ಚುನಾವಣಾ ಆಯೋಗ ಬಿಜೆಪಿ ಅಂಗಸಂಸ್ಥೆಯಂತೆ ವರ್ತಿಸುತ್ತಿದೆ: ಕರ್ನಾಟಕ ಕಾಂಗ್ರೆಸ್ ಸಚಿವ
ಭಾರತೀಯ ಚುನಾವಣಾ ಆಯೋಗವು ಬಿಜೆಪಿಯ ಅಂಗಸಂಸ್ಥೆಯಂತೆ ವರ್ತಿಸುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವರೊಬ್ಬರು ದೂರಿದ್ದಾರೆ. ಈಚೆಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆರೋಪ ಮಾಡಿದ ಬೆನ್ನಲ್ಲೇ ದೇಶದ ವಿವಿಧ ಕಾಂಗ್ರೆಸ್ ನಾಯಕರೂ ಸಹ ಈ ವಿಚಾರವಾಗಿ ಮಾತನಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಾಗಲೇ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳಿಂದ ಆಕ್ಷೇಪಣೆ ವ್ಯಕ್ತವಾಗಿದೆ. ಇದಕ್ಕೆ ಮತ್ತೊಂದು ಕಾರಣ ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ. ಚುನಾವಣೆ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗ ಇತ್ತೀಚಿಗೆ ಬಿಜೆಪಿಯ ಅಂಗಸಂಸ್ಥೆಯಂತೆ ವರ್ತಿಸುತ್ತಿದೆ. ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಆಯೋಗ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಆರಂಭಿಸಿದೆ. ಇದು ಬಿಹಾರದಲ್ಲಿ ದೊಡ್ಡ ಸಂಖ್ಯೆಯ ಮತದಾರರನ್ನು ಅವರ ಮತದಾನ ಹಕ್ಕಿನಿಂದ ಕಸಿಯುವ ಹುನ್ನಾರ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆರೋಪಿಸಿದ್ದಾರೆ.

ಚುನಾವಣಾ ಆಯೋಗದ ಈ ನಿರ್ಧಾರ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಮಹಾರಾಷ್ಟ್ರ ಚುನಾವಣೆಯಲ್ಲೂ ಆಯೋಗ ಇದೇ ರೀತಿಯಲ್ಲಿ ಅನುಮಾನಾಸ್ಪದ ನಿರ್ಧಾರ ಕೈಗೊಂಡಿತ್ತು. ಕೆಲವೇ ತಿಂಗಳುಗಳ ಅಂತರದಲ್ಲಿ ನಡೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ನಡುವೆ 41 ಲಕ್ಷ ಮತದಾರರು ಇದ್ದಕ್ಕಿದ್ದಂತೆ ಸೇರ್ಪಡೆಯಾಗಿದ್ದರು. ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆಯನ್ನು ಭಾರಿ ಸಂಖ್ಯೆಯಲ್ಲಿ ಏರಿಸಿದ್ದ ಚುನಾವಣಾ ಆಯೋಗ, ಈಗ ಬಿಹಾರದಲ್ಲಿ ಪರಿಷ್ಕರಣೆಯ ನೆಪದಲ್ಲಿ ದೊಡ್ಡ ಸಂಖ್ಯೆಯ ಮತದಾರರ ಹಕ್ಕು ಕಸಿಯಲು ಹೊರಟಿದೆ. ಆಯೋಗದ ಇಂತಹ ಎಡವಟ್ಟು ನಿರ್ಧಾರಗಳು ಯಾರಿಗೆ ಅನುಕೂಲ ಮಾಡಲು ಎಂದು ಬಿಡಿಸಿ ಹೇಳಬೇಕಿಲ್ಲ ಎಂದಿದ್ದಾರೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕಿರುವುದು ಆಯೋಗದ ಜವಾಬ್ದಾರಿ. ಆದರೆ ಆಯೋಗವೇ ಒಂದು ಪಕ್ಷದ ಅಂಗಸಂಸ್ಥೆಯಂತೆ ಅನ್ಯಾಯದ ಹಾದಿ ತುಳಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಇನ್ನಾದರೂ ಭಾರತೀಯ ಚುನಾವಣಾ ಆಯೋಗ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ vs ಭಾರತೀಯ ಚುನಾವಣಾ ಆಯೋಗ: ಕಾಂಗ್ರೆಸ್ ಹಾಗೂ ಭಾರತೀಯ ಚುನಾವಣಾ ಆಯೋಗದ ನಡುವೆ ಕಳೆದ ಕೆಲವು ದಿನಗಳಿಂದ ಸಂಘರ್ಷ ಮುಂದುವರಿದಿದೆ. ಭಾರತೀಯ ಚುನಾವಣಾ ಆಯೋಗ ಮತದಾರರ ವಿವರವನ್ನು ನಿಖರವಾಗಿ ನೀಡುತ್ತಿಲ್ಲ. ಪಾರದರ್ಶಕತೆ ಕೊರತೆ ಎದ್ದು ಕಾಣಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಲೋಕಸಭೆ ಚುನಾವಣೆಯ ಮತದಾನದ ಸಂದರ್ಭದಿಂದಲೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ಮುಂದುವರಿದಿದೆ. ಇದೀಗ ಬಿಹಾರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಈ ವಿಷಯವನ್ನು ಕಾಂಗ್ರೆಸ್ ಮತ್ತೆ ಪ್ರಸ್ತಾಪಿಸಿದೆ. ಆದರೆ, ಕಾಂಗ್ರೆಸ್ ಆರೋಪಗಳನ್ನು ಭಾರತೀಯ ಚುನಾವಣಾ ಆಯೋಗವು ನಿರಾಕರಿಸಿದ್ದು. ಬಿಜೆಪಿ ಸಹ ಕಾಂಗ್ರೆಸ್ ನಡೆಯನ್ನು ಟೀಕಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರಿದಿದೆ.












Click it and Unblock the Notifications