ಸುಳ್ಳು ರೇಪ್ ಕೇಸ್; ಸಂತ್ರಸ್ತೆ, ಆರೋಪಿ ಸಂಬಂಧದ ಅವಧಿಯೂ ಮುಖ್ಯ
ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾರೆಂಬ ಆರೋಪ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು, ಮಾರ್ಚ್ 14; ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾರೆಂಬ ಆರೋಪ ಪ್ರಕರಣಗಳು ಹೆಚ್ಚಾಗುತ್ತಿವೆ. ಇವು ಪೊಲೀಸರಿಗೂ ಮತ್ತು ಕೋರ್ಟ್‌ಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಹಾಗಾಗಿ ಇಂತಹ ಸುಳ್ಳು ಆರೋಪ ಪ್ರಕರಣಗಳಿಗೆ ಇತಿಶ್ರೀ ಹಾಡುವ ದೃಷ್ಟಿಯಿಂದ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ.
ಮದುವೆಯಾಗುವುದಾಗಿ ನಂಬಿಸಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾರೆಂಬ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಮೊದಲಿಗೆ ಸಂತ್ರಸ್ತೆ ಹಾಗೂ ಆರೋಪಿ ನಡುವಿನ ಸಂಬಂಧದ ಅವಧಿಯನ್ನೂ ಪರಿಗಣಿಸಬೇಕಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಮದುವೆಯ ಭರವಸೆ ನೀಡಿ ಐದು ವರ್ಷಕ್ಕೂ ಅಧಿಕ ಸಮಯ ಲೈಂಗಿಕ ಸಂಪರ್ಕ ಬೆಳಸಿದ ಆರೋಪ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ, ಮಹಿಳೆಯ ಘನತೆಗೆ ಧಕ್ಕೆ ತರುವಂತೆ ಹಲ್ಲೆ, ನಂಬಿಕೆ ದ್ರೋಹ ಮತ್ತು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಪ್ರಕರಣವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

ಮಲ್ಲಿಕಾರ್ಜುನ ದೇಸಾಯಿ ಗೌಡರ್ ತನ್ನ ವಿರುದ್ಧ ಸಲ್ಲಿಕೆಯಾಗಿರುವ ಅತ್ಯಾಚಾರ ಪ್ರಕರಣದ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಇದೇ ವೇಳೆ ಮಹಿಳೆ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಹಾಗೂ ಜೀವ ಬೆದರಿಕೆ ಸಂಬಂಧ ದೋಷಾರೋಪವನ್ನು ಎತ್ತಿ ಹಿಡಿದಿರುವ ನ್ಯಾಯಪೀಠ, ಈ ಕುರಿತು ಸಂಬಂಧಪಟ್ಟ ನ್ಯಾಯಾಲಯವು ಅರ್ಜಿದಾರನ ವಿರುದ್ಧದ ಕಾನೂನು ಪ್ರಕ್ರಿಯೆ ಮುಂದುವರಿಯಬಹುದು ಎಂದು ಸ್ಪಷ್ಟಪಡಿಸಿದೆ.
ಹೈಕೋರ್ಟ್ ಆದೇಶವೇನು?; ವಾದ-ಪ್ರತಿವಾದ ಆಲಿಸಿದ ಬಳಿಕ ಹೈಕೋರ್ಟ್, ದೂರಿನಲ್ಲಿ ಉಲ್ಲೇಖಿಸಿರುವಂತೆ ಆರೋಪಿ ಮತ್ತು ಸಂತ್ರಸ್ತೆ ಕಳೆದ 12 ವರ್ಷಗಳಿಂದ ಪರಿಚಿತರು. ಇಬ್ಬರು ನಡುವೆ ಪ್ರೀತಿಯಿತ್ತು. ನಂತರ ದೈಹಿಕ ಸಂಪರ್ಕ ಬೆಳೆದಿದೆ. ಅದಕ್ಕೆ ಸಂತ್ರಸ್ತೆ ಒಂದೆರಡಲ್ಲ ಸುಮಾರು 5 ವರ್ಷದವರಗೆ ಒಪ್ಪಿಗೆ ನೀಡಿದ್ದಾರೆ. ಅಂದರೆ ಇಷ್ಟು ಸುದೀರ್ಘ ಅವಧಿಯವರೆಗೆ ಆರೋಪಿಯು ಸಂತ್ರಸ್ತೆಯ ಮೇಲೆ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಸಂತ್ರಸ್ತೆಯ ಒಪ್ಪಿಗೆ ಮೇರೆಗೆ ದೈಹಿಕ ಸಂಪರ್ಕ ಬೆಳೆದಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದೆ. ಒಪ್ಪಿತ ಲೈಂಗಿಕ ಕ್ರಿಯೆಯಾದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು. ಆದ್ದರಿಂದ ಅತ್ಯಾಚಾರ ಆರೋಪ ದುರ್ಬಲವಾಗಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣದ ಅರ್ಜಿದಾರ ಆರೋಪಿ ಮತ್ತು ಸಂತ್ರಸ್ತೆ ಪರಿಚಿತರಾಗಿದ್ದರು. ನಂತರ ಪರಿಚಯವು ಪ್ರೀತಿಗೆ ತಿರುಗಿ, ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿತ್ತು. ಆದರೆ, ಇಬ್ಬರ ನಡುವೆ ಸಂಬಂಧ ಹಳಿಸಿದ ಬಳಿಕ ಸಂತ್ರಸ್ತೆಯು ಪೊಲೀಸರಿಗೆ ದೂರು ನೀಡಿ, ಆರೋಪಿಯು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದ್ದನು.












Click it and Unblock the Notifications