ಟಿಕೆಟ್ ರಾಜಕೀಯ : ಅನಿಲ್ ಲಾಡ್ ವಿರುದ್ಧ ತಿರುಗಿಬಿದ್ದ ಮುಸ್ಲಿಮರು
ಬಳ್ಳಾರಿ, ಫೆಬ್ರವರಿ 23: ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ಅನಿಲ್ ಎಚ್. ಲಾಡ್ ವಿರುದ್ಧ ತಿರುಗಿಬಿದ್ದ ಮುಸ್ಲಿಂ ಮುಖಂಡರು. ನಾನು ಪಕ್ಷ ಬಿಡುತ್ತೇನೆ, ನೀವೇ ಸ್ಪರ್ಧಿಸಿ' ಎಂದು ಅಬ್ಬರಿಸಿದ ಅನಿಲ್ ಲಾಡ್. ಮುಸ್ಲಿಮರು' ಕೇವಲ ಪಕ್ಷಕ್ಕೆ ದುಡಿಯುವ ಕೂಲಿಗಳಲ್ಲ, ನಾವೂ ಸ್ಪರ್ಧಿಸಲು ಅರ್ಹರು' ಎಂದ ಮುಸ್ಲಿಂ ಮುಖಂಡರು.
ಇಂಥಹದ್ದೊಂದು ಪ್ರಹಸನ ನಡೆದದ್ದು, ಚುನಾವಣಾ ವೀಕ್ಷಕರಾದ ಬಿ.ವಿ. ನಾಯಕ್ ಮತ್ತು ವೆಂಕಟರಮಣಪ್ಪ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಿಂದ ಅರ್ಜಿ ಸ್ವೀಕರಿಸಲು ಬಳ್ಳಾರಿಗೆ ಆಗಮಿಸಿದಾಗ ಅವರ ಸಮ್ಮುಖದಲ್ಲಿ ಇಂಥದ್ದೊಂದು ಘಟನೆ ನಡೆಯಿತು.
ಇದಕ್ಕೆಲ್ಲಾ ಕಾರಣ, ಶಾಸಕ ಅನಿಲ್ ಲಾಡ್ ಆಡಿದ ವ್ಯಂಗ್ಯಭರಿತವಾದ ನೀವೊಬ್ಬರೇ ಪಕ್ಷದಲ್ಲಿ ಇರ್ರಿ, ನಾನಿನ್ನು ಹೋಗ್ತೀನಿ?' ಎಂದಾಗ ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್, ಏಐಸಿಸಿ ವಕ್ತಾರ ಡಾ. ನಾಸಿರ್ ಹುಸೇನ್ ಸೇರಿದಂತೆ ಮುಸ್ಲಿಂ ಕಾರ್ಯಕರ್ತರು - ಮುಖಂಡರು ಒಟ್ಟಾಗಿ ಅನಿಲ್ ಲಾಡ್ ಮೇಲೆರೆಗಿದರು.

ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು
'ಕಾಂಗ್ರೆಸ್ ಪಕ್ಷ ಬಳ್ಳಾರಿಯಲ್ಲಿ ಮುಸ್ಲಿಂಮರನ್ನು ಕೇವಲ ಓಟುಗಳಿಗಾಗಿ ಬಳಕೆ ಮಾಡಿಕೊಂಡು, ಪಕ್ಷ ವಿರೋಧಿಗಳಿಗೇ ಮಣೆ ಹಾಕಿ, ಅಧಿಕಾರಕ್ಕೆ ತರುತ್ತಿದೆ. ನಾವು ಈ ಬಾರಿ ಪಕ್ಷಕ್ಕಾಗಿ ದುಡಿಯುವ ಕುರಿತು ಚಿಂತನೆ ನಡೆಸುತ್ತೇವೆ' ಎಂದು ಪಕ್ಷಕ್ಕೆ ಎಚ್ಚರಿಕೆ ನೀಡಿದರು.

ಹಾಸ್ಯಕ್ಕಾಗಿ ಆಡಿದ ಮಾತು, ಟೀಕೆ - ವ್ಯಂಗ್ಯದ ರೂಪ
ರಾಯಲ್ ಸ್ಫೋರ್ಟ್ಸ್ ನಲ್ಲಿ ಕಾಂಗ್ರೆಸ್ಸಿಗರ ಸಭೆಯ ನಂತರ, ನೇರವಾಗಿ ಮನೆಗೆ ತೆರಳಿದ ಅನಿಲ್ ಲಾಡ್, ಹಾಸ್ಯಕ್ಕಾಗಿ ಆಡಿದ ಮಾತು, ಟೀಕೆ - ವ್ಯಂಗ್ಯದ ರೂಪ ಪಡೆದು ಪಕ್ಷದ ಶಿಸ್ತನ್ನೇ ಉಲ್ಲಂಘಿಸಿ ಸಭೆಯಲ್ಲಿ ಅವಾಂತರ ಸೃಷ್ಟಿ ಆಯಿತು. ಇಡೀ ಮುಸ್ಲಿಂ ಮುಖಂಡರು ನನ್ನ ವಿರೋಧ ಮಾಡುವಂತಾಯಿತು' ಎಂದು ಆಪ್ತರಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಸ್ಪರ್ಧಿಸಲು ಅನೇಕ ಮಂದಿ ತಯಾರಿ
ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿ ಹಾಲಿ ಶಾಸಕ ಅನಿಲ್ ಎಚ್. ಲಾಡ್, ಬುಡಾ ಮಾಜಿ ಅಧ್ಯಕ್ಷರಾದ ಹುಮಾಯೂನ್ ಖಾನ್, ಹಾಲಿ ಅಧ್ಯಕ್ಷ ಆಂಜಿನೇಯಲು, ಕಾಂಗ್ರೆಸ್ ನಾಯಕಿ, ಕೆ.ಸಿ. ಕೊಂಡಯ್ಯ ಅವರ ಆಪ್ತ ಕಟ್ಟಾ ಬೆಂಬಲಿಗರಾದ ಮಂಜುಳಾ, ಮಾಜಿ ಸಚಿವ ಎಂ. ದಿವಾಕರ್ ಅವರ ಮಗ, ಯುವ ಕಾಂಗ್ರೆಸ್ ಮುಖಂಡ, ಹನುಮ ಕಿಶೋರ್ ಮತ್ತು ಎಲ್ಲೈಸಿ ಉದ್ಯೋಗಿ, ರಿಯಲ್ ಎಸ್ಟೇಟ್ ವ್ಯವಹಾರಿ ಆರ್. ಸುನಿಲ್ ಅವರು ಅರ್ಜಿ ಸಲ್ಲಿಸಿದ್ದಾರೆ.

ಸೂರ್ಯನಾರಾಯಣರೆಡ್ಡಿ ಟಿಕೇಟ್ ಅರ್ಜಿ ಹಾಕಿಲ್ಲ
ಪಕ್ಷದ ಟಿಕೇಟ್ ಗಾಗಿ ಶ್ರಮಿಸಿ, ಚುನಾವಣೆಗೆ ಸ್ಪರ್ಧಿಸಲು ತೀವ್ರ ಆಸಕ್ತಿ ತೋರುತ್ತಿರುವ ಎನ್. ಸೂರ್ಯನಾರಾಯಣರೆಡ್ಡಿ ಟಿಕೇಟ್ ಗಾಗಿ ಅರ್ಜಿಯನ್ನೇ ಸಲ್ಲಿಸದೇ ಇರುವುದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ.
ಹಿನ್ನಲೆ : ಕಾಂಗ್ರೆಸ್ ನ ಜಿಲ್ಲಾ ನಗರ ಅಧ್ಯಕ್ಷ ಮೊಹಮ್ಮದ್ ರಫೀಕ್ ಮತ್ತು ಕೌಲ್‍ಬಜಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರ್‍ಎಸ್‍ಎಸ್, ಹಿಂದುತ್ವವಾದಿ ಸತೀಶ್ ಚಕ್ರವರ್ತಿ ನೇಮಕಾತಿ ಹಿನ್ನಲೆಯಲ್ಲಿ ಜಿಲ್ಲಾ ನಗರ ಕೇಂದ್ರಿತ ಮುಸ್ಲಿಮರಲ್ಲಿ ಸಾಕಷ್ಟು ಅಸಮಾಧಾನವಿದೆ. ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲೂ ಅಧಿಕೃತ ದೂರನ್ನು ನಾಸಿರು ಹುಸೇನ್, ಹೂಮಾಯೂನ್‍ಖಾನ್, ಎಪಿಎಂಸಿ ಅಧ್ಯಕ್ಷ ನಾಗರಾಜ್, ಮೇಯರ್ ವೆಂಕಟರಮಣ ಸೇರಿದಂತೆ ಐದುನೂರು ಮುಖಂಡರು ಸಲ್ಲಿಸಿದ್ದನ್ನು ಸ್ಮರಿಸಬಹುದು.












Click it and Unblock the Notifications