ವರದಕ್ಷಿಣೆ ಕಿರುಕುಳ ಪ್ರಕರಣಗಳಿಂದ ನ್ಯಾಯದಾನ ದುರುಪಯೋಗ: HC
ಬೆಂಗಳೂರು, ಏ.11. ಬಹುತೇಕ ಕೌಟುಂಬಿಕ ವ್ಯಾಜ್ಯ ಪ್ರಕರಣಗಳು ದಂಪತಿಗಳ ನಡುವೆ ಇದ್ದರೂ ಅವುಗಳಲ್ಲಿ ಅತ್ತೆ, ಮಾವ ಹಾಗೂ ನಾದಿನಿಯರ ವಿರುದ್ಧವೂ ವರದಕ್ಷಿಣೆ ಕಿರುಕುಳಗಳಂತ ಪ್ರಕರಣಗಳನ್ನು ಹೂಡುವುದರಿಂದ ನ್ಯಾಯದಾನ ದುರುಪಯೋಗವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಪತಿ ಜೊತೆಗಿನ ಕೌಟುಂಬಿಕ ಕಲಹದಲ್ಲಿ ತೊಡಗಿದ್ದ ಪತ್ನಿ, ವಿನಾಕಾರಣ ಪತಿಯ ತಂದೆ, ತಾಯಿ ಹಾಗೂ ನಾದಿನಿಯರ ವಿರುದ್ಧ ಹೂಡಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ರದ್ದುಗೊಳಿಸಿದೆ.
ಮೂಲತಃ ಆಂಧ್ರಪ್ರದೇಶದ ಅನಂತರಪುರ ವಾಸಿಗಳಾದ ಚಂದ್ರಶೇಖರ್ ಗೌಡ ಮತ್ತು ವರಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ, ಪ್ರಕರಣದ ದಾಖಲೆಗಳನ್ನು ಗಮನಿಸಿದ ನ್ಯಾಯಪೀಠ ''ಪತಿಯ ಜೊತೆಗೆ ಜಗಳ ಹೊಂದಿರುವ ಮಹಿಳೆ ಅವರ ಕುಟುಂಬದವರನ್ನು ಕಾರಣವಿಲ್ಲದೆ ಅಥವಾ ತರ್ಕವಿಲ್ಲದೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಎಳೆತಂದಿರುವುದು ಸರಿಯಲ್ಲ'' ಎಂದು ಹೇಳಿದೆ.
''ಸುಪ್ರೀಂಕೋರ್ಟ್ ಸೇರಿದಂತೆ ಹಲವು ನ್ಯಾಯಾಲಯಗಳು ದೂರುದಾರರ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ ಮತ್ತು ಕಿರುಕುಳ ನೀಡದ ಪತಿಯ ಕುಟುಂಬದ ಸದಸ್ಯರು ಕ್ರಿಮಿನಲ್ ವಿಚಾರಣೆ ಎದುರಿಸುವ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿವೆ. ಹಾಗಾಗಿ ಈ ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ " ಎಂದು ಕೋರ್ಟ್ ಆದೇಶಿಸಿದೆ.
"ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಮುಂದುವರಿಸುವುದು ನ್ಯಾಯದಾನದ ದುರುಯೋಪವಾಗುತ್ತದೆ. ಇಂತಹ ಪ್ರಕರಣಗಳನ್ನು ದೂರು ದಾಖಲಾದಾಗಲೇ ಪರಿಶೀಲಿಸಿ ಅಂತಹ ಪ್ರಕರಣಗಳನ್ನು ಅಲ್ಲಿಯೇ ಕೈಬಿಡಬೇಕು. ಸದ್ಯ ಈ ಪ್ರಕರಣದ ಅಂಶಗಳನ್ನು ಗಮನಿಸಿದರೆ ಸುಪ್ರೀಂಕೋರ್ಟ್ ಸೂಚಿಸಿರುವ ಎಲ್ಲ ಮಾರ್ಗಸೂಚಿಗಳನ್ವಯ ಸೆಕ್ಷನ್ 482ರ ಅಧಿಕಾರ ಬಳಸಿ ಪ್ರಕರಣ ರದ್ದುಗೊಳಿಸಬಹುದು"ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ವಿವರ:
ಪತಿ ಪ್ರಶಾಂತ್ ವಿರುದ್ಧ ವರದಕ್ಷಿಣೆ ನಿಷೇಧ ಕಾಯಿದೆ 1971 ಸೆಕ್ಷನ್ 3 ಮತ್ತು 4ರ ಪ್ರಕಾರ ಹಾಗೂ ಐಪಿಸಿ ಸೆಕ್ಷನ್ 498ಎ, 373, 504, 506 ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಆ ದೂರಿನಲ್ಲಿ ಅತ್ತೆ, ಮಾವ ಹಾಗೂ ಪತಿಯ ಇಬ್ಬರು ಸಹೋದರಿಯರ ಹೆಸರನ್ನೂ ಸೇರಿಸಿ, ಪತಿ ತನಗೆ ಹಿಂಸೆ ನೀಡಿದ್ದರಲ್ಲಿ ಅವರ ಪಾತ್ರವೂ ಇದೆ ಎಂದು ಆರೋಪಿಸಿದ್ದರು.
Recommended Video
ಆದರೆ ಪತಿಯ ಅತ್ತೆ, ಮಾವ ಒರ್ವ ಅವಿವಾಹಿತ ಮಗಳೊಂದಿಗೆ ದೂರದ ಅನಂತರಪುರದಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದರು. ಮತ್ತೊರ್ವ ಪುತ್ರಿ ಬೆಂಗಳೂರಿನಲ್ಲಿ ಪತಿಯೊಂದಿಗೆ ಇದ್ದರು. ದಂಪತಿಗಳ ಕಲಹಕ್ಕೂ ತಮಗೂ ಯಾವುದೇ ಸಂಬಂಧಿ ಇಲ್ಲದಿದರೂ ತಮ್ಮನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ. ಹಾಗಾಗಿ ಪ್ರಕರಣ ರದ್ದುಗೊಳಿಸಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications