Deepavali 2023: ದೀಪಾವಳಿ ಪಟಾಕಿ ಬಗ್ಗೆ ಜಿಲ್ಲಾಧಿಕಾರಿ ಮಹತ್ವದ ಆದೇಶ
ಬೆಂಗಳೂರು: ದೀಪಾವಳಿ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಣೆ ಮಾಡಲು ಕನ್ನಡಿಗರು ಸಿದ್ಧತೆ ನಡೆಸಿದ್ದಾರೆ. ಆದರೆ ಪ್ರತಿಬಾರಿ ದೀಪಾವಳಿ ಬಂದಾಗ ಸದ್ದು ಮಾಡುವುದು ಪಟಾಕಿಗಳು. ಹೀಗಿದ್ದಾಗ ಈ ಬಾರಿ ಪಟಾಕಿಗಳ ಅಬ್ಬರಕ್ಕೂ ಬ್ರೇಕ್ ಹಾಕಲು ಅಧಿಕಾರಿಗಳು & ಆಡಳಿತ ಸಜ್ಜಾಗಿದೆ. ಯಾಕೆ ಗೊತ್ತಾ?
ಅಷ್ಟಕ್ಕೂ ದೀಪಾವಳಿ ಹಬ್ಬವನ್ನು ನವೆಂಬರ್ 11 ರಿಂದ 15 ರವರೆಗೆ ಆಚರಿಸಲಾಗುತ್ತಿದ್ದು, ಸುಪ್ರೀಂ ಆದೇಶದಂತೆ ಈ ಬಾರಿ ಹಸಿರು ಪಟಾಕಿ ಬಿಟ್ಟು ಉಳಿದ ಯಾವುದೆ ಪಟಾಕಿ ಮಾರಾಟ ಮಾಡುವಂತಿಲ್ಲ & ಬಳಸುವಂತಿಲ್ಲ ಅಂತಾ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಇದೆ, ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೇಟ್ ಮೇಲೆ ಹಸಿರು ಪಟಾಕಿ ಚಿಹ್ನೆಯಿದ್ದು ಕ್ಯೂಆರ್ ಕೋಡ್ ಇರುವ ಪಟಾಕಿ ಉಪಯೋಗಿಸಬೇಕು ಎಂದಿದ್ದಾರೆ.

ಪಟಾಕಿ ಹಚ್ಚಲು ರೂಲ್ಸ್ ಏನು?
ಇನ್ನು ದೀಪಾವಳಿ ಹಬ್ಬದ ವೇಳೆ, ರಾತ್ರಿ 8 ರಿಂದ ರಾತ್ರಿ 10 ಗಂಟೆ ತನಕ ಮಾತ್ರ ಪಟಾಕಿಗಳ ಸಿಡಿಸಲು ಅವಕಾಶ ನೀಡಲಾಗಿದೆ. 125 ಡೆಸಿಬಲ್ ಮೇಲ್ಪಟ್ಟ ಪಟಾಕಿ ಸಿಡಿಸುವುದನ್ನ ನಿಷೇಧ ಮಾಡಲಾಗಿದೆ. 100 ಡೆಸಿಬಲ್ ಮೀರಿದ್ದರೆ ಅವುಗಳು ಹಸಿರು ಪಟಾಕಿ ಎನಿಸಿಕೊಳ್ಳಲ್ಲ. ಅದನ್ನ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್ ಅವರು ಖಡಕ್ ಸೂಚನೆ ನೀಡಿದ್ದಾರೆ.
ಎಲ್ಲೆಲ್ಲೂ ಕಣ್ಣಿಡಲಿರುವ ಅಧಿಕಾರಿಗಳು
ದೀಪಾವಳಿ ಹಬ್ಬದ ಆಚರಣೆ ವೇಳೆ ಹಸಿರು ಪಟಾಕಿ ಮಾತ್ರ ಬಳಸಬೇಕು ಹಾಗೂ ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು. ಹೆಚ್ಚು ಶಬ್ದ ಮಾಡುವ ಪಟಾಕಿಯ ನಿಯಂತ್ರಿಸುವ ನಿಟ್ಟಿನಲ್ಲಿ, ಆಯಾ ಭಾಗದ ಮುಖ್ಯಾಧಿಕಾರಿಗಳು, ತಾಲ್ಲೂಕು ಆಯೋಗ್ಯಾಧಿಕಾರಿ, ತಹಶೀಲ್ದಾರರು ಮತ್ತೆ ಜಿಲ್ಲಾ ಪರಿಸರ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ಪೊಲೀಸರು, ಅಗ್ನಿಶಾಮಕ ಅಧಿಕಾರಿಗಳು, ಆಸಕ್ತ ನಾಗರೀಕರು & ಸ್ಥಳೀಯ ಸರ್ಕಾರೇತರ ಸಂಘ ಸಂಸ್ಥೆ ಪತ್ರಿನಿಧಿಗಳ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಜಿಲ್ಲಾಧಿಕಾರಿ ದಯಾನಂದ್.

