ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹೊರಗಿಟ್ಟು ಸಭೆ ಮಾಡಿದ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ?

|
Google Oneindia Kannada News

ಬೆಂಗಳೂರು, ಆ. 07: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯದ ಕಂದಕ ಮತ್ತಷ್ಟು ಹೆಚ್ಚಾಗಿದೆಯಾ? ಅಂಥದ್ದೊಂದು ಮಾಹಿತಿ ಇದೀಗ ಬಹಿರಂಗವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಸಂಗತಿಗಳನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಎಳೆ ಎಳೆಯಾಗಿ ವಿವರಿಸಿದ್ದಾರೆ.

"ಕಾಂಗ್ರೆಸ್ ಪಕ್ಷದ ನಾಯಕರದ್ದು ಹಿಟ್ ಆ್ಯಂಡ್ ರನ್ ಪಾಲಿಸಿಯಾಗಿದ್ದು, ಕೋವಿಡ್ ಸಂಕಷ್ಟದ ಕಾಲದಲ್ಲಿ ಸಂಸತ್ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದ ಕಾಂಗ್ರೆಸ್ ನಾಯಕರು ಈಗ ಕಲಾಪ ನಡೆಯದಂತೆ ಮಾಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

"ದೇಶದ ಅಖಂಡತೆ, ಸಮಗ್ರತೆ, ಜಾಗತಿಕ ವ್ಯವಸ್ಥೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ದಿನಗಳು ಇವು. ನೆರೆಯ ಅಘಘಾನಿಸ್ಥಾನದ ಭಯೋತ್ಪಾದಕ ಸಂಘಟನೆಯ ಆತಂಕಕಾರಿ ಕ್ರಮಗಳು, ಪಾಕಿಸ್ತಾನ ಮತ್ತು ಚೀನಾದ ಸವಾಲುಗಳ ಕುರಿತು ಚರ್ಚಿಸಿ ತೀರ್ಮಾನ ಮಾಡಬೇಕಿತ್ತು. ಆದರೆ, ಕಳೆದ ಜುಲೈ 19 ರಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯ ದೇಗುಲವನ್ನು ಅಪವಿತ್ರಗೊಳಿಸಲು ಕಾಂಗ್ರೆಸ್ ಸಂಸದರು, ನಾಯಕರು ಪ್ರಯತ್ನಿಸಿದ್ದಾರೆ" ಎಂದು ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಚರ್ಚಿಸಲು ವಿಷಯಗಳಿಲ್ಲದೆ ಕಾಂಗ್ರೆಸ್ ಪಕ್ಷ ಪಲಾಯನವಾದಕ್ಕೆ ಮಾಡುತ್ತಿದೆ. ಹೀಗಾಗಿ ಸಂಸತ್ತಿನ ಅಧಿವೇಶನ ಸ್ಥಗಿತಗೊಳಿಸಲು ಕಾಂಗ್ರೆಸ್ ಮುಂದಾಯಿತು. ಅದರಿಂದ, ಕೇವಲ 18 ಗಂಟೆಗಳ ಕಾಲ ಸಂಸತ್ತಿನ ಅಧಿವೇಶನ ನಡೆಯುವಂತಾಯಿತು. ಒಂದು ಗಂಟೆಯ ಪ್ರಶ್ನೋತ್ತರ ಕಾಲ ಅತ್ಯಂತ ಮಹತ್ವದ್ದು. ಅದನ್ನೂ ನಡೆಯಲು ಬಿಡಲಿಲ್ಲ" ಎಂದು ಡಿವಿಎಸ್ ಆರೋಪಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಹೊರಗಿಟ್ಟು ಸಭೆಗಳನ್ನು ಮಾಡುತ್ತಿದ್ದಾರೆ ಎಂಬ ಆಶ್ಚರ್ಯಕರ ವಿಚಾರವನ್ನು ಸದಾನಂದಗೌಡರು ಹೇಳಿದ್ದಾರೆ. ಅಷ್ಟಕ್ಕೂ ಆ ಸಭೆ ನಡೆದಿದ್ದು ಎಲ್ಲಿ? ಮುಂದಿದೆ ಮಾಹಿತಿ!

