ನಾನು ಮನುಷ್ಯ ಕಣಯ್ಯಾ, ಓಡಿ ಬರೋಕಾಗುತ್ತಾ? ಡಿ ಕೆ ಶಿವಕುಮಾರ್
ನವದೆಹಲಿ, ಆಗಸ್ಟ್ 30: " ಇಡಿ ಸಮನ್ಸ್ ನನಗೆ ಬೆಳಗ್ಗೆ 9.40ಕ್ಕೆ ಬಂದಿದೆ, ಈಗ ದೆಹಲಿಗೆ ಬಂದಿದ್ದೇನೆ, ಕರ್ನಾಟಕ ಭವನದಲ್ಲಿ ಒಂದು ರೂಮ್ ತೆಗೆದುಕೊಳ್ಳುತ್ತೇನೆ. ವಕೀಲರ ಬಳಿ ಮಾತನಾಡುತ್ತೇನೆ.." ಇದು ಡಿ ಕೆ ಶಿವಕುಮಾರ್ ದೆಹಲಿಯಲ್ಲಿ ಮಾಧ್ಯಮದವರ ಮುಂದೆ ನೀಡಿರುವ ಹೇಳಿಕೆ.
" ನಾವು ಮನುಷ್ಯರು ಕಣಯ್ಯಾ, ಓಡಿ ಬರೋಕಾಗುತ್ತಾ.. ಅವರೇನು ಇಡಿ ಅಧಿಕಾರಿಗಳು ಬುದ್ದಿವಂತರು, ಅವರಿಗೆ ಕಾನೂನು ಗೊತ್ತಿದೆ. ಮೊದಲು ನಾವು ಕೋರ್ಟಿಗೆ ಹೋಗಿದ್ದೆ. ಕೋರ್ಟಿನಲ್ಲಿ ಇಲ್ಲ ಎಂದ ಮೇಲೆ, ಈಗ ನೊಟೀಸ್ ಕೊಟ್ಟಿದ್ದಾರೆ" ಎಂದು ಡಿ ಕೆ ಶಿವಕುಮಾರ್ ಹೇಳಿದರು.
" ಅರ್ಜೆಂಟಾಗಿ ಬರಬೇಕೆಂದು ನೊಟೀಸ್ ಕೊಟ್ಟಿದ್ದಾರೆ. ಅದಕ್ಕೆ ಬೆಲೆಕೊಟ್ಟು ಬಂದಿದ್ದೇನೆ. ಇಡಿ ಅಧಿಕಾರಿಗಳಿಗೂ ಗೊತ್ತು, ನಾವು ಓಡಿ ಹೋಗುವವರಲ್ಲ ಎಂದು" ಇದು ಡಿಕೆಶಿ ಹೇಳಿರುವ ಮಾತು.

" ವಿಚಾರಣೆಯ ವೇಳೆ ಇಡಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರವನ್ನು ಕೊಡುತ್ತೇನೆ. ಹಿಂದೆನೂ ಕೊಟ್ಟಿದ್ದೆ, ಈಗಲೂ ಕೊಡುತ್ತೇನೆ" ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಡಿಕೆ ಶಿವಕುಮಾರ್ ಅವರು ಇಡಿ ಮುಂದೆ ವಿಚಾರಣೆಗೆ ಹಾಜರಾಗಲು ತೆರಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಉತ್ತರಗಳು ಇಡಿ ಅಧಿಕಾರಿಗಳಿಗೆ ತೃಪ್ತಿ ಆಗದೇ ಇದ್ದಲ್ಲಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
"ಕೇಂದ್ರ ಸರ್ಕಾರ ಸಿಬಿಐ,ಇಡಿ ಮೊದಲಾದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ದುರುಪಯೋಗ ಮಾಡುತ್ತಿರುವುದು ಖಂಡನೀಯ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿಯೇ ಎದುರಿಸಬೇಕೇ ಹೊರತು ಹೀಗೆ ಅಧಿಕಾರ ದುರ್ಬಳಕೆ ಮೂಲಕ ಅಲ್ಲ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದರು.












Click it and Unblock the Notifications