Hamsalekha: ಎಸ್.ಜಾನಕಿ ಅವರಿಗೆ ಸ್ಮಾರಕ ನಿರ್ಮಿಸಿ: ಸಂಗೀತ ನಿರ್ದೇಶಕ ಹಂಸಲೇಖ ಮನವಿ
Hamsalekha: ಖ್ಯಾತ ಗಾಯಕಿ, ಗಾನಕೋಗಿಲೆ ಎಸ್.ಜಾನಕಿ (88) ಅವರು ಶನಿವಾರ ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಭಾನುವಾರ (ಜುಲೈ 12) ಸಂಜೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಸಂಗೀತ ನಿರ್ದೇಶಕ ಹಂಸಲೇಖ ಅವರು ಎಸ್.ಜಾನಕಿ ಅವರ ಸ್ಮಾರಕ ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ ಹಂಸಲೇಖ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಸ್.ಜಾನಕಿ ಅವರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಗಾನಕೋಗಿಲೆ ಎಸ್.ಜಾನಕಿ ಅವರ ಸ್ಮಾರಕ ನಿರ್ಮಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಕರುನಾಡಿನ ಜನರಲ್ಲಿಯೂ ಸಹ ಸರ್ಕಾರಕ್ಕೆ ಈ ಬಗ್ಗೆ ಮನವಿ ಮಾಡಿಕೊಳ್ಳುವಂತೆ ವಿಡಿಯೋ ಮಾಡುವ ಮೂಲಕ ಕೇಳಿಕೊಂಡಿದ್ದಾರೆ.

ಹಂಸಲೇಖ ಅವರಿಂದ ಮಹತ್ವದ ಮನವಿ
'ಗಾನಕೋಗಿಲೆ ಎಸ್.ಜಾನಕಿ ಅವರು ಕರುನಾಡು, ಮೈಸೂರು ಮಣ್ಣಿನಲ್ಲಿ ಅವರು ವಿಧಿವಶರಾಗಿದ್ದಾರೆ. ಅವರ ಆಸೆ ಕರುನಾಡಲ್ಲಿ ಇರುವುದಾಗಿತ್ತು. ಅದಕ್ಕೆ ಇಂಬು ಕೊಡುವ ಕೆಲಸ ನಾವು ಮಾಡಬೇಕು. ಸರ್ಕಾರಕ್ಕೆ ಇದನ್ನು ತಿಳಿಸಿ ಈಗಲೇ ಸ್ಮಾರಕಕ್ಕೆ ಜಾಗ ನಿಗದಿ ಮಾಡಿ,' ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾಗೆ ವಿಡಿಯೋ ಮೂಲಕ ಹಂಸಲೇಖ ಅವರು ಮನವಿ ಮಾಡಿದ್ದಾರೆ. ಅಲ್ಲದೆ ಕರ್ನಾಟಕದ ಅಭಿಮಾನಿಗಳಿಗೂ ಸಹ ಸರ್ಕಾರಕ್ಕೆ ಮನವಿ ಮಾಡುವಂತೆ ಕೇಳಿಕೊಂಡಿದ್ದಾರೆ.
ಭಾವುಕರಾದ ಸಂಗೀತ ನಿರ್ದೇಶಕ ಹಂಸಲೇಖ
ಅಂತಿಮ ದರ್ಶನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹಂಸಲೇಖ ಅವರು ಭಾವುಕರಾದರು. 'ನಮ್ಮ ಹೆಮ್ಮೆಯ ಜಾನಕಮ್ಮ ಕರುನಾಡಿನ ಸಾಂಸ್ಕೃತಿಕ ನಗರಿ ಮೈಸೂರಿನ ಮಣ್ಣಿನಲ್ಲಿ ವಿಧಿವಶರಾಗಿದ್ದಾರೆ. ಕನ್ನಡ ನೆಲ, ಜಲ ಮತ್ತು ಇಲ್ಲಿನ ಜನರ ಮೇಲೆ ಅವರಿಗೆ ಅಪಾರ ಪ್ರೀತಿಯಿತ್ತು. ತಮ್ಮ ಕೊನೆಯ ದಿನಗಳನ್ನು ಕರುನಾಡಿನಲ್ಲೇ ಕಳೆಯಬೇಕು ಮತ್ತು ಇದೇ ಮಣ್ಣಿನಲ್ಲಿ ಲೀನವಾಗಬೇಕು ಎಂಬುದು ಅವರ ದೊಡ್ಡ ಆಸೆಯಾಗಿತ್ತು. ಅವರ ಆಸೆಯಂತೆಯೇ ಈಗ ನಡೆದಿದೆ,' ಎಂದು ನೆನೆದರು.
48,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಜಾನಕಮ್ಮ
80ರ ದಶಕದಲ್ಲಿ ತಮ್ಮ ಅದ್ಭುತ ಹಾಗೂ ಸುಮಧುರ ಕಂಠದ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ಮಂತ್ರಮುಗ್ಧಗೊಳಿಸಿದ್ದ ಗಾನಕೋಗಿಲೆ ಎಸ್. ಜಾನಕಿ ಅವರು ಸದ್ಯ ಗಾಯನಕ್ಕೆ ವಿರಾಮ ನೀಡಿದ್ದಾರೆ. ಆದರೆ ಅವರು ಹಾಡಿರುವ ಅಮರ ಗೀತೆಗಳು ಇಂದಿಗೂ ಅಚ್ಚಹಸಿರಾಗಿವೆ. ತಮ್ಮ ಸುದೀರ್ಘ ಸಂಗೀತ ಪಯಣದಲ್ಲಿ ಅವರು ಭಾರತದ ವಿವಿಧ ಭಾಷೆಗಳಲ್ಲಿ ಬರೋಬ್ಬರಿ 48,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಜಾನಕಮ್ಮಗೆ ಕನ್ನಡದ ಮೇಲೆ ಎಲ್ಲಿಲ್ಲದ ಪ್ರೀತಿ
ಆಂಧ್ರಪ್ರದೇಶದಲ್ಲಿ ಜನಿಸಿದರೂ ಸಹ ಎಸ್.ಜಾನಕಿ ಅವರಿಗೆ ಕರ್ನಾಟಕ ಮತ್ತು ಕನ್ನಡ ಭಾಷೆಯ ಮೇಲೆ ಎಲ್ಲಿಲ್ಲದ ಪ್ರೀತಿ ಹಾಗೂ ಗೌರವವಿತ್ತು. ಆದ್ದರಿಂದಲೇ ಅವರು ಕನ್ನಡದಲ್ಲೇ 8,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಕನ್ನಡಿಗರ ಮನೆ ಮಾತಾಗಿದ್ದರು. ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಡಾ. ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಹಲವು ಮಹಾನ್ ನಟರ ಚಿತ್ರಗಳ ಹಾಡುಗಳಿಗೆ ತಮ್ಮ ಕಂಠದ ಮೂಲಕ ಭಾವನೆಗಳ ಜೀವ ತುಂಬಿದ ಕೀರ್ತಿ ಇವರದ್ದಾಗಿದೆ.
ಎಸ್. ಜಾನಕಿ ಅವರು ಹಾಡಿರುವ ಸಾವಿರಾರು ಹಾಡುಗಳಲ್ಲಿ ಇಂದಿಗೂ ಎವರ್‌ಗ್ರೀನ್ ಆಗಿ ಉಳಿದಿರುವ ಕೆಲವು ಪ್ರಮುಖ ಜನಪ್ರಿಯ ಗೀತೆಗಳ ಪಟ್ಟಿ ಇಲ್ಲಿದೆ. ಪಲ್ಲವಿ ಅನುಪಲ್ಲವಿ ಚಿತ್ರದ 'ನಗುವ ನಯನ', ಗೀತಾ ಸಿನಿಮಾದ 'ಜೊತೆಯಲಿ ಜೊತೆ ಜೊತೆಯಲಿ', ಬಯಲುದಾರಿ ಸಿನಿಮಾದ 'ಬಾನಲ್ಲೂ ನೀನೆ, ಭುವಿಯಲ್ಲು ನೀನೆ', ಯುದ್ಧಕಾಂಡ ಸಿನಿಮಾದ 'ಸೋಲೇ ಇಲ್ಲ ನಿನ್ನ ಹಾಡಸು ಹಾಡುವಾಗ' ಹೀಗೆ ಹಲವಾರು ಜನಪ್ರಿಯ ಹಾಡುಗಳಿಗೆ ಧ್ವನಿಯಾಗಿದ್ದಾರೆ.
ಪಿ.ಬಿ. ಶ್ರೀನಿವಾಸ್, ಡಾ. ರಾಜ್‌ಕುಮಾರ್ ಹಾಗೂ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಜಾನಕಮ್ಮ ಹಾಡಿರುವ ನೂರಾರು ಗೀತೆಗಳು ಕನ್ನಡ ಚಲನಚಿತ್ರ ಇತಿಹಾಸದ ಸುವರ್ಣ ಪುಟಗಳಲ್ಲಿ ದಾಖಲಾಗಿವೆ. ಗಾಯನದಿಂದ ಅವರು ದೂರ ಸರಿದಿದ್ದರೂ, ಅವರ ಕಂಠದ ಮಾಧುರ್ಯಕ್ಕೆ ಎಂದಿಗೂ ಮುಪ್ಪಿಲ್ಲ.


Click it and Unblock the Notifications
