ನೀರಿನ ಬಗ್ಗೆ ಕಾಳಜಿ ಇದ್ದರೆ ಈ ಕಾರ್ಯಕ್ರಮಕ್ಕೆ ನೀವು ಬಂದೇ ಬರುತ್ತೀರಿ
ಬೆಂಗಳೂರು, ಜು. 13 : ಕೃಷಿಗೆ, ಕುಡಿಯುವ ನೀರಿಗಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಜನರು ನಡೆಸುತ್ತಿರುವ ಹೋರಾಟ ನಿರಂತರ. ಬಯಲುಸೀಮೆಯ ಗರ್ಭ ಒಣಗಿ ಬರಿದಾಗಿದೆ. ಇದಕ್ಕಾಗಿ ಹಲವಾರು ಸಂಘಟನೆಗಳು ಹೋರಾಟಕ್ಕಿಳಿದಿವೆ.
ಕೃಷಿಗೆ ನೀರಿಲ್ಲದ್ದರಿಂದ ಅನ್ನದಾತರು ಆತಂಕದಿಂದ ಅಳುತ್ತಾ ಕುಳಿತುಕೊಳ್ಳುವಂತಾಗಿದೆ, ಬೆಳೆಯಿಲ್ಲದೆ ರೈತ ಕೂಲಿಕಾರ್ಮಿಕರು ಸಾಲ ಭರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಫೋರೈಡ್ ನೀರನ್ನು ಕುಡಿಯುತ್ತಿರುವ ಜನರ ಆರೋಗ್ಯ ಹದಗೆಡುತ್ತಿದೆ. ಇಂತಹ ದುರವಸ್ಥೆಗೆ ಕಾರಣ ಪ್ರಕೃತಿ ಮತ್ತು ಪರಿಸರದ ಮೇಲಿರುವ ತಿಳಿವಳಿಕೆಯ ಅಭಾವ ಕೂಡ.
ಬಯಲು ಸೀಮೆಯ ಶಾಶ್ವತ ನೀರಾವರಿ ಹೋರಾಟದ ಬಿಸಿಯ ಹಳ್ಳಿ ಹಳ್ಳಿಗೂ ಮುಟ್ಟಿಸಿ, ಪರಿಸರದ ಉಳಿಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಹೋರಾಟ ತೀವ್ರ ಸ್ವರೂಪ ಪಡೆಯಲು ನಮ್ಮ ಹೋರಾಟಗಾರರ ಜೊತೆಗೆ ನಮ್ಮ ಭಾಗದ ಸಾಹಿತಿಗಳ ಮತ್ತು ಜಾನಪದ ಕಲಾವಿದರ ಕೊಡುಗೆ ಅಗಣ್ಯ. [ಬಯಲುಸೀಮೆಗೆ ಕುಡಿಯುವ ನೀರು ಕೊಡಿ ಸ್ವಾಮೀ!]

ಅದರ ಮುಂದುವರೆದ ಭಾಗವಾಗಿ ಜನರಲ್ಲಿ ಇನ್ನೂ ಹೆಚ್ಚಿನ ಚೈತನ್ಯ ಮತ್ತು ಉತ್ಸಾಹ ತುಂಬಿ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಲು ನಮ್ಮ ಜನಮನದ ಕವಿ ಗೊಲ್ಲಹಳ್ಳಿ ಶಿವಪ್ರಸಾದ್ ರವರು ರಚಿಸಿರುವ 'ನೀರಿಗಾಗಿ ನಿಮಿಷ' ಹಾಡುಗಳ ಧ್ವನಿಸುರಳಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಸಿ ಮೈಲಾರಪ್ಪ ಅವರು ನಾಡಿಗೆ ಸಮರ್ಪಿಸುತ್ತಿದ್ದಾರೆ.
ದಿನಾಂಕ : 15-7-2015, ಬುಧವಾರ, ಮಧ್ಯಾಹ್ನ 3 ಗಂಟೆಗೆ.
ಸ್ಥಳ : ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು.
ತಾವೆಲ್ಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಭಾಗದ ಸಾಹಿತಿಗಳ ಮತ್ತು ಜಾನಪದ ಕಲಾವಿದರ ಸೇವೆಯನ್ನು ಅಭಿನಂದಿಸಿ ಪ್ರೋತ್ಸಾಹಿಸಬೇಕೆಂದು ಬಯಲು ಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿ ವಿನಂತಿಸಿದೆ. [ಬೆಂಗಳೂರು ಸುತ್ತಲಿನ ಹಳ್ಳಿಗಳಲ್ಲಿ ನೀರಿನ ಕ್ರಾಂತಿ]












Click it and Unblock the Notifications