ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಶಾಲೆಗಳ ಶುಲ್ಕದ ವಿಚಾರವಾಗಿ ಸುರೇಶ್ ಕುಮಾರ್ ಹೇಳಿಕೆ!

|
Google Oneindia Kannada News

ಬೆಂಗಳೂರು, ಡಿ. 21: ಶುಲ್ಕದ ವಿಚಾರವಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಸರ್ಕಾರದ ಮಧ್ಯೆ ಸಮರ ಶುರುವಾಗಿದೆ. ಶುಲ್ಕದ ವಿಚಾರವಾಗಿ ಸರ್ಕಾರ ಏನನ್ನೂ ಸೂಚಿಸದೆ ಇರುವುದು ಖಾಸಗಿ ಶಾಲೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ಖಾಸಗಿ ಶಾಲೆಗಳು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಇಂದಿನಿಂದ (ಡಿ.21) ಪ್ರತಿಭಟನೆಗೆ ಮುಂದಾಗಿದೆ. ಹೀಗಾಗಿ ಆನ್‌ಲೈನ್ ಕ್ಲಾಸ್ ಹಾಗೂ ಸರ್ಕಾರದ ಮಹತ್ವಾಕಾಂಕ್ಷಿ ವಿದ್ಯಾಗಮ ಕಾರ್ಯಕ್ರಮವನ್ನು ಸ್ಥಗಿತಗಿಳಿಸಿದೆ. ಕೋವಿಡ್ ಲಾಕ್‌ಡೌನ್ ಬಳಿಕ ಮತ್ತೊಂದು ಸಮಸ್ಯೆ ಸರ್ಕಾರಕ್ಕೆ ಎದುರಾಗಿದೆ. ಒಂದೆಡೆ ಸೂಕ್ತ ಆದಾಯ ಇಲ್ಲದ ಪೋಷಕರಿಗೆ ಶಾಲಾ ಶುಲ್ಕ ಭರಿಸಿ ಎಂದು ಹೇಳುವ ಪರಿಸ್ಥಿತಿಯಲ್ಲಿ ಸರ್ಕಾವಿಲ್ಲ. ಮತ್ತೊಂದೆಡೆ ಖಾಸಗಿ ಶಾಲೆಗಳು ಶಿಕ್ಷಕರಿಗೆ ಎಲ್ಲಿಂದ ಸಂಬಳ ಕೊಡೋಣ ಎಂಬ ಪ್ರಶ್ನೆಯನ್ನು ಸರ್ಕಾರದ ಎದುರು ಇಟ್ಟಿವೆ. ಹೀಗಾಗಿ ಈ ಸಮಸ್ಯೆ ಸರ್ಕಾರಕ್ಕೆ ಬಿಸಿ ತುಪ್ಪದಂತಾಗಿದೆ.

ಖಾಸಗಿ ಶಾಲೆಗಳ ಶುಲ್ಕದ ವಿಚಾರವಾಗಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಹತ್ವದ ಹೇಳಿಕೆ ನೀಡಿದ್ದಾರೆ. ಅವರ ಮಾತಿನಲ್ಲಿಯೇ ಸಮಸ್ಯೆಯ ಕುರಿತು ಮಾತನಾಡಿದ್ದಾರೆ. ಅವರ ಸಂಪೂರ್ಣ ಹೇಳಿಕೆ ಮುಂದಿದೆ.

ಕೋವಿಡ್ ಕಾಲದ ದೊಡ್ಡ ಸವಾಲು

ಕೋವಿಡ್ ಕಾಲದ ದೊಡ್ಡ ಸವಾಲು

ಶಿಕ್ಷಣ ಸಚಿವನಾಗಿ ನಾನು ಎದುರಿಸುತ್ತಿರುವ ಸಮಸ್ಯೆಗಳ ಪೈಕಿ ಒಂದು ದೊಡ್ಡ ಸಮಸ್ಯೆಯೆಂದರೆ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಶುಲ್ಕದ ವಿಚಾರ.