ಪ್ರತಿಯೊಂದು ಗೋದಾಮು ಪರಿಶೀಲನೆ
ಹಾಗೇ ಮತ್ತೊಂದು ಸೂಚನೆ ನೀಡಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ತಹಶೀಲ್ದಾರ್, ಪಿಡಿಓ ತಮ್ಮ ವ್ಯಾಪ್ತಿಯ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳ ಪರಿಶೀಲಿಸಬೇಕು. ಅಲ್ಲಿ ಹಸಿರು ಪಟಾಕಿಯಲ್ಲದೆ, ಇನ್ನಾವುದಾದರೂ ನಿಷೇದಿತ ಪಟಾಕಿಗಳ ದಾಸ್ತಾನು ಮಾಡಿದ್ದಲ್ಲಿ, ಇಡೀ ಗೋದಾಮನ್ನು ಮುಟ್ಟುಗೋಲು ಹಾಕಿಕೊಂಡು ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು, ಅಕಸ್ಮಾತ್ ಅಧಿಕಾರಿಗಳು ನಿರ್ಲಕ್ಷ್ಯತೆ ತೋರಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ದು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಬೆಂಗಳೂರು ಗಡಿಯಲ್ಲಿ ಫುಲ್ ಅಲರ್ಟ್
ಹಾಗೇ, ಅಧಿಕಾರಿಗಳು ಸಾರ್ವಜನಿಕರಿಗೆ & ಮಕ್ಕಳಲ್ಲಿ ಅರಿವು ಮೂಡಿಸಲು ಪರಿಣಾಮಾಕಾರಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪರಿಸರ ಸ್ನೇಹಿ ದೀಪಾವಳಿ ಕುರಿತು ಸಾರ್ವಜನಿಕ ಸ್ಥಳಗಳಾದ ಮೆಟ್ರೊ ನಿಲ್ದಾಣ, ರೈಲ್ವೆ & ಬಸ್ ನಿಲ್ದಾಣ, ಮಾಲ್‌ಗಳಲ್ಲಿ ಕರಪತ್ರ ಹಾಗೂ ಬಿತ್ತಿಪತ್ರ ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದ್ದಾರೆ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್.
ಹಾಗೇ ಹೊರ ರಾಜ್ಯಗಳಿಂದ ಅನಧಿಕೃತವಾಗಿ ನಿಷೇಧಿತ ಪಟಾಕಿ ಸಾಗಾಟ ಮಾಡುವ ನಿರೀಕ್ಷೆ ಇದ್ದು, ದೀಪಾವಳಿ ಹಬ್ಬ ಮುಗಿಯುವವರೆಗೂ ಜಿಲ್ಲೆಯ ಎಲ್ಲಾ ಗಡಿಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ ಬೆಂಗಳೂರು ನಗರ ಡಿಸಿ ದಯಾನಂದ್. ಇದು ಮಾಲಿನ್ಯ ತಡೆ & ಪರಿಸರ ರಕ್ಷಣೆ ದೃಷ್ಟಿಯಲ್ಲಿ ಉತ್ತಮ ಕ್ರಮ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಮತ್ತೊಂದು ಕಡೆ ಈ ಕುರಿತು ಚರ್ಚೆ ಜೋರಾಗಿದೆ. ಒಟ್ನಲ್ಲಿ ಇಷ್ಟೆಲ್ಲದರ ನಡುವೆಯೂ ಕನ್ನಡಿಗರು ಅದ್ಧೂರಿಯಾಗಿ, ದೀಪಗಳ ಜೊತೆಯಲ್ಲಿ ನಮ್ಮೆಲ್ಲರ ಹಿರಿಯರು ಆಚರಿಸುತ್ತಿದ್ದ ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಸಜ್ಜಾಗಿದ್ದಾರೆ.












Click it and Unblock the Notifications