ಒಂದು ರಾತ್ರಿಗೆ 4.12 ಲಕ್ಷ ರೂ.! ಒಬೆರಾಯ್ ಉದಯವಿಲಾಸ್ ಐಷಾರಾಮಿ ಸೂಟ್ ನೋಡಿ ಬೆರಗಾದ ಯೂಟ್ಯೂಬರ್
ರಾಜಸ್ಥಾನದ ಉದಯಪುರದ ಲೇಕ್ ಪಿಚೋಲಾ ಸರೋವರದ ತೀರದಲ್ಲಿರುವ ಒಬೆರಾಯ್ ಉದಯ ವಿಲಾಸ್ ಈಗ ಮತ್ತೊಮ್ಮೆ ತನ್ನ ಸುಂದರವಾದ ವಿನ್ಯಾಸ ಮತ್ತು ಐಷಾರಾಮಿ ಸೌಲಭ್ಯಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಬಾಲಿವುಡ್ ಜನಪ್ರಿಯ ಸಿನೆಮಾ ಯೇ ಜವಾನಿ ಹೈ ದಿವಾನಿಯಲ್ಲಿ ಕಾಣಿಸಿಕೊಂಡ ಈ ಹೋಟೆಲ್ ಭಾರತದ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಇದು ಒಂದಾಗಿದೆ.
ವಾಕ್ ವಿತ್ ಮಿ ಟಿಮ್(Walk With Me Tim) ಎಂಬ ಬ್ರಿಟಿಷ್ ಕಂಟೆಂಟ್ ಕ್ರಿಯೇಟರ್ ಹಾಗೂ ಯೂಟ್ಯೂಬರ್ ಇತ್ತಿಚಿನ ದಿನಗಳಲ್ಲಿ ಇಲ್ಲಿ ವಾಸ ಉಳಿದುಕೊಂಡಿದ್ದು, ಒಬೆರಾಯ್ ಉದಯ ವಿಲಾಸ್ ಬಗ್ಗೆ ತಮ್ಮ ಅನುಭವವನ್ನು ತಮ್ಮ ಯೂಟ್ಯೂಬ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಹೋಟೆಲ್‌ನ ಅರಮನೆ ಶೈಲಿಯ ವಿನ್ಯಾಸ, ಭವ್ಯವಾದ ಆವರಣ ಮತ್ತು ಖಾಸಗಿ ಸೂಟ್ ರೂಮ್ ಭವ್ಯತೆಯನ್ನು ಬಗ್ಗೆ ವಿವರವಾಗಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ರಾಜಸ್ಥಾನದ ಸಾಂಪ್ರದಾಯಿಕ ವೈಭವ ಮತ್ತು ರಾಜಮಹಲ್‌ಗಳ ವಾಸ್ತುಶಿಲ್ಪ ಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ಈ ಹೋಟೆಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮೇವಾರ್ ಮಹಾರಾಜರ 200 ವರ್ಷಗಳ ಹಳೆಯ ಐತಿಹಾಸಿಕ ಬೇಟೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಐಷಾರಾಮಿ ರೆಸಾರ್ಟ್, ಸುಮಾರು 50 ಎಕರೆಗಳಷ್ಟು ವಿಶಾಲವಾದ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.
ಟಿಮ್ ಅವರು ತಾವು ತಂಗಿದ್ದ ಸೂಟ್‌ನ ಹೋಮ್ ಟೂರ್ ವಿಡಿಯೋ ಮಾಡಿದ್ದಾರೆ. ಅದರಲ್ಲಿ ಖಾಸಗಿ ಸ್ವಿಮ್ಮಿಂಗ್ ಪೂಲ್, ಲಿವಿಂಗ್ ಮತ್ತು ಡೈನಿಂಗ್ ರೂಮ್‌ಗಳನ್ನು ತೋರಿಸಿದ್ದಾರೆ. ರಾಜಮಹಲ್ ಶೈಲಿಯಲ್ಲಿರುವ ಈ ಸೂಟ್‌ನಲ್ಲಿ ಎರಡು ದೊಡ್ಡ ಚಾಂಡಿಲಿಯರ್‌ಗಳು, ಚಿನ್ನದ ಬಣ್ಣದ ಸೋಫಾ ಸೆಟ್ ಮತ್ತು ಹಕ್ಕಿಗಳ ವಿನ್ಯಾಸವಿರುವ ಗೋಡೆಗಳಿವೆ. ಕಿಟಕಿ ಬಳಿ ಇರುವ ಆಸನಗಳ ವ್ಯವಸ್ಥೆ ಈ ಸೂಟ್‌ಗೆ ವಿಶೇಷ ಕಳೆಯನ್ನು ತಂದಿದೆ.
ಈ ಬೆಡ್‌ರೂಮ್‌ನಲ್ಲಿ ನಾಲ್ಕು ಪೋಸ್ಟರ್ ಬೆಡ್, ದೊಡ್ಡ ಟಿವಿ ಮತ್ತು ರಾಜಮಹಲ್ ಶೈಲಿಯ ಹಾಸಿಗೆಯಿದೆ. ಆದರೆ ಈ ಸೂಟ್‌ನಲ್ಲಿ ಎರಡು ಟಾಯ್ಲೆಟ್‌ಗಳಿರುವುದು ಟಿಮ್ ಅವರಿಗೆ ದೊಡ್ಡ ಆಶ್ಚರ್ಯದ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಇಲ್ಲಿನ ವಿಶಾಲವಾದ ಬಾತ್‌ರೂಮ್ ತುಂಬಾ ಲಕ್ಸುರಿಯಾಗಿದ್ದು, ದೊಡ್ಡ ಬಾತ್‌ಟಬ್, ಗೋಲ್ಡ್ ಫಿನಿಷ್ ಟ್ಯಾಪ್‌ಗಳು, ಮರದ ಹ್ಯಾಂಡಲ್ ಹಾಗೂ ಸ್ಟೀಮ್ ಶವರ್‌ನಿಂದ ತಯಾರು ಮಾಡಲಾಗಿದೆ. ಅಷ್ಟೇ ಅಲ್ಲ, ಇಲ್ಲಿಂದ ನೇರವಾಗಿ ಸುಂದರವಾದ ಚಿಕ್ಕ ಖಾಸಗಿ ತೋಟಕ್ಕೂ ಪ್ರವೇಶ ಪಡೆಯಬಹುದು.
ನೇರವಾಗಿ ಬೆಡ್‌ರೂಮ್‌ನಿಂದ ಪ್ರವೇಶಿಸಬಹುದಾದ ಈ ಖಾಸಗಿ ಸ್ವಿಮ್ಮಿಂಗ್ ಪೂಲ್ ಈ ಸೂಟ್‌ನ ವಿಶೇಷತೆಯಾಗಿದೆ. ಅಷ್ಟೇ ಅಲ್ಲದೆ, ಇಲ್ಲಿನ ಸುಂದರ ಗಾರ್ಡನ್ ವೀಕ್ಷಿಸುತ್ತಾ ಸಮಯ ಕಳೆಯಲು ಹೊರಾಂಗಣದಲ್ಲಿ ಡೈನಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಟಿಮ್ ಅವರು ತಂಗಿದ್ದ ಈ ಐಷಾರಾಮಿ ಸೂಟ್‌ನ ಒಂದು ರಾತ್ರಿಯ ಬಾಡಿಗೆ ಅಂದಾಜು ರೂ. 4.12 ಲಕ್ಷ ( £3,234 ) ಆಗಿತ್ತು. ವಿಶೇಷವೆಂದರೆ, ಈ ಪ್ಯಾಕೇಜ್‌ನಲ್ಲಿ ಕೋಣೆಗೆ ತಲುಪಿಸುವ ಉಪಾಹಾರ (ಬ್ರೇಕ್‌ಫಾಸ್ಟ್) ಮತ್ತು ವೈಯಕ್ತಿಕ ಬಟ್ಲರ್ (ಸೇವಕ) ಸೇವೆಯೂ ಸೇರಿತ್ತು ಎಂದು ಅವರು ತಿಳಿಸಿದ್ದಾರೆ.
ಬಟ್ಲರ್ ಸೇವೆ ತುಂಬಾ ಪರ್ಸನಲ್ ಆಗಿರುತ್ತದೆ. ಬೆಳಗಿನ ಊಟದಿಂದ ಹಿಡಿದು ರಾತ್ರಿಯ ಡಿನ್ನರ್, ಡ್ರಿಂಕ್ಸ್ ಮತ್ತು ಸ್ಪೆಷಲ್ ಸರ್ಪ್ರೈಸ್‌ಗಳನ್ನು ಸಹ ಅವರೇ ರೆಡಿ ಮಾಡಿಕೊಡುತ್ತಾರೆ ಎಂದು ಅವರು ವೀಡಿಯೊದಲ್ಲಿ ತಿಳಿಸಿದ್ದಾರೆ.
ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಒಬೆರಾಯ್ ಉದೈವಿಲಾಸ್‌ನ ರಾಜವೈಭೋಗದ ಜೀವನಶೈಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದು ಪ್ರವಾಸಿಗರು ಹಾಗೂ ಐಷಾರಾಮಿ ಹೋಟೆಲ್ ಪ್ರೇಮಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.














Click it and Unblock the Notifications