ಕೊರೋನಾ ಸಮಾಜದ ಎಲ್ಲಾ ಕ್ಷೇತ್ರಗಳ ಮೇಲೂ ತನ್ನ ಕರಾಳ ಛಾಯೆಯನ್ನು ಚಾಚಿದೆ. ಎಲ್ಲಾ ಕ್ಷೇತ್ರಗಳು ಆರ್ಥಿಕವಾಗಿ ಜರ್ಜರಿತವಾಗಿವೆ. ಆರ್ಥಿಕವಾಗಿ ಸಾಕಷ್ಟು ಶಕ್ತಿವಂತ ರಾಗಿದ್ದ ಕಾಲದಲ್ಲಿ ಕೆಲವು ಪೋಷಕರು ದುಬಾರಿ ಎಂದು ಹೇಳಬಹುದಾದ ಶುಲ್ಕ ತೆಗೆದುಕೊಳ್ಳುವ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ್ದರು.


ಅದೂ ಹೇಗೆ? ರಾತ್ರಿಯಿಡೀ ಶಾಲೆಯ ಮುಂದೆ ಸಾಲು ನಿಂತು ಶಾಲೆಯ ಅಡ್ಮಿಶನ್ ಅರ್ಜಿಯನ್ನು ಪಡೆದು ಕೆಲವು ಗಣ್ಯರಿಂದ ಶಿಫಾರಸು ಪತ್ರಗಳನ್ನು ಪಡೆದು ಕೊನೆಗೂ ತಮ್ಮ ಮಕ್ಕಳಿಗೆ ಆ ಶಾಲೆಯಲ್ಲಿ ಸೀಟು ದೊರಕಿದಾಗ ಪೋಷಕರಿಗೆ ಆಗಿರುವ ಆನಂದ ಊಹಾತೀತ. ಹೀಗೆ ಇದೇ ಶಾಲೆಯಲ್ಲಿ ನಮ್ಮ ಮಗು ಓದಬೇಕು ಎಂಬ ಹಂಬಲದಿಂದ ಕೆಲವು ಬಾರಿ ಹಠದಿಂದ ಮಕ್ಕಳನ್ನು ಸೇರಿಸಿರುವ ಪ್ರಕರಣಗಳು ಅನೇಕರಲ್ಲಿದೆ. ಅದೇ ಶಾಲೆಯ ವಿರುದ್ಧ ಅದೇ ಪೋಷಕರು ಎಂದು ಘೋಷಣೆ ಹಾಕುವ ಸ್ಥಿತಿ ಬಂದಿದೆ. ಏಕೆಂದರೆ ಆ ಪೋಷಕರು ಇಂದು ಆರ್ಥಿಕವಾಗಿ ತುಸು ದುರ್ಬಲರಾಗಿದ್ದಾರೆ.

ರಿಯಾಯತಿ ಬಯಸಿದರೆ ತಪ್ಪಿಲ್ಲ

ರಿಯಾಯತಿ ಬಯಸಿದರೆ ತಪ್ಪಿಲ್ಲ

ಆದರೆ ಶಾಲೆಗಳ ಮುಖ್ಯಸ್ಥರು ತಮ್ಮ ಶಿಕ್ಷಕರಿಗೆ ಸಂಬಳ ಕೊಡಲು ಈಗ ಪೋಷಕರು ಶುಲ್ಕ ಕಟ್ಟುತ್ತಿಲ್ಲ ಎಂದು ತಮ್ಮ ಕಷ್ಟವನ್ನು ಹೇಳುತ್ತಿದ್ದಾರೆ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಸಹ ಮಾಡುತ್ತಿದ್ದಾರೆ. ಶಿಕ್ಷಣ ಸಚಿವರು ಖಾಸಗಿ ಶಾಲೆಗಳಿಗೆ ಸಹಾಯ ಮಾಡುತ್ತಿಲ್ಲ ಎಂಬ ಕೂಗು ಕೇಳುತ್ತಿದೆ. ಇದರ ಜೊತೆ ಜೊತೆಗೆ ಶಿಕ್ಷಣ ಸಚಿವ ಖಾಸಗಿ ಶಾಲೆಗಳಿಗೆ ಅಂಕುಶ ಹಾಕುತ್ತಿಲ್ಲ ಎಂಬ ಕೂಗೂ ಸಹ ಕೇಳುತ್ತಿದೆ. ನನಗೆ ಪೋಷಕರ ಕಷ್ಟದ ಅರಿವು ಇದೆ. ಎಷ್ಟೋ ಜನ ಕಳೆದ ಎಂಟು ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಅಥವಾ ಅವರ ಸಂಬಳದ ಶೇಕಡ 25ರಷ್ಟು ಇಂದು ಅವರಿಗೆ ಬರುತ್ತಿಲ್ಲ. ಅಂತಹವರಿಗೆ ತಾವು ಬಯಸಿ ತಮ್ಮ ಮಕ್ಕಳನ್ನು ಸೇರಿಸಿದ್ದ ಶಾಲೆಗಳ ದುಬಾರಿ ಶುಲ್ಕ ಕಟ್ಟಲು ಇಂದು ಅಸಾಧ್ಯವಾಗಿದೆ. ಅಂತವರಿಗೆಲ್ಲ ಸಹಜವಾಗಿ ಈ ವರ್ಷ ಶುಲ್ಕದಲ್ಲಿ ರಿಯಾಯಿತಿ ಬೇಕು ಎಂದು ಅನಿಸಿದರೆ ತಪ್ಪಲ್ಲ.

ಖಾಸಗಿ ಶಾಲಾ ಶಿಕ್ಷಕರಿಗೆ ವೇತನವಿಲ್ಲ

ಖಾಸಗಿ ಶಾಲಾ ಶಿಕ್ಷಕರಿಗೆ ವೇತನವಿಲ್ಲ

ಆದರೆ ಇದರ ಜೊತೆಜೊತೆಗೆ ಖಾಸಗಿ ಶಾಲೆಗಳ ಶಿಕ್ಷಕರು ಕಳೆದ ಎಂಟು ತಿಂಗಳಿಂದ ವೇತನವಿಲ್ಲದೆ ಪರದಾಡುತ್ತಿರುವ ಪರಿಸ್ಥಿತಿಯು ನಮ್ಮ ಮುಂದೆ ಇದೆ. ಅನೇಕ ಶಿಕ್ಷಕರು ಜೀವನ ನಿರ್ವಹಣೆಗಾಗಿ ತರಕಾರಿ ಮಾರುವುದು, ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ಮಾಡುವುದು. ಈ ಪ್ರಸಂಗಗಳು ಸಹ ವರದಿಯಾಗಿವೆ.

ಖಾಸಗಿ ಶಾಲೆಗಳ ವ್ಯವಸ್ಥಾಪಕರು ಹೇಳುವುದೆಂದರೆ ಪೋಷಕರು ಶುಲ್ಕ ಕಟ್ಟದಿದ್ದರೆ ನಾವು ಶಿಕ್ಷಕರಿಗೆ ಸಂಬಳ ಕೊಡುವುದು ಹೇಗೆ? ಎಂದು. ಈ ಎಲ್ಲಾ ಖಾಸಗಿ ಶಾಲೆಗಳ ಶಿಕ್ಷಕರಿಗೆ ಯಾವುದಾದರೂ ಹಣಕಾಸಿನ ಸಹಾಯದ ನೀಡಬೇಕೆಂಬುದು ಒಂದು ಆಗ್ರಹ. ಅದಕ್ಕಾಗಿ ನಾವು ಸರ್ಕಾರದಲ್ಲಿ ಬೇರೆಬೇರೆ ಕ್ರಮಗಳ ಬಗ್ಗೆ ಯೋಚಿಸಿದರೂ ಅದು ಕಾರ್ಯಗತವಾಗಲಿಲ್ಲ. ಏಕೆಂದರೆ ಸರಕಾರದ ಹಣಕಾಸಿನ ಪರಿಸ್ಥಿತಿ ಬಹಳ ಆಶಾದಾಯಕವಾಗಿಲ್ಲ.

ನಿಮ್ಮ ಸಮಸ್ಯೆ ನೀವೆ ಪರಿಹರಿಸಿಕೊಳ್ಳಿ?

ನಿಮ್ಮ ಸಮಸ್ಯೆ ನೀವೆ ಪರಿಹರಿಸಿಕೊಳ್ಳಿ?