ಸರ್ವಪಕ್ಷ ಸಭೆ ನಡೆಸಿದ್ದ ಪ್ರಧಾನಿ ಮೋದಿ

ಸರ್ವಪಕ್ಷ ಸಭೆ ನಡೆಸಿದ್ದ ಪ್ರಧಾನಿ ಮೋದಿ

"ಲೋಕಸಭೆ ಮಳೆಗಾಲದ ಅಧಿವೇಶನಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ನಡೆಸಿದ್ದರು. ಎಲ್ಲ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲು ಮನವಿ ಮಾಡಿಕೊಂಡಿದ್ದರು. ಈ ಅಧಿವೇಶನದಲ್ಲಿ ಅತ್ಯಂತ ಅತ್ಯಂತ ಗಂಭೀರ ವಿಚಾರಗಳು ಚರ್ಚೆ ಬರಲಿದ್ದವು. ಹೀಗಾಗಿ ಸ್ವತಃ ಪ್ರಧಾನಿಯವರೇ ಸರ್ವಪಕ್ಷಸಭೆಯಲ್ಲಿ ಭಾಗವಹಿಸಿ ವಿಪಕ್ಷಗಳ ನಾಯಕರಿಗೆ ಭರವಸೆ ಕೊಟ್ಟಿದ್ದರು. ಈ ಬಾರಿ ಅತ್ಯಂತ ಗಂಭೀರವಾಗಿ ಅಧಿವೇಶನ ನಡೆಸಬೇಕು. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಆಡಳಿತ ಪಕ್ಷ ಸಿದ್ಧವಿದೆ ಎಂದು ತಿಳಿಸಿದ್ದರು. ಆದರೆ, ಮಹತ್ವಪೂರ್ಣ ಸದನವನ್ನು ಕಾಂಗ್ರೆಸ್‍ನವರು ಕೆಟ್ಟ ರೀತಿಯಲ್ಲಿ ಯತ್ನಿಸಿತು" ಎಂದು ಡಿ.ವಿ. ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.

ಕೃಷಿ ಕಾನೂನುಗಳಿಗೆ ತಿದ್ದುಪಡಿ, ಕೊರೊನಾ ವೈರಸ್ ಸಂಕಷ್ಟದ ಹಾಗೂ ಮಹತ್ವದ ವಿಚಾರಗಳ ಮೇಲೆ ಚರ್ಚೆಗೆ ಕಾಂಗ್ರೆಸ್ ಮುಂದಾಗಲಿಲ್ಲ. ಇದು ಕಾಂಗ್ರೆಸ್ ನಾಯಕರು ಪ್ರಜಾತಂತ್ರಕ್ಕೆ ಮಾಡಿದ ಅಪಮಾನ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗಳಲ್ಲಿ ಗಾಂಭೀರ್ಯತೆ ಇರುವುದಿಲ್ಲ. ಈ ಹಿಂದೆ ರಫೇಲ್ ಚರ್ಚೆಯ ಸಂದರ್ಭದಲ್ಲೂ ಭೌತಿಕ ದಿವಾಳಿತನಕ್ಕೆ ಸಾಕ್ಷಿಯಾದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾಂಗ್ರೆಸ್ ಮಿತ್ರ ಪಕ್ಷದವರು ನಡೆದುಕೊಂಡಿದ್ದರು. ಹಿಂದದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ತಮ್ಮ ಮೇಲೆ ಬೇಹುಗಾರಿಕೆ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ಆಗಿನ ಹಣಕಾಸು ಸಚಿವರೇ ಹೇಳಿದ್ದರು. ಪೆಗಾಸಿಸ್, ಟೂಲ್‍ಕಿಟ್‌ನ ಮುಂದುವರಿದ ಭಾಗ ಇದು ಎಂಬಂತೆ ಬಿಂಬಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ತಪ್ಪು" ಎಂದು ಡಿವಿಎಸ್ ಸ್ಪಷ್ಟನೆ ನೀಡಿದ್ದಾರೆ.

ಇದು ಕಾಂಗ್ರೆಸ್ಸಿಗರ ದೇಶ ಪ್ರೇಮದ ಸಂಕೇತವೆ?

ಇದು ಕಾಂಗ್ರೆಸ್ಸಿಗರ ದೇಶ ಪ್ರೇಮದ ಸಂಕೇತವೆ?

"ಸೈನಿಕರ ಮೇಲೆ ಕಲ್ಲು ತೂರಾಟ, ಜಿಹಾದಿ ಸಾಹಿತ್ಯ ಒದಗಿಸುವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅನುಕೂಲಮಾಡಿಕೊಡುವ ವಿಧೇಯಕಗಳನ್ನು ಕಾಂಗ್ರೆಸ್ಸಿಗರು ವಿರೋಧಿಸುತ್ತಾರೆ. ಸದನದಲ್ಲಿ ಈ ಕಾಯ್ದೆಗಳನ್ನು ಮಂಡಿಸಿದಾಗ ಕಾಂಗ್ರೆಸ್ ವಿರೋಧಿಸಿದ್ದು ದೇಶಪ್ರೇಮದ ಸಂಕೇತವೆ?" ಎಂದು ಡಿ.ವಿ. ಸದಾನಂದ ಗೌಡ ಪ್ರಶ್ನಿಸಿದರು.

"ಶತಮಾನದ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಅತ್ಯಂತ ಕೆಟ್ಟ ದಿನಗಳು ಈಗ ಬರುತ್ತಿವೆ. ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವೇ ಇಲ್ಲದಂತಾಗಿದೆ. ಇನ್ನೊಂದೆಡೆ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿಯೂ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ. ಪರಮೇಶ್ವರ್ ಪ್ರತ್ಯೇಕವಾಗಿ ತಮ್ಮದೇ ಬೆಂಬಲಿಗರ ಜೊತೆ ನಡೆಸುತ್ತಿರುವ ಕಾರ್ಯಾಚರಣೆಗಳು ಮುಂದುವರಿದಿವೆ" ಎಂಬ ಗಂಭೀರ ಆರೋಪವನ್ನು ಡಿವಿಎಸ್ ಮಾಡಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ ಹೊರಗಿಟ್ಟು ಸುರ್ಜೆವಾಲಾ ಸಭೆ!

ಸಿದ್ದರಾಮಯ್ಯ, ಡಿಕೆಶಿ ಹೊರಗಿಟ್ಟು ಸುರ್ಜೆವಾಲಾ ಸಭೆ!

"ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ತುಮಕೂರಿನಲ್ಲಿ ನಡೆದಿದ್ದ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ನ್ನು ಹೊರಗಿಟ್ಟು ಸಭೆ ನಡೆಸಿದ್ದರು. ಅಂತಹ ದಯನೀಯ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ಹುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಾಗಿ ಜೊತೆಗೆ ರಕ್ಷಾ ರಾಮಯ್ಯ ಹಾಗೂ ಮೊಹಮ್ಮದ್ ನಲಪಾಡ್ ಮಧ್ಯದ ಜಟಾಪಟಿಯೂ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ" ಎಂದು ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಗಳನ್ನು ಮಾಜಿನ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಿವರಿಸಿದರು.

"ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಪಕ್ಷವನ್ನು ದುರ್ಬೀನು ಹಿಡಿದು ಹುಡುಕುವಂತಾಗಿದೆ. ಕೇರಳ, ಪುದುಚೇರಿಯಲ್ಲೂ ಇದೇ ಸ್ಥಿತಿ ಇದೆ. ಕಾಂಗ್ರೆಸ್ ತನ್ನೆಲ್ಲವನ್ನೂ ಕಳೆದುಕೊಳ್ಳುವಂತಾಗಿದೆ. ಪಂಜಾಬ್‌ನಲ್ಲೂ ಒಳಜಗಳ ಮುಂದುವರಿದಿದೆ. ಇಷ್ಟಾದರೂ ಕಾಂಗ್ರೆಸ್ಸಿಗರಿಗೆ ಬುದ್ಧಿ ಬಂದಿಲ್ಲ. ಬಿಜೆಪಿ, ಕೋವಿಡ್ ಸಂದರ್ಭದಲ್ಲಿ ಕೊರೊನಾ ಮುಕ್ತ ಭಾರತಕ್ಕಾಗಿ ನಿರಂತರ ಶ್ರಮಿಸುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದವರು ಕೊರೊನಾ ಕಾಲದಲ್ಲಿ ಕೊರೊನಾ ವೈರಸ್‌ ಹರಡಲು ಸಹಾಯವಾಗುವಂತೆ ಕೆಲಸ ಮಾಡಿದರು. ರಾಜಸ್ಥಾನದಲ್ಲಿ ರಾಜ್ಯದ ಸಚಿವರ ಜನ್ಮದಿನ ಆಚರಣೆ ಸಾರ್ವಜನಿಕವಾಗಿ ನಡೆಯಿತು. ಕೇರಳದಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಈದ್ ಆಚರಣೆ ನಡೆಸಲಾಯಿತು. ಅದರ ಪರಿಣಾಮವಾಗಿ ಕೇರಳ ರಾಜ್ಯದಿಂದ ಎಲ್ಲೆಡೆಗೆಬ ಕೊರೊನಾ ಹೋಗುವಂತಾಗಿದೆ" ಎಂಬ ಗಂಭೀರ ಆರೋಪವನ್ನು ಡಿವಿಎಸ್ ಇದೇ ಸಂದರ್ಭದಲ್ಲಿ ಮಾಡಿದ್ದಾರೆ.

ಈಗಲಾದರೂ ಕಾಂಗ್ರೆಸ್ ಸಂಸದರು ಅಧಿವೇಶನದಲ್ಲಿ ಭಾಗವಹಿಸಲಿ!

ಈಗಲಾದರೂ ಕಾಂಗ್ರೆಸ್ ಸಂಸದರು ಅಧಿವೇಶನದಲ್ಲಿ ಭಾಗವಹಿಸಲಿ!

"ಈಗ ನಿಗದಿತ ದಿನಗಳವರೆಗೆ ಲೋಕಸಭಾ ಅಧಿವೇಶನ ನಡೆಯಲಿದೆ. ಉಳಿದಿರುವ ಒಂದು ವಾರವಾದರೂ ಕಾಂಗ್ರೆಸ್ ಸಂಸದರು ಅಧಿವೇಶನದಲ್ಲಿ ಭಾಗವಹಿಸಬೇಕು" ಎಂದು ಮಾಜಿ ಕೇಂದ್ರ ಸಚಿವ ಡಿ.ವಿ. ಸದನಂದಗೌಡ ಕಾಂಗ್ರೆಸ್ ನಾಯಕರಿಗೆ ಆಗ್ರಹಿಸಿದ್ದಾರೆ.

"ರಾಜ್ಯಕ್ಕೆ ಬೇಕಾಗುವ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಮೇಕೆದಾಟು ಯೋಜನೆ ಅನುಷ್ಠಾನದಿಂದ ನೀರಿನ ಸಂಗ್ರಹವೂ ಹೆಚ್ಚಲಿದೆ. ಇದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಆಗದು. ನೆರೆ ನಿಯಂತ್ರಣಕ್ಕೂ ಇದು ಪೂರಕ. ರಾಜ್ಯದ ಎಲ್ಲ 25 ಬಿಜೆಪಿ ಸಂಸದರು ಯೋಜನೆಯ ಅನುಷ್ಠಾನ ಬೆಂಬಲಿಸಲಿದ್ದಾರೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಬಿಜೆಪಿಯ ಎಲ್ಲ 25 ಸಂಸದರೂ ಶ್ರಮಿಸಲಿದ್ದಾರೆ" ಎಂದು ಸದಾನಂದಗೌಡ ಭರವಸೆ ನೀಡಿದರು.

"ಸಂಸತ್ತು ದೇಶದ ಶ್ರದ್ಧಾ ಕೇಂದ್ರವಾಗಿದೆ. ಜನರ ಭಾವನೆಗಳಿಗೆ ಅನುಗುಣವಾಗಿ ತೀರ್ಮಾನ ನಡೆಯಬೇಕೆಂಬ ನಿಟ್ಟಿನಲ್ಲಿ ಈ ಶ್ರದ್ಧಾ ಕೇಂದ್ರ ಕಾರ್ಯ ನಿರ್ವಹಿಸಬೇಕಿದೆ. ಆದರೆ, ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಜನರು ನಿರುದ್ಯೋಗಿಗಳಾದ ಸಂದರ್ಭ, ಉದ್ಯಮಗಳ ಕುಸಿತ, ಭಾರತದ ವೇಗಕ್ಕೆ ಸಣ್ಣ ಮಟ್ಟಿನ ತಡೆ ಉಂಟಾದ ಈ ಸಂದರ್ಭದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೇದಿಕೆ ಇದಾಗಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರು ಎಲ್ಲವನ್ನೂ ಹಾಳುಮಾಡುತ್ತಿದ್ದಾರೆ" ಎಂದು ಡಿವಿ ಸದಾನಂದಗೌಡ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ.

English summary
Former Union Minister Sadananda Gowda urged Congress leaders to attend at least remaining one week parliament session. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X