Exclusive: ಲಕ್ಕುಂಡಿ: ನಿಧಿ ನೀಡಿದ ಕುಟುಂಬಕ್ಕೆ ಸರ್ಕಾರದಿಂದ ನಿವೇಶನ ಸೇರಿ ಭರ್ಜರಿ ಆಫರ್: ಎಚ್.ಕೆ ಪಾಟೀಲ್
ಗದಗ: ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಗಂಗವ್ವ ರಿತ್ತಿ ಹಾಗೂ ಪುತ್ರ ಪ್ರಜ್ವಲ್ ರಿತ್ತಿ ಅವರನ್ನು ವಿಶೇಷವಾಗಿ ಸನ್ಮಾನ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೇ ಈ ಭಾಗದಲ್ಲಿ ಇನ್ನಷ್ಟು ಪುರಾತತ್ವ ವಸ್ತುಗಳು ಸಿಗುವ ನಿರೀಕ್ಷೆ ಇರುವುದರಿಂದ ಪುರಾತತ್ವ ಇಲಾಖೆಯು ವಿಶೇಷ ಕಾರ್ಯಾಚರಣೆಗೆ ಮುಂದಾಗುತ್ತಿದೆ. ಈ ಕುಟುಂಬಕ್ಕೆ ಉದ್ಯೋಗ, ಮನೆ ನಿರ್ಮಾಣ ಹಾಗೂ ನಿವೇಶನ ಕೊಡುವ ವಿಚಾರಗಳ ಬಗ್ಗೆ ಕಾನೂನು ಸಚಿವ ಎಚ್.ಕೆ ಪಾಟೀಲ್ ಅವರು Oneindia Kannadaದೊಂದಿಗೆ ಮಾತನಾಡಿದ್ದಾರೆ. ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ಷಣದ ವಿಶೇಷ ಮಾಹಿತಿ ಈ ಲೇಖನದಲ್ಲಿದೆ.
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಕಟ್ಟುವುದಕ್ಕೆ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ನಿಧಿ (ಚಿನ್ನಾಭರಣ) ಪತ್ತೆಯಾಗಿತ್ತು. ಪುರಾತನ ಕಾಲದ 460 ಗ್ರಾಂ ಚಿನ್ನ ಪತ್ತೆಯಾಗಿದ್ದು, ಅದನ್ನು ರಿತ್ತಿ ಕುಟುಂಬವು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿತ್ತು. ಆದರೆ, ನಿಧಿ ನೀಡಿದ ಕುಟುಂಬಕ್ಕೆ ಸೂರಿನ ಸಮಸ್ಯೆ ಆಗಿದೆ ಸರ್ಕಾರವು ಸೂಕ್ತ ಸೂರಿನ ವ್ಯವಸ್ಥೆ ಮಾಡಬೇಕು ಹಾಗೂ ಇಂದಿನ ದಿನಗಳಲ್ಲೂ ಈ ರೀತಿ ಪ್ರಾಮಾಣಿಕತೆ ಮೆರೆದಿರುವ ಕುಟುಂಬವನ್ನು ಸರ್ಕಾರ ಗೌರವಿಸಬೇಕು ಎನ್ನುವ ಆಗ್ರಹ ಕನ್ನಡಿಗರಿಂದ ಕೇಳಿ ಬಂದಿತ್ತು. ಇದೀಗ ಕನ್ನಡಿಗರ ಆಗ್ರಹಕ್ಕೆ ರಾಜ್ಯ ಸರ್ಕಾರ ದನಿಯಾಗಿದೆ.

