ಬಳ್ಳಾರಿಯಲ್ಲಿ ಬಲಿಜರಿಗೆ ಅಸೆಂಬ್ಲಿ ಟಿಕೆಟ್ ನೀಡಲು ಆಗ್ರಹ
ಬಳ್ಳಾರಿ, ಜನವರಿ 29: ಬಳ್ಳಾರಿ ಜಿಲ್ಲೆಯ ರಾಜಕೀಯ ದಿನೇ ದಿನೇ ರಂಗೇರುತ್ತಿದೆ. ಗಣಿ ಧೂಳಿನ ಜೊತೆ ಜೊತೆಯಲ್ಲಿ ಜಾತಿ, ಮತ, ಧರ್ಮ ಆಧಾರಿತ ಟಿಕೆಟ್ ಆಕಾಂಕ್ಷಿಗಳು, ಸ್ಪರ್ಧಾಸಕ್ತರ ಪಟ್ಟಿ ದೊಡ್ಡದಾಗುತ್ತಿದೆ. ರಾಜಕೀಯ ಪಕ್ಷಗಳು ಮಾತ್ರ ಇನ್ನೂ ಬಳ್ಳಾರಿಯ ಬಿಸಿಲಿನಲ್ಲಿ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುವ ದುಸ್ಸಾಹಸಕ್ಕೆ ಮುಂದಾಗುತ್ತಿಲ್ಲ.
ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಕೆ. ರಮೇಶ್, ಸೋಮವಾರ ಪತ್ರಿಕಾಗೋಷ್ಟಿ ನಡೆಸಿ, ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಮತದಾರರು ಇರುವ ತಮ್ಮ ಜಾತಿಯ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಟಿಕೇಟ್ ನೀಡಬೇಕು. ನಮ್ಮಲ್ಲಿಯೂ ಬಳ್ಳಾರಿ ಮತ್ತು ಹೊಸಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತ ಅಭ್ಯರ್ಥಿಗಳ ಪಟ್ಟಿ ಇದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಚಿಂತನೆ ನಡೆಸಬೇಕು ಎನ್ನುವ ಮೂಲಕ, ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದಾರೆ.

ಅಷ್ಟೇ ಅಲ್ಲ, ಫೆಬ್ರವರಿ 10ರ ಶನಿವಾರ, ಹೊಸಪೇಟೆಗೆ ಆಗಮಿಸಲಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ತಮ್ಮ ಜಾತಿಯ ಮುಖಂಡರ ನಿಯೋಗ ಭೇಟಿ ಮಾಡಿ, ಬಲಿಜ ಜನಾಂಗಕ್ಕೆ ಟಿಕೇಟ್ ನೀಡಲು ಕೋರಿ ಮನವಿ ಸಲ್ಲಿಸುವ ಪ್ರಯತ್ನ ನಡೆಯಲಿದೆ. ಇಲ್ಲವಾದಲ್ಲಿ, ಕೆಪಿಸಿಸಿ ಮೂಲಕ ಏಐಸಿಸಿಗೆ ತಮ್ಮ ಮನವಿಯನ್ನು ಸಲ್ಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ನಗರ ಮತ್ತು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 45 ಸಾವಿರ ಬಲಿಜ ಮತದಾರರಿದ್ದು, ಬಳ್ಳಾರಿ ಗ್ರಾಮೀಣ ವಾಲ್ಮೀಕಿ ಜನಾಂಗಕ್ಕೆ ಮೀಸಲು ಆಗಿರುವ ಹಿನ್ನಲೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೇಟ್ ನೀಡಿದಲ್ಲಿ ಸ್ಪರ್ಧಿಸುವುದಾಗಿ ಅವರು ಸ್ಪಷ್ಟಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಅನಿಲ್ ಎಚ್. ಲಾಡ್ ಮತ್ತು ಬಳ್ಳಾರಿ ಗ್ರಾಮೀಣ ಉಪ ಚುನಾವಣೆಯಲ್ಲಿ ಎನ್.ವೈ. ಗೋಪಾಲಕೃಷ್ಣ ಅವರು ಗೆಲುವು ಸಾಧಿಸಲು ಬಲಿಜ ಮತಗಳು ಬಹುಪಾಲು ಮುಖ್ಯ. ಕಾರಣ ದಶಕಗಳಿಂದಲೂ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಿರುವ ಬಲಿಜ ಜನಾಂಗದ ತಮ್ಮ ಬೇಡಿಕೆಯನ್ನು, ಕಾಂಗ್ರೆಸ್ ಪಕ್ಷ ಪರಿಗಣಿಸಿ, ಟಿಕೇಟ್ ನೀಡುವ ವಿಶ್ವಾಸವಿದೆ ಎಂದು ಅವರು ಹೇಳಿದರು.












Click it and Unblock the Notifications