ಹೈದರಾಬಾದ್‌ನಲ್ಲಿ ಮೈಸೂರು ಸ್ಯಾಂಡಲ್ ನಕಲಿ ಸೋಪು ತಯಾರಿಕಾ ಘಟಕ ಪತ್ತೆ, ಕರುನಾಡ ಅಧಿಕಾರಿಗಳು ತೆಗೆದುಕೊಂಡ ಕ್ರಮಗಳೇನು?
ಬೆಂಗಳೂರು, ಜನವರಿ, 14: ಮೈಸೂರು ಸ್ಯಾಂಡಲ್ ಸೋಪು ಕರ್ನಾಟಕದ ಹೆಮ್ಮೆಯ ಬ್ರಾಂಡ್ ಆಗಿದೆ. ಇದೀಗ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಮೈಸೂರು ಸ್ಯಾಂಡಲ್ ಬ್ರಾಂಡ್ ಹೆಸರಿನಲ್ಲಿ ನಕಲಿ ಸೋಪ್ ಹಾಗೂ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಘಟಕವೊಂದು ಪಕ್ಕದ ರಾಜ್ಯ ಹೈದರಾಬಾದ್‌ನಲ್ಲಿ ಪತ್ತೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದರ ಬಗ್ಗೆ ಅಧಿಕಾರಿಗಳು ತೆಗೆದುಕೊಂಡ ಕ್ರಮಗಳೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೈದರಾಬಾದ್‌ನ ಮಾಲಕಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದ್ದ ನಕಲಿ ಸೋಪು ತಯಾರಿಕಾ ಘಟಕ ಪತ್ತೆ ಆಗಿದ್ದು, ಕೆಎಸ್‌ಡಿಎಲ್ ಅಧಿಕಾರಿಗಳ ದೂರನ್ನು ಆಧರಿಸಿ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವವರನ್ನು ಬಂಧಿಸಲಾಗಿದೆ. ಹಾಗೂ 2 ಕೋಟಿ ಮೌಲ್ಯದ ಸೋಪುಗಳನ್ನು ವಶಕ್ಕೆ ಪಡೆಯಲಾಗಿದ ಎಂದು ಪ್ರಜಾವಾಣಿಯಲ್ಲಿ ವರದಿಯಾಗಿದೆ.

ಹೈದರಾಬಾದ್ ಮಾರುಕಟ್ಟೆಯಲ್ಲಿ ಮೈಸೂರು ಸ್ಯಾಂಡಲ್ ಬ್ರಾಂಡ್ ಹೆಸರಿನಲ್ಲಿ ನಕಲಿ ಸೋಪುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಇನ್ನು ಇದನ್ನು ಗಂಭೀರವಾಗಿ ಪರಿಗಣಿಸಿದ ಅವರು ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನೀಡಿದ್ದಾರೆ.
ಇನ್ನು ಹೈದರಾಬಾದ್‌ನ ಹಲವು ಪ್ರದೇಶಗಳಲ್ಲಿ ಮೈಸೂರು ಸ್ಯಾಂಡಲ್ ಬ್ರಾಂಡ್ ಹೆಸರಿನಲ್ಲಿ ನಕಲಿ ಸೋಪು ಪೂರೈಕೆ ಆಗುತ್ತಿರುವುದು ಕಂಡುಬಂದಿತ್ತು. ಆದರೆ ಪೂರೈಕೆದಾರರ ಖಚಿತ ಮಾಹಿತಿ ಲಭ್ಯವಾಗಿರಲಿಲ್ಲ. ಇದಕ್ಕಾಗಿ 1 ಲಕ್ಷ ರೂಪಾಯಿ ಮೌಲ್ಯದ ಸೋಪುಗಳನ್ನು ಖರೀದಿಸಿ, ಮೂಲ ಪತ್ತೆಗೆ ನಿರ್ಧರಿಸಲಾಗಿತ್ತು ಎಂದು ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಅಲ್ಲದೆ ಇದೀಗ ಸಂಕ್ರಾತಿ ಹಬ್ಬ ಇದ್ದುದರಿಂದ ಈ ವೇಳೆ ಹೆಚ್ಚಿನ ಬೇಡಿಕೆ ಇದ್ದು, ಈ ಹಿನ್ನೆಲೆ 25 ಲಕ್ಷ ರೂಪಾಯಿ ಮೌಲ್ಯದ ಸೋಪುಗಳನ್ನು ಪೂರೈಕೆ ಮಾಡುವಂತೆ ಬೇಡಿಕೆ ಬಂದಿತ್ತು. ಸ್ವಂತ ವಾಹನದಲ್ಲಿ ಕೊಂಡೊಯ್ಯುವ ನೆಪದಲ್ಲಿ ಉತ್ಪಾದನಾ ಘಟಕವನ್ನು ಪತ್ತೆ ಹಚ್ಚಲಾಯಿತು. ನಂತರ ಪೊಲೀಸರಿಗೆ ದೂರು ನೀಡಿ, ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಲಾ 150 ಗ್ರಾಂ ತೂಕದ 1,800 ಮತ್ತು 75 ಗ್ರಾಂ ತೂಕದ 9,400 ಸೋಪುಗಳು ಹಾಗೂ ಅವುಗಳನ್ನು ತುಂಬುವ 800 ಖಾಲಿ ಪೆಟ್ಟಿಗೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications