ಬಿಜೆಪಿ ಸ್ಟಾರ್ ಪ್ರಚಾರಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್ ನೀಡಿದ ಚುನಾವಣಾ ಆಯೋಗ
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಮತದಾನಕ್ಕೆ ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಹೀಗಾಗಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ರಾಜ್ಯ ನಾಯಕರೊಂದಿಗೆ ರಾಷ್ಟ್ರೀಯ ನಾಯಕರೂ ಕ್ಷೇತ್ರಗಳಲ್ಲಿ ಭರ್ಜರಿ ಸಮಾವೇಶ ಹಾಗೂ ರೋಡ್ ಶೋ ಮಾಡುತ್ತಿದ್ದಾರೆ. ಇದೇ ವೇಳೆ ರಾಜಕೀಯ ನಾಯಕರಿಂದ ವೈಯಕ್ತಿಕ ಟೀಕೆ ಮತ್ತು ದ್ವೇಷ ಭಾಷಣಗಳು ಕೇಳಿಬರುತ್ತಿವೆ.

ಇದೀಗ ಕೇಂದ್ರ ಮಾಜಿ ಸಚಿವ, ವಿಜಯಪುರ ಬಿಜೆಪಿ ಅಭ್ಯರ್ಥಿ ಮತ್ತು ಸ್ಟಾರ್ ಪ್ರಚಾರಕ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿ ದ್ವೇಷ ಭಾಷಣ, ವೈಯಕ್ತಿಕ ನಿಂದನೆ ಆರೋಪದ ಹಿನ್ನೆಲೆಯಲ್ಲಿ ಶೋಕಾಸ್ ನೋಟಿಸ್ ನೀಡಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ಯಲಬುರ್ಗಾದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಅವರ ಪರ ಪ್ರಚಾರದಲ್ಲಿ ಭಾಗವಹಿಸಿ, ಭಾಷಣ ಮಾಡುವಾಗ ಸೋನಿಯಾ ಗಾಂಧಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದರು.
"ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಷದ ಹಾವು ಎಂದೆಲ್ಲಾ ಹೇಳಿದ್ದಾರೆ. ಹಾಗಾದರೆ, ಸೋನಿಯಾ ಗಾಂಧಿ ಏನು ವಿಷ ಕನ್ಯೆನಾ?," ಎಂದು ಜರಿದಿದ್ದರು. ಇದು ದೇಶದೆಲ್ಲೆಡೆ ಸದ್ದು ಮಾಡಿತ್ತು ಮತ್ತು ಪರ-ವಿರೋಧದ ಟೀಕೆಗಳು ಬಂದಿದ್ದವು.

ನರೇಂದ್ರ ಮೋದಿ ಜಗಮೆಚ್ಚಿದ ನಾಯಕ. ಅಂಥ ನಾಯಕನನ್ನು ವಿಷದ ಹಾವಿಗೆ ಹೋಲಿಸುವುದು ಸರಿಯೇ? ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಮೆಚ್ಚಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ, ಸೋನಿಯಾ ಗಾಂಧಿ ವಿಷಕನ್ನೆಯೇ? ಎಂದಿದ್ದರು.
"ಭಾರತವನ್ನು ಹಾಳು ಮಾಡಿದ ಸೋನಿಯಾ ಗಾಂಧಿ ಚೀನಾ ಮತ್ತು ಪಾಕಿಸ್ತಾನದ ಎಜೆಂಟರಂತೆ ವರ್ತಿಸುತ್ತಿದ್ದಾರೆ. ಚಹಾ ಮಾರಾಟ ಮಾಡುವ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ಅದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರನ್ನು ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ," ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದರು.
ಈ ಬೆನ್ನಲ್ಲೇ ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿ ಸುಂದರೇಶ ಬಾಬು ಅವರು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ದ್ವೇಷ ಭಾಷಣ ಹಾಗೂ ವೈಯಕ್ತಿಕ ನಿಂದನೆ ಮಾಡುವುದು ಚುನಾವಣಾ ನಿಯಮದ ವಿರುದ್ಧವಾಗಿದೆ.
ಈ ಕೂಡಲೇ ನೀವು ಮೇ 4ರ ಒಳಗಾಗಿ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ವಿಜಯಪುರ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆಗೂ ನೋಟಿಸ್
ಇದೆ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಾಲಾಯಕ್ ಮಗ ಎಂದು ಟೀಕಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆಗೂ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲಾಯಕ್ ಎಂದು ಕರೆದಿರುವ ಪ್ರಿಯಾಂಕ್ ಖರ್ಗೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಪ್ರಚಾರದ ಗುಣಮಟ್ಟ ಕುಸಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ, ಎಲ್ಲ ಪಕ್ಷಗಳ ನಾಯಕರು ಮತ್ತು ಅಭ್ಯರ್ಥಿಗಳು ಪ್ರಚಾರದ ವೇಳೆ ಎಚ್ಚರಿಕೆ ಮತ್ತು ಸಂಯಮದಿಂದ ಮಾತನಾಡಬೇಕು ಎಂದು ಸಲಹೆ ನೀಡಿದ್ದು, ಇನ್ನು ಮುಂದಾದರೂ ರಾಜಕೀಯ ನಾಯಕರು ವೈಯಕ್ತಿಕ ಟೀಕೆ ಮಾಡುವುದನ್ನು ನಿಲ್ಲಿಸುತ್ತಾರಾ ನೋಡಬೇಕು.












Click it and Unblock the Notifications