ನ.24 ರಿಂದ 26ರ ತನಕ ಬೆಸ್ಕಾಂ ಆನ್‌ಲೈನ್ ಸೇವೆಗಳು ಸ್ಥಗಿತ; ವಿವರ
ಬೆಂಗಳೂರು, ನವೆಂಬರ್ 19: ಕರ್ನಾಟಕದ 5 ಎಸ್ಕಾಂ ವ್ಯಾಪ್ತಿಯ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿವಿಧ ಆನ್‌ಲೈನ್ ಸೇವೆಗಳು ನವೆಂಬರ್ 24 ರಿಂದ 26ರ ತನಕ ಸ್ಥಗಿತವಾಗಲಿವೆ. ವಿದ್ಯುತ್ ಬಿಲ್ ಪಾವತಿ ಸೇರಿದಂತೆ ವಿವಿಧ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಈ ಕುರಿತು ಮಾಹಿತಿ ನೀಡಿದೆ. ಬೆಸ್ಕಾಂ, ಸೆಸ್ಕ್, ಮೆಸ್ಕಾಂ, ಜೆಸ್ಕಾಂ ಮತ್ತು ಹೆಸ್ಕಾಂ ವ್ಯಾಪ್ತಿಯ ವಿವಿಧ ನಗರ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಆನ್‌ಲೈನ್ ಸೇವೆಗಳು ಸ್ಥಗಿತಗೊಳ್ಳಲಿವೆ.

ಐಟಿ ಮತ್ತು ಹಾರ್ಡ್‌ವೇರ್ ಉನ್ನತೀಕರಣ ಮಾಡಲಾಗುತ್ತಿದೆ. ಆದ್ದರಿಂದ ನವೆಂಬರ್ 24 ರಿಂದ 26ರ ತನಕ ಆನ್‌ಲೈನ್ ಸೇವೆ ಸ್ಥಗಿತಗೊಳಿಸಲಾಗುತ್ತದೆ. ಬೆಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕಲಬುರಗಿ ವ್ಯಾಪ್ತಿಯ ನಗರ, ಪಟ್ಟಣ ಪ್ರದೇಶಗಳಲ್ಲಿ ಮೂರು ದಿನ ನಗದು ಪಾವತಿ ಕೌಂಟರ್‌ಗಳಲ್ಲಿ ಸೇವೆಗಳು ಇರುವುದಿಲ್ಲ.
ಗ್ರಾಹಕರು ಆತಂಕ ಪಡಬೇಕಿಲ್ಲ. ಹೊಸ ವಿದ್ಯುತ್ ಸಂಪರ್ಕ, ಹೆಸರು ಬದಲಾವಣೆ, ನಗದು ಪಾವತಿ, ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿ ಸೇವೆಗಳು ಲಭ್ಯ ಇರುವುದಿಲ್ಲ. ಆದರೆ ಈ ಅವಧಿಯಲ್ಲಿ ವಿದ್ಯುತ್ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಗರ/ ಪಟ್ಟಣ ಪ್ರದೇಶದ ವಿವರಗಳು
ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಕ್ಯಾತ್ಸಂದ್ರ, ಶಿರಾ, ಚನ್ನಪಟ್ಟಣ, ಆನೇಕಲ್, ಮುಳಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆಜಿಎಫ್, ಚಳ್ಳಕೆರೆ, ಹರಪನಹಳ್ಳಿ, ಹರಿಹರ, ಹಿರಿಯೂರು, ತಿಪಟೂರು, ಗೌರಿಬಿದನೂರು ನಗರ/ ಪಟ್ಟಣದಲ್ಲಿ ಆನ್‌ಲೈನ್ ಸೇವೆ ಲಭ್ಯವಿಲ್ಲ.
ಮೆಸ್ಕಾಂ ವ್ಯಾಪ್ತಿಯಲ್ಲಿ ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಸೇವೆ ಲಭ್ಯವಿರುವುದಿಲ್ಲ.
ಸೆಸ್ಕ್ ವ್ಯಾಪ್ತಿಯಲ್ಲಿ ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ. ಆರ್. ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೇಗಾಲ, ಹಾಸನ, ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಆನ್‌ಲೈನ್ ಸೇವೆಗಳು ಇರುವುದಿಲ್ಲ.
ಜೆಸ್ಕಾಂ ವ್ಯಾಪ್ತಿಯಲ್ಲಿ ಮಾನ್ವಿ, ಸಿಂಧನೂರು, ಬೀದರ್, ಗಂಗಾವತಿ, ಕಲಬುರಗಿ, ಸೇಡಂ, ಬಸವಕಲ್ಯಾಣ, ವಾಡಿ, ಶಹಬಾದ್, ಶಹಾಪುರ, ಶಿರಗುಪ್ಪ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್, ಹೊಸಪೇಟೆ ವ್ಯಾಪ್ತಿಯಲ್ಲಿ ಸೇವೆಗಳು ಇರುವುದಿಲ್ಲ.
ಹೆಸ್ಕಾಂ ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೇಶ್ವರ, ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸವಣೂರು, ಶಿರಸಿ, ಬಾಗಲಕೋಟೆ, ರಬಕವಿ-ಬನಹಟ್ಟಿ, ಗದಗ, ಗೋಕಾಕ್, ಹಾವೇರಿ, ಇಳಕಲ್, ರಾಣೆಬೆನ್ನೂರು, ವಿಜಯಪುರದಲ್ಲಿ ಸೇವೆಗಳು ಲಭ್ಯವಿಲ್ಲ.











Click it and Unblock the Notifications