SSLC-PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್; ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವ ಬದಲಾವಣೆ! ಇಲ್ಲಿದೆ ನೋಡಿ
ಬೆಂಗಳೂರು, ಸೆಪ್ಟೆಂಬರ್ 05: ಕರ್ನಾಟಕದ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್ನ್ಯೂಸ್ ನೀಡಿದ್ದು, 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಇನ್ಮುಂದೆ ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲು ಶಿಕ್ಷಣ ಇಲಾಖೆ ತಿರ್ಮಾನಿಸಿದೆ.
ಹೌದು, 2023-24ನೇ ಶೈಕ್ಷಣಿಕ ಸಾಲಿನಿಂದ SSLC, 2nd PUC ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದುವರೆಗೆ ವರ್ಷಕ್ಕೆ 2 ಪರೀಕ್ಷೆ ಮಾತ್ರ ನಡೆಸುತ್ತಿದ್ದ ಶಿಕ್ಷಣ ಇಲಾಖೆ ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ. ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ ಉದ್ದೇಶದಿಂದ ಈ ವ್ಯವಸ್ಥೆಯನ್ನ ಜಾರಿಗೆ ತರಲಾಗಿದ್ದು, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಮೊದಲನೆಯದಾಗಿ, ಪ್ರಸ್ತುತ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯು ಗಳಿಸಿದ ಅಂಕಗಳಿಂದ ತೃಪ್ತರಾಗದಿದ್ದರೆ, ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶವಿದೆ. ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೇ ಪೂರಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ವಿದ್ಯಾರ್ಥಿಯ ಅಂತಿಮ ಅಂಕಗಳೆಂದು ಪರಿಗಣಿಸಲಾಗುತ್ತಿದೆ. ವ್ಯವಸ್ಥೆಯು ವಿದ್ಯಾರ್ಥಿ ಸ್ನೇಹಿಯಾಗಿರುವುದಿಲ್ಲ.
ಏಕೆಂದರೆ ಎರಡು ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗೆ ಯಾವುದೇ ಆಯ್ಕೆಯಿರುವುದಿಲ್ಲ, ನಾವು ಸುಧಾರಣಾ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ, 1, 2, ಮತ್ತು 3 ಪರೀಕ್ಷೆಗಳಲ್ಲಿ ಗಳಿಸಿದ ವಿಷಯವಾರು ಅಂಕವನ್ನು ಉಳಿಸಿಕೊಳ್ಳಲು ಅವಕಾಶವನ್ನು ಒದಗಿಸಿದಂತಾಗುತ್ತದೆ ಮತ್ತು ಮುಂದಿನ ವ್ಯಾಸಂಗಕ್ಕೆ, ಅಥವಾ ಉದ್ಯೋಗಕ್ಕೆ, ಆಯ್ಕೆ ಪ್ರಕ್ರಿಯೆಗಳಲ್ಲಿ ಉತ್ತಮ ಅವಕಾಶಗಳನ್ನು ಒದಗಿಸಿದಂತಾಗುತ್ತದೆ.
ಎರಡನೆಯದಾಗಿ, ವಿದ್ಯಾರ್ಥಿಗಳ ಕಲಿಕೆಯ ವೇಗ ಮತ್ತು ಶೈಲಿಯು ವಿಭಿನ್ನವಾಗಿದ್ದು, 1, 2, ಮತ್ತು 3 ಪರೀಕ್ಷೆಗಳನ್ನು ನಡೆಸುವುದರಿಂದ ಅವರ ಕಲಿಕೆಯ ವೇಗಕ್ಕೆ ಹೊಂದಿಕೊಳ್ಳಲು ಮತ್ತು ಸಮಯದ ನಿರ್ಬಂಧಗಳಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಮೂರನೆಯದಾಗಿ, "ಪೂರಕಪರೀಕ್ಷೆ" ಎಂಬ ಹೆಸರಿನ ಬದಲಿಗೆ "ವಾರ್ಷಿಕ ಪರೀಕ್ಷೆ 1, 2 ಮತ್ತು 3" ಎಂದು ಹೆಸರಿಸುವುದರೊಂದಿಗೆ ಮೂರು ಅವಕಾಶಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಯ ಒಟ್ಟಾರೆ ಕಾರ್ಯಕ್ರಮತೆಯನ್ನು ಮತ್ತು ಸಕಾರಾತ್ಮಕ ಮನೋಭಾವವನ್ನು ಉತ್ತೇಜಿಸಿದಂತಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿ
ಪರೀಕ್ಷೆ-1 ಮಾರ್ಚ್ 1ರಿಂದ ಮಾರ್ಚ್ 25ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-2 ಮೇ 15ರಿಂದ ಜೂನ್ 5ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-3 ಜುಲೈ 12ರಿಂದ ಜುಲೈ 30ರವರೆಗೆ ನಡೆಸಲು ನಿರ್ಧಾರ
10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿ
ಪರೀಕ್ಷೆ-1 ಮಾರ್ಚ್ 30ರಿಂದ ಏಪ್ರಿಲ್ 15ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-2 ಜೂನ್ 12ರಿಂದ ಜೂನ್ 19ರವರೆಗೆ ನಡೆಸಲು ನಿರ್ಧಾರ
ಪರೀಕ್ಷೆ-3 ಜುಲೈ 29ರಿಂದ ಆಗಸ್ಟ್ 5ರವರೆಗೆ ನಡೆಸಲು ತೀರ್ಮಾನ
ಇನ್ನೂ ಮಂಗಳವಾರ ವಿಧಾನಸಸೌಧದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಮಾತನಾಡಿ, SSLC, PU ವಿದ್ಯಾರ್ಥಿಗಳು ವರ್ಷಕ್ಕೆ 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಫೇಲ್ ಅಥವಾ ಕಡಿಮೆ ಅಂಕ ಬಂದವರು 3 ಬಾರಿ ಪರೀಕ್ಷೆ ಬರೆಯಬಹುದು. 32.44 ಲಕ್ಷ ಮಕ್ಕಳಿಗೆ ಕಲಿಕಾ ಬಲವರ್ಧನೆ ಕಾರ್ಯಕ್ರಮ ನಡೆಸುತ್ತೇವೆ. ಕಲಿಕಾ ಗುಣಮಟ್ಟ ಹಾಗೂ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಲು ಸರ್ಕಾರ ಈ ಹೊಸ ನಿಯಮವನ್ನು ಘೋಷಣೆ ಮಾಡಿದೆ ಎಂದರು.












Click it and Unblock the Notifications