ಇದೇ 26ಕ್ಕೆ ರತ್ತಿ ಕುಟುಂಬಕ್ಕೆ ಸರ್ಕಾರದಿಂದ ಸನ್ಮಾನ, ನಿವೇಶನ
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಡಿಪಾಯ ಹಾಕುತ್ತಿದ್ದ ಸಂದರ್ಭದಲ್ಲಿ ದೊರೆತ ನಿಧಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸುವ ಮೂಲಕ ಪ್ರಜ್ವಲ್ ರಿತ್ತಿ ಎಂಬ ಬಾಲಕ ಎಲ್ಲರಿಗೂ ಮಾದರಿ ಎನಿಸಿದ್ದಾರೆ. ಈ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು. ಇದೇ 26ರಂದು ಕುಟುಂಬವನ್ನು ರಾಜ್ಯ ಸರ್ಕಾರದಿಂದ ಸನ್ಮಾನಿಸಲಾಗುವುದು. ರಾಜ್ಯ ಸರ್ಕಾರದಿಂದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ನಿವೇಶನ ಹಾಗೂ ಸೂರು ಕಲ್ಪಿಸಿಕೊಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ಎಚ್.ಕೆ ಪಾಟೀಲ್ ಅವರು Oneindia Kannadaಕ್ಕೆ ತಿಳಿಸಿದ್ದಾರೆ.
ನಿಧಿಗಿಂತಲೂ ಹೆಚ್ಚು ಪ್ರಜ್ವಲ್ ರತ್ತಿ ಆದರ್ಶ ಮೆರೆದಿದ್ದಾನೆ. ಅದಕ್ಕೆ ವಿಶೇಷವಾದ ಬೆಲೆ ಇದೆ. ಊರಿನ ಜನ ಈ ಕುಟುಂಬಕ್ಕೆ ಮನೆ, ಜಾಗ ಆಗಬೇಕು ಎಂದು ಹೇಳಿದ್ದಾರೆ. ಅವರ ತಾಯಿಗೆ ಒಂದು ಉದ್ಯೋಗ ಕೊಡಿಸಬೇಕು ಎಂದು ಕೇಳಿದ್ದಾರೆ. ಈ ಎಲ್ಲಾ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಲಿದೆ. 26ಕ್ಕೆ ನಾವು ವಿಶೇಷ ಸನ್ಮಾನ ಮಾಡಿ, ಸರ್ಕಾರದಿಂದ ಘೋಷಣೆ ಮಾಡಲಿದ್ದೇವೆ.
ಇನ್ನು ನಿಧಿ ಸಿಕ್ಕಿರುವ ಜಾಗದಲ್ಲಿ ಪುರಾತತ್ವ ಇಲಾಖೆಯಿಂದ ಪರಿಶೀಲನೆ ಪೂರ್ಣಗೊಂಡ ನಂತರ ಜಾಗವನ್ನು ಸಹ ಬಿಟ್ಟುಕೊಡಲಿದ್ದೇವೆ. ಮನೆಯನ್ನೂ ಸರ್ಕಾರದಿಂದ ನಿರ್ಮಿಸಿಕೊಡಲಿದ್ದೇವೆ ಎಂದು ಎಚ್.ಕೆ ಪಾಟೀಲ್ ಅವರು ಭರವಸೆ ನೀಡಿದ್ದಾರೆ.
ಪುರಾತತ್ವ ಇಲಾಖೆಯಿಂದ ಉತ್ಖನನ
ಲಕ್ಕುಂಡಿ ಗ್ರಾಮದಲ್ಲಿ ನಿಧಿ ಹಾಗೂ ಪುರಾತನ ಕಾಲದ ಅಮೂಲ್ಯ ವಸ್ತುಗಳು ಪತ್ತೆ ಆಗುತ್ತಿರುವ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಯಿಂದ ಉತ್ಖನನ ಪ್ರಕ್ರಿಯೆ ಪ್ರಾರಂಭವಾಗಲಿದೆ. ನಾಳೆಯಿಂದ (ಜನವರಿ 16) ದೊಡ್ಡ ಮಟ್ಟದಲ್ಲಿ ಉತ್ಖನನ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದೇವೆ. ಈ ಸಂಬಂಧ ಪುರಾತತ್ವ ಇಲಾಖೆ ಹಾಗೂ ಇತಿಹಾಸ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಎಂದು ಎಚ್.ಕೆ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications