Sadananda Gowda: ಟಿಕೆಟ್ ಸಿಗದ ಸುಳಿವು ಕೊಟ್ಟ ಡಿವಿಎಸ್: ಮತದಾರರಿಗೆ ಭಾವುಕ ಸಂದೇಶ
ಬೆಂಗಳೂರು, ಮಾರ್ಚ್ 13: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುತ್ತಿದ್ದು, ಈ ಬಾರಿ ಅನೇಕ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ. ಈ ಪೈಕಿ ಮಾಜಿ ಸಿಎಂ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ವಿ ಸದಾನಂದ ಗೌಡರ ಹೆಸರು ಅಭ್ಯರ್ಥಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿದೆ.
ಟಿಕೆಟ್ ಕೈ ತಪ್ಪಿದ ವಿಚಾರ ಚರ್ಚೆಯಲ್ಲಿರುವಾಗಲೇ ಸಂಸದ ಡಿ.ವಿ ಸದಾನಂದ ಗೌಡ ತಮ್ಮ ಪ್ರಸ್ತುತ ಕ್ಷೇತ್ರದ ಮತದಾರರಿಗೆ ಭಾವುಕ ಸಂದೇಶ ನೀಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ,

ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ. ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು" ಎಂದಿದ್ದಾರೆ.
ಇನ್ನು ಡಿ.ವಿ ಸದಾನಂದ ಗೌಡ ಕೆಲವು ತಿಂಗಳ ಹಿಂದೆಯೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. 'ರಾಜಕಾರಣಕ್ಕೆ ಪ್ರವೇಶಿಸಿ 25 ವರ್ಷದ ನಂತರ ಚುನಾವಣಾ ರಾಜಕೀಯದಿಂದ ದೂರ ಆಗಬೇಕೆಂದು ಚಿಂತನೆ ಮಾಡಿರುವೆ. ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಈ ಬಾರಿ ಆರು ತಿಂಗಳ ಮುನ್ನವೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದೇನೆ. ಇದರಿಂದ ಪಕ್ಷಕ್ಕೆ ಹೊಸಬರನ್ನು ಹುಡುಕಲು ಅನುಕೂಲವಾಗಲಿದೆ' ಎಂದು ತಿಳಿಸಿದ್ದರು.
ಆದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ, 'ನಾನು ಬೆಂಗಳೂರು ಉತ್ತರ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಕೊಡದಿದ್ದರೆ ನೋವಾಗುತ್ತದೆ. ಇನ್ನೂ 10 ವರ್ಷ ರಾಜಕೀಯ ಮಾಡುವ ಕನಸು ನನ್ನಲ್ಲಿದೆ' ಎಂದು ಸದಾನಂದ ಗೌಡ ಹೇಳಿದ್ದರು. ಈ ಹೇಳಿಕೆ ಗೊಂದಲ ಸೃಷ್ಟಿಸಿತ್ತು.
ಹೀಗಿದ್ದರೂ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಸದಾನಂದ ಗೌಡ ಹೆಸರನ್ನು ವರಿಷ್ಠರ ಮುಂದೆ ರಾಜ್ಯ ನಾಯಕರು ಪ್ರಸ್ತಾಪ ಮಾಡಿದ್ದರು. ಈ ವೇಳೆ ಬಿಜೆಪಿ ಹೈಕಮಾಂಡ್ 'ಸದಾನಂದ ಗೌಡರು ಸ್ಪರ್ಧೆ ಬಯಸುವುದಾದರೆ ಅಂದು ಚುನಾವಣಾ ನಿವೃತ್ತಿಯ ಬಗ್ಗೆ ಮಾತನಾಡಿದ್ದೇಕೆ' ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications