಟಾ ರೂಪಾಂತರಿಯಲ್ಲಿ ಹೆಚ್ಚು ಸಮಸ್ಯೆಯಾಗಿತ್ತು. ಆದರೆ ಈ ಬಾರಿ ಗಂಟಲು ಕೆರೆತ, ಕಫ, ಸುಸ್ತು ಮಾತ್ರ ಕಾಣಿಸಿಕೊಂಡಿದ್ದು ಅದಕ್ಕೆ ಬೇರೆ ಪ್ರತ್ಯೇಕ ಚಿಕಿತ್ಸೆಯಿರಲಿಲ್ಲ. ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿರಲಿಲ್ಲ, ಆದರೂ ಮನೆಯಲ್ಲಿ ಪ್ರತ್ಯೇಕವಾಗಿ ಉಳಿದುಕೊಂಡಿದ್ದೇನೆ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ಹೆಸರು ಮತ್ತು ಹೆಚ್ಚಿನ ವಿವರ ನೀಡದಿರುವ 34 ವರ್ಷದ ರೋಗಿ ಮಾಸ್ಕ್ ಧರಿಸಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ ತೆಗೆದುಕೊಂಡ ಚಿಕಿತ್ಸೆ ಮತ್ತು ಗುಣಮುಖವಾದ ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹಿಂದೆ ನನಗೆ ಡೆಲ್ಟಾ ಕೊರೊನಾ ರೂಪಾಂತರಿ ಸೋಂಕು ಕಳೆದ ಏಪ್ರಿಲ್ ತಿಂಗಳಲ್ಲಿ ತಗುಲಿತ್ತು, ಈಗ ಓಮಿಕ್ರಾನ್ ಸೋಂಕು ಕೂಡ ಬಂದಿದೆ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.
ಓಮಿಕ್ರಾನ್ ರೂಪಾಂತರಿ ಸೋಂಕಿಗೆ ಪ್ರತ್ಯೇಕ ಚಿಕಿತ್ಸೆಯಿಲ್ಲ, ವಿಟಮಿನ್ ಸಿ ಮಾತ್ರೆ ಮತ್ತು ಆಂಟಿಬಯೊಟಿಕ್ಸ್ ಮಾತ್ರ ನೀಡಲಾಗಿದೆ. ಕಳೆದ ಮಂಗಳವಾರ ಇವರ ಆರ್ ಟಿ-ಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದೆ.
ಆರೋಗ್ಯವಾಗಿದ್ದಾರೆ ಎಂದು ಎಕ್ಸ್ ರೇ, ಎರಡು ಬಾರಿ ರಕ್ತ ಪರೀಕ್ಷೆ ಮಾಡಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಬೇರೆ ದೇಶಗಳಿಂದ ಬಂದು ಕೋವಿಡ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದರೂ ಪ್ರತ್ಯೇಕವಾಗಿ ಇರುವ ಬಗ್ಗೆ ಸಲಹೆ ನೀಡಿದ ಅವರು, ದಕ್ಷಿಣ ಆಫ್ರಿಕಾದಿಂದ ಬಂದ ಮೇಲೆ ನಾನು ಐಸೊಲೇಟ್ ಆಗಿ ಉಳಿದುಕೊಂಡೆ.
ಹೀಗಾಗಿ ನನ್ನ ಕುಟುಂಬದವರಿಗೆ ಸೋಂಕು ತಗಲಲಿಲ್ಲ. ವಿದೇಶಗಳಿಂದ ಪ್ರಯಾಣ ಮಾಡಿ ಬಂದವರು ಸುರಕ್ಷತೆ ದೃಷ್ಟಿಯಿಂದ ಪ್ರತ್ಯೇಕವಾಗಿ ಕೆಲ ದಿನಗಳ ಮಟ್ಟಿಗೆ ಇದ್ದು, ಕ್ವಾರಂಟೈನ್ ಗೆ ಒಳಗಾಗುವುದು ಉತ್ತಮ.
ನಂತರ ಆಂಟಿಬಯೊಟಿಕ್ಸ್ ನೀಡಿದ ನಂತರ ವೈದ್ಯರು ಪರೀಕ್ಷೆ ಮಾಡಿ ಸೋಂಕಿನ ಲಕ್ಷಣಗಳಿಲ್ಲ ಎಂದು ನೆಗೆಟಿವ್ ವರದಿ ನೀಡಿದ ನಂತರವಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇನ್ನು ಯಾವುದೇ ಪ್ರಯಾಣ ಮಾಡದೆ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದ ಬೆಂಗಳೂರು ಮೂಲದ ವೈದ್ಯ ಮೊನ್ನೆ ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಕೋವಿಡ್ ನೆಗೆಟಿವ್ ಬಂದರೂ ಅವರು ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರು. ನಂತರ ಕೋವಿಡ್ ವೈರಸ್ ಸೋಂಕಿನ ಲಕ್ಷಣ ಅವರಲ್ಲಿ ಕಂಡುಬಂದಿತ್ತು.












Click it and Unblock the Notifications