ವಿದ್ಯುತ್ ಸಮಸ್ಯೆ ದೇವರಿಂದಲೂ ಬಗೆಹರಿಯೋಲ್ಲ!
ಬೆಂಗಳೂರು, ಜು.1 : ಕರ್ನಾಟಕದ ವಿದ್ಯುತ್ ಸಮಸ್ಯೆ ಬಗೆಹರಿಸಲು ದೇವರಿಂದಲೂ ಸಾಧ್ಯವಿಲ್ಲ. ಎಷ್ಟು ಎಂದು ವಿದ್ಯುತ್ ಖರೀದಿ ಮಾಡಿ ಪೂರೈಕೆ ಮಾಡುತ್ತೀರಿ? ವಿದ್ಯುತ್ ಸಮಸ್ಯೆ ಬಗೆಹರಿಸುವುದು ಅಸಾಧ್ಯ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಂಗಳವಾರದ ಕಲಾಪದ ವೇಳೆ ವಿಧಾನಪರಿಷತ್ತಿನಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ವೀರಣ್ಣ ಮತ್ತಿಕಟ್ಟಿ ಅವರು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಡಿ.ಕೆ.ಶಿವಕುಮಾರ್, ವಿದ್ಯುತ್ ಸಮಸ್ಯೆ ಬಗೆಹರಿಸುವುದು ಅಷ್ಟು ಸುಲಭವಲ್ಲ. ದೇವರಿಂದಲೂ ಇದು ಸಾಧ್ಯವಾಗದ ಕೆಲಸ ಎಂದು ಹೇಳಿದರು.

ರಾಜ್ಯದಲ್ಲಿ ರೈತರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದೇವೆ. ರೈತರಿಗೆ 50 ಸಾವಿರ ರೂ. ಮೌಲ್ಯದ ಶೇ.40ರಷ್ಟು ವಿದ್ಯುತ್ ಅನ್ನು ಉಚಿತವಾಗಿ ನಿಡುತ್ತಿದ್ದೇವೆ. ಈ ಉಚಿತ ವಿದ್ಯುತ್ ಸರಬರಾಜನ್ನು ನಿಲ್ಲಿಸಬೇಕಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಆಗ ರೈತರಿಗೆ ವಿದ್ಯುತ್ ಮೌಲ್ಯ ತಿಳಿಯುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. [ಮಂಗಳವಾರದ ಕಲಾಪದ ಮುಖ್ಯಾಂಶಗಳು]
ಈ ಬಾರಿ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಿದೆ. ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಈ ವರೆಗೂ ವಿದ್ಯುತ್ ಖರೀದಿಯಾಗಿಲ್ಲ. ಬೆಲೆ ಏರಿಕೆ ಹಿನ್ನಲೆಯಲ್ಲಿ ಸಮಸ್ಯೆ ಉಂಟಾಗಿದೆ. ಉತ್ತಮ ಮಳೆಯಾದರೆ ನಾವು ಬದುಕುತ್ತೇವೆ. ಆದ್ದರಿಂದ ಮಳೆಗಾಗಿ ದೇವರಲ್ಲಿ ಎಲ್ಲರೂ ಪ್ರಾರ್ಥನೆ ಮಾಡಬೇಕು ಎಂದು ಸಚಿವರು ಹೇಳಿದರು.
ಸಚಿವರ ಹೇಳಿಕೆಗೆ ಗರಂ : ಸಚಿವರ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಿಜೆಪಿ ಸದಸ್ಯ ರಾಮಚಂದ್ರೇಗೌಡ ವಿರೋಧ ವ್ಯಕ್ತಪಡಿಸಿದರು. ವಿದ್ಯುತ್ ಮೌಲ್ಯದ ಬಗ್ಗೆ ನಮ್ಮ ರೈತರಿಗೆ ನೀವು ಪಾಠ ಹೇಳಿಕೊಡುವ ಅಗತ್ಯವಿಲ್ಲ. ರೈತರಿಗೆ ವಿದ್ಯುತ್ ಮೌಲ್ಯದ ಬಗ್ಗೆ ಗೊತ್ತಿದೆ. ನೀವು ಕೊಡುವ ವಿದ್ಯುತ್ ಗೆ ಎಷ್ಟು ನೀರು ಸಿಗುತ್ತೆ ಗೊತ್ತೆ? ಎಂಬುದು ಅವರಿಗೆ ತಿಳಿದಿದೆ ಎಂದು ತಿರುಗೇಟು ನೀಡಿದರು.












Click it and Unblock the Notifications