ಕಳೆದವಾರ ಖಾಸಗಿ ಶಾಲೆಗಳ ಮುಖ್ಯಸ್ಥರ ಸಂಘಟನೆಯ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಿದ್ದರು. ತಮ್ಮ ಕಷ್ಟಗಳನ್ನೆಲ್ಲ ವಿವರಿಸಿದರು. ಆಗ ನಾನು ಹೇಳಿದ ಮಾತು ಹೀಗಿತ್ತು. 'ನಿಮ್ಮ ಶಾಲೆಯ ಪೋಷಕರು ಮತ್ತು ನಿಮ್ಮ ನಡುವೆ ಬಹಳ ಆರೋಗ್ಯಕರ ಸಂಬಂಧ ಇರಬೇಕು. ಏಕೆಂದರೆ ಆ ಪೋಷಕರು ನಿಮ್ಮ ಶಾಲೆಯನ್ನು ಪ್ರೀತಿಸಿ ಇದೇ ಶಾಲೆ ಬೇಕೆಂದು, ತಮ್ಮ ಮಕ್ಕಳನ್ನು ನಿಮ್ಮ ಶಾಲೆಗಳಿಗೆ ಸೇರಿಸಿದ್ದಾರೆ. ಹೀಗಿರುವಾಗ ನೀವು ಶಾಲಾ ವ್ಯವಸ್ಥಾಪಕ ಮಂಡಳಿ ರಚಿಸಿ ಆ ವೇದಿಕೆಯಡಿ ಪೋಷಕರ ಜೊತೆ ಏಕೆ ಮಾತನಾಡಬಾರದು? ಪೋಷಕರ ಸಮಸ್ಯೆಯನ್ನು ಏಕೆ ಆಲಿಸಬಾರದು? ನಂತರ ನಿಮ್ಮ ಪರಿಸ್ಥಿತಿಯನ್ನು ಪೋಷಕರಿಗೆ ಏಕೆ ವಿವರಿಸ ಬಾರದು? ಇಬ್ಬರ ನಡುವೆ ಸಂವಾದದ ನಂತರ ಇಬ್ಬರಿಗೂ ಹಿತಕರವೆನಿಸುವ ಸೂತ್ರ ಏಕೆ ತೀರ್ಮಾನಿಸ ಬಾರದು? ಎಂದು ಹೇಳಿದ್ದೆ. ಅದಕ್ಕೆ ಆ ಮುಖ್ಯಸ್ಥರು ನಾವು ಚರ್ಚೆ ಮಾಡಿ ಬರುತ್ತೇವೆಂದು ಹೋಗಿದ್ದಾರೆ.

ಮಕ್ಕಳ ಕುರಿತು ಯೋಚಿಸಬೇಕಿದೆ

ಮಕ್ಕಳ ಕುರಿತು ಯೋಚಿಸಬೇಕಿದೆ

ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ವರ್ಷ ನಮ್ಮ ಶಾಲೆಯಲ್ಲಿ ಆಡಳಿತಾತ್ಮಕ ವೆಚ್ಚಕ್ಕೆ ಮಾತ್ರ ಮಾತ್ರ ಶುಲ್ಕ ತೆಗೆದುಕೊಂಡು ಪೋಷಕರ ಜೊತೆಗೆ ನಾವು ನಿಲ್ಲುತ್ತೇವೆ ಎಂಬ ಮಾತು ಶಾಲೆಗಳಿಂದ ಬಂದರೆ ಹಾಗೂ ನಮ್ಮ ಶಾಲೆಯ ಅಸ್ತಿತ್ವಕ್ಕಾಗಿ ನಾವು ಇಷ್ಟು ಶುಲ್ಕವನ್ನು ಕೊಡಲು ಸಿದ್ದ ಎಂದು ಪೋಷಕರು ಘೋಷಿಸಿದರೆ ಆಗ ಸಮಸ್ಯೆಗೆ ಪರಿಹಾರ ಸರಳವಾಗುವುದು. ಅನೇಕ ಶಾಲೆಗಳಲ್ಲಿ ಪೋಷಕರಿಗೆ ಗೇಟಿನ ಒಳಗೆ ಪ್ರವೇಶ ಅವಕಾಶವಿಲ್ಲ ಎಂದು ಕೇಳಿ ಬಂದಿದೆ. ಆಗ ಸಹಜವಾಗಿ ಪೋಷಕರು ಗೇಟಿನ ಆಚೆ ನಿಂತು ಘೋಷಣೆ ಕೂಗುವ ಪರಿಸ್ಥಿತಿ ಬಂದೊದಗುತ್ತದೆ. ಈ ವಾರ ಬೆಂಗಳೂರಿನಲ್ಲಿ ಖಾಸಗಿ ಶಾಲೆಗಳ ಸಂಘಟನೆಗಳು ಪ್ರತಿಭಟನೆ ಮಾಡಿವೆ. ತಾವೂ ಒಂದು ಸಂಘಟನೆ ರಚಿಸಿಕೊಂಡು ಪೋಷಕರು ಸಹ ಪ್ರತಿಭಟನೆ ಮಾಡಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವಿನ ಈ ಸಂಘರ್ಷದಲ್ಲಿ ಮಕ್ಕಳ ಪರಿಸ್ಥಿತಿ ಬಗ್ಗೆ ನಾವು ಯೋಚಿಸಬೇಕು.

Recommended Video

Team India ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ತಿಳಿಸಿಕೊಟ್ಟ Mike Hussey | Oneindia Kannada
ಪರಿಹಾರ ಹುಡುಕುವ ಜವಾಬ್ದಾರಿ

ಪರಿಹಾರ ಹುಡುಕುವ ಜವಾಬ್ದಾರಿ

ಈ ಪರಿಸ್ಥಿತಿಯಲ್ಲಿ ಇಬ್ಬರಿಗೂ ಹಿತಕರವಾದ ಪರಿಹಾರ ಹುಡುಕುವ ಜವಾಬ್ದಾರಿ ನನ್ನ ಪಾಲಿಗೆ ಬಂದಿದೆ. ಇದು ಬಹಳ ಕಷ್ಟ ಸಹ. ಪೋಷಕರು ಮತ್ತು ಖಾಸಗಿ ಶಾಲಾ ಶಿಕ್ಷಕರು ಇಬ್ಬರ ಪರಿಸ್ಥಿತಿಯು ನನಗೆ ಸಂಪೂರ್ಣ ಅರ್ಥವಾಗಿದೆ. ಇದರೊಂದಿಗೆ ಆರ್ಥಿಕವಾಗಿ ಶಕ್ತಿವಂತರಾಗಿ ರವರು ಸಹ ತಮ್ಮ ಮಕ್ಕಳ ಶುಲ್ಕವನ್ನು ಪಾವತಿ ಮಾಡಲು ಹಿಂದೇಟು ಹಾಕುತ್ತಿರುವುದು ಮತ್ತು ಕೋವಿಡ್-19 ರ ನೆಪ ಮುಂದಿಡುತ್ತಿರುವ ಪ್ರಸಂಗಗಳು ನಡೆದಿವೆ.


ಶ್ರೀಮಂತ ಶಾಲೆಗಳನ್ನು ಹೊರತು ಪಡಿಸಿ, ಬಜೆಟ್ ಶಾಲೆಗಳೆಂದು ಕರೆಯಲ್ಪಡುವ ಮಧ್ಯಮ ದರ್ಜೆ ಶಾಲೆಗಳು ಎದುರಿಸುತ್ತಿರುವ ಕಷ್ಟವೂ ಅಪಾರ. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕೋವಿಡ್ ಮಹಾಮಾರಿಯ ಪರಿಣಾಮ ಪ್ರಾರಂಭವಾದಾಗಿನಿಂದ ನಾನು ಪೋಷಕರ ಪರವಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದೇನೆ. ಪೋಷಕರ ಪರಿಸ್ಥಿತಿಯನ್ನು ಶಾಲೆಗಳು ಅರ್ಥಮಾಡಿಕೊಳ್ಳಬೇಕು. ಇದೇ ಸಮಯಕ್ಕೆ ತಮ್ಮ ಶಾಲೆಗಳ ಶಿಕ್ಷಕರ ಜೀವನ ನಿರ್ವಹಣೆಯ ಕುರಿತು ಪೋಷಕರು ಯೋಚಿಸಬೇಕು. ಇಂದು ಈ ಮಹಾಮಾರಿಯ ಕಾರಣ ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವೆ ಉಂಟಾಗಿರುವ ಅಪನಂಬಿಕೆಯನ್ನು ದೂರ ಮಾಡುವುದು ಒಂದು ದೊಡ್ಡ ಸವಾಲು. ಈ ಸವಾಲನ್ನು ಎದುರಿಸುವಲ್ಲಿ ನನಗೆ ಪೋಷಕರು ಮತ್ತು ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿ ಇಬ್ಬರೂ ಸಹ ಆರೋಗ್ಯಕರ ಸಹಕಾರ ನೀಡಬೇಕೆಂದು ನನ್ನ ಮನವಿ ಎಂದು ಸುರೇಶ್ ಕುಮಾರ್ ಅವರು ಮಾತು ಮುಗಿಸಿದ್ದಾರೆ.

English summary
Protest has begun between the private schools governing body and the government over school fees. The failure of the government to charge anything on fees has led to the outrage of private schools. Education Minister S Suresh Kumar has made an important statement on school fees. Know more